

ಕಾಲೇಜಿನಲ್ಲಿ ಎತ್ನಿಕ್ ಡೇ. ಎಲ್ಲರೂ ಸೀರೆ ಉಟ್ಟುಕೊಂಡು ಬರುವುದೆಂದು ನಿರ್ಧಾರವಾಗಿತ್ತು. ಮೊದಲ ಬಾರಿಗೆ ಸೀರೆಯುಡುವ ಸಂಭ್ರಮ. ಬೆಳಿಗ್ಗೆ ಆರಕ್ಕೇ ಎದ್ದು ಸ್ನಾನ ಮಾಡಿ ಸೀರೆಯುಡಲು ಪ್ರಾರಂಭಿಸಿದ್ದೆ. ಆದರೆ ಅಮ್ಮನ ಬಳಿ ಬಯ್ಯಿಸಿಕೊಂಡು ಚುಚ್ಚಿಸಿಕೊಂಡು ಸೀರೆಯುಡಲು ಕಲಿತದ್ದೆಲ್ಲಾ ಮರೆತೇ ಹೋಗಿತ್ತು.
ಒಂದು ಕಡೆಯಿಂದ ಉಡುತ್ತಿದ್ದಂತೆ ಇನ್ನೊಂದು ಕಡೆಯಿಂದ ಬಿಚ್ಚಿ ಹೋಗುತ್ತಿತ್ತು. ನೆರಿಗೆ ಮಾಡುವುದು ಸರಿಯಾಗಿಲ್ಲವೆಂದು ಬಿಚ್ಚುವುದು. ಹೀಗೇ ಮಾಡುತ್ತಾ ಒಂದು ತಾಸು ಕಳೆದದ್ದೇ ಗೊತ್ತಾಗಲಿಲ್ಲ. ಪಿನ್ನಿನ ಗೊಂಚಲು ಖಾಲಿಯಾಗುತ್ತಾ ಬಂದರೂ ಸೀರೆ ಅರ್ಧದಷ್ಟೂ ಉಟ್ಟು ಮುಗಿದಿರಲಿಲ್ಲ. ಬಹುಶಃ ಸೀರೆಯೇ ಸರಿಯಿಲ್ಲ, ಜಾರೋ ತರಹದ ಸೀರೆ ಇದು ಎಂದು ನನಗೆ ನಾನೇ ಸಮಾಧಾನ ಪಟ್ಟುಕೊಂಡೆ.
ಸೆರಗನ್ನು ಹಾಕುವಾಗಲೂ ಒಂದು ಬಾರಿ ಸೆರಗು ಗಿಡ್ಡವಾಯಿತೆಂದು ಬಿಚ್ಚಿದರೆ, ಇನ್ನೊಂದು ಬಾರಿ ಇಷ್ಟೊಂದು ಉದ್ದ ಸೆರಗಾಯಿತಲ್ಲ ಎಂದು ಸರಿಪಡಿಸುವುದು. ಗಡಿಯಾರದ ಮುಳ್ಳು ಸರಸರನೇ ಓಡುತ್ತಿತ್ತು. ಇಷ್ಟು ಸಾಕು ಎಂದು ಹೇಗೋ ಸೀರೆ ಉಟ್ಟು ಹತ್ತಿಪ್ಪತ್ತು ಬಾರಿ ಕನ್ನಡಿಗೆ ತೋರಿಸಿ ಕಾಲೇಜಿಗೆ ಹೊರಟು ನಿಂತೆ.
ಹೊರಗೆ ಹೋಗುತ್ತಿದ್ದಂತೆ ಸೀರೆ ಉಟ್ಟು ನಡೆಯಲು ಬಾರದ ಸಂಕಟ. ಹೆಜ್ಜೆ ಮೇಲೆ ಹೆಜ್ಜೆ ಎತ್ತಿ ಇಡುತ್ತಾ ಹೋಗುತ್ತಿದ್ದರೆ, ಒಮ್ಮೆ ಸೀರೆ ಕಾಲಿಗೆ ಸಿಲುಕಿ ದೊಪ್ಪೆಂದು ಅಲ್ಲೇ ಸಣ್ಣಗೆ ಬಿದ್ದೆ. ಅಬ್ಬ ಪುಣ್ಯ ಯಾರೂ ನೋಡಿಲ್ಲ ಎಂದು ಮತ್ತೆ ಹೆಜ್ಜೆ ಮೇಲೆ ಹೆಜ್ಜೆ ಹಾಕುವ ತಾಲೀಮು ಮಾಡುತ್ತ ಕಾಲೇಜು ತಲುಪಿದ್ದೂ ಆಯಿತು. ಒಂದಷ್ಟು ಜನರ ಕಣ್ಣುಗಳು ನನ್ನ ಮೇಲಿದ್ದರೆ ನನಗೋ, ಇವರೆಲ್ಲಾ ಯಾಕೆ ಹಿಂಗೆ ನೋಡ್ತಾ ಇದ್ದಾರೆ, ಎಲ್ಲಾದ್ರೂ ಏನಾದ್ರೂ ತಪ್ಪಾಗಿದೆಯಾ ಎಂಬ ಆತಂಕ. ಸೀರೆಯನ್ನೆಲ್ಲಾ ಇನ್ನೊಮ್ಮೆ ವೀಕ್ಷಿಸಲು ಶುರುಮಾಡಿದೆ. ಆದರೂ ಸಮಾಧಾನವಿಲ್ಲ. ಒಂದು ಬಾರಿ ಲೇಡೀಸ್ ರೂಂಗೆ ಹೋಗಿ ಕನ್ನಡಿಯ ಮುಂದೆ ಇವಾಲ್ಯುವೇಶನ್ ಮಾಡಿ ಬಂದಿದ್ದೂ ಆಯಿತು.
ಆಚೆ ಈಚೆ ಹೆಚ್ಚು ಓಡಾಡಲೂ ಹೆದರಿಕೆ, ಎಲ್ಲಾದರೂ ಎಡವಿ ಬಿದ್ದರೆ ನಗುತ್ತಾರಲ್ಲ ಅಂತ. ಅದಕ್ಕಿಂತ ಹೆಚ್ಚಾಗಿ ಯಾಕೋ ಸೀರೆ ಜಾರಿ ಬಿದ್ದುಬಿಟ್ಟರೆ ಎಂಬಂತಹ ಭಯಂಕರ ಭಯ. ಹೇಗೆ ಕೂತರೂ ಸರಿಯಾಗುತ್ತಿಲ್ಲವೆಂಬ ಭಾವ. ಯಪ್ಪಾ, ಈ ಅಮ್ಮಂದಿರು ಹೆಂಗೆ ಇಡೀ ದಿನ ಸೀರೆ ಉಟ್ಕೊಂಡಿರ್ತಾರೋ ಎಂದು ಆವತ್ತು ಅನಿಸಿದ್ದು ಸುಳ್ಳಲ್ಲ. ಈ ನೆರಿಗೆ ಎಷ್ಟು ನೀವಿದರೂ ಸರಿಯಾಗಿ ಕೂರುತ್ತಿಲ್ಲವಲ್ಲ, ಇನ್ನುಳಿದವರೆಲ್ಲ ಎಷ್ಟು ಚಂದ ಉಟ್ಕೊಂಡಿದ್ದಾರೆ ಎಂಬ ಸಣ್ಣ ಬೇಸರ. ಯಾರೇ ಸ್ವಲ್ಪ ದುರುದುರು ನೋಡಿದರೂ ಕಣ್ಣು ಕಿತ್ತು ಹಾಕಬೇಕೆಂದು ಅನಿಸುತ್ತಿತ್ತು. ನನ್ನ ಸೀರೇನೇ ಸರಿಯಿಲ್ಲ, ಅದಿಕ್ಕೇ ಉಟ್ಕೊಂಡಿದ್ದು ಸರಿಯಾಗಲಿಲ್ಲವೆಂಬ ಸಮಜಾಯಿಷಿ.
ಸಾಕಪ್ಪಾ ಈ ಸೀರೆಯ ಸಹವಾಸ ಎಂದು ಅನಿಸುತ್ತಿದ್ದರೆ, ಅತ್ತ ನಿಂಗೆ ಪ್ರತೀ ದಿನ ಸೀರೆ ಉಟ್ಕೋ ಅಂತ ಹೇಳೋ ಗಂಡ ಸಿಗಲಿ ಎಂದು ವರ ನೀಡುತ್ತಿದ್ದ ಗೆಳತಿ. ಸೀರೆ ಬಿಚ್ಚಿ ನೈಟ್ಡ್ರೆಸ್ ಹಾಕ್ಕೊಂಡ್ರೆ ಅದರಷ್ಟು ಸುಖ ಇನ್ಯಾವುದ್ರಲ್ಲೂ ಇಲ್ಲ ಎಂದೆನಿಸುತ್ತಿತ್ತು. ಕಾಲೇಜಿನಿಂದ ಹಿಂತಿರುಗಿ ಬರುವಾಗ ದೇವ್ರೇ ಪಿಜಿ ತಲುಪುವವರೆಗಾದರೂ ಸೀರೆ ಬಿಚ್ಚದೇ ಇರಲಿ ಎಂಬ ಪ್ರಾರ್ಥನೆ.
ಎಲ್ಲಾ ಸಂಕೋಚ, ಭಯಗಳ ನಡುವೆಯೂ ಸೀರೆ ಒಂಥರ ಖುಷಿ ಕೊಟ್ಟಿತ್ತು. ಅರೆ ಮೊನ್ನೆ ಮೊನ್ನೆಯಷ್ಟೇ ಅಮ್ಮನ ಸೆರಗನ್ನು ಹಿಡಿದುಕೊಂಡೇ ಬೆಳೆದೆನಲ್ಲಾ, ಇಷ್ಟು ಬೇಗ ಸೀರೆ ಉಡುವಷ್ಟು ದೊಡ್ಡವಳಾಗಿಬಿಟ್ಟೆನಾ ಎಂಬ ಭಾವ.