ಐ ಆ್ಯಮ್ ಸ್ಯಾರಿ

ಐ ಆ್ಯಮ್ ಸ್ಯಾರಿ
Updated on: 

ದೇವರು ತುಂಬಾ ಶ್ರದ್ಧೆಯಿಂದ ಸೃಷ್ಟಿ ಮಾಡಿದ ಜೀವ ಹೆಣ್ಣು. ಅವರ ಸೌಂದರ್ಯ ಹೆಚ್ಚುವುದು ಉಡುಗೆ-ತೊಡುಗೆಗಳಿಂದ. ಅದರಲ್ಲೂ ಭಾರತೀಯ ನಾರಿಯರು ವಿಶ್ವದಲ್ಲೇ ಅತಿ ಚೆಲುವೆಯರು. ಇದಕ್ಕೆಲ್ಲಾ ಕಾರಣ ಅವರ ಅಂದ ಹೆಚ್ಚಿಸುವ ಸೀರೆಯಂತೆ.
ಸೀರೆಯುಟ್ಟ ನಾರಿಯನ್ನು ನೋಡುವುದೇ ಕಣ್ಣಿಗೆ ಹಬ್ಬ. ಜನಪದ ಗೀತೆಗಳಲ್ಲಿ, ಭಾರತೀಯ ಚಿತ್ರಗಳಲ್ಲಿ ಸೀರೆಯ ಮೇಲೆ ಹಲವಾರು ಹಾಡುಗಳೇ ಬಂದಿವೆ. ಸೀರೆಯ ತನ್ನ ಹವಾನೇ ಅಂಥದ್ದು. ಆದರೆ ಈಗೀಗ ಯಾವುದೋ ಸಭೆ ಸಮಾರಂಭಗಳಿಗಷ್ಟೇ ಸೀಮಿತವಾಗಿದೆ ಸೀರೆ. ಅಂದಹಾಗೆ, ಈ ಸೀರೆಯಲ್ಲೂ ಅದೆಷ್ಟು ವೆರೈಟಿಗಳಿವೆ ಗೊತ್ತಾ?
ಬನಾರಸಿ ಸೀರೆ
ಭಾರತದ ವಾರಣಾಸಿಯಲ್ಲಿ ತಯಾರಾಗುವ ಈ ಸಾರಿಗೆ ಚಿನ್ನ ಹಾಗೂ ಬೆಳ್ಳಿಯ ಕಸೂತಿ ಮಾಡಲಾಗುತ್ತದೆ. ಇದರಿಂದ ಇದಕ್ಕೆ ಸಾಂಪ್ರದಾಯಿಕ ಲುಕ್‌ನ ಜೊತೆ ಜೊತೆಗೆ ಗೌರವವೂ ದೊರೆಯುತ್ತದೆ.
ರೇಶ್ಮೆ ಸೀರೆ
ಸಿಲ್ಕ್ ಸೀರೆಗಳು ತಮ್ಮ ಬಣ್ಣ ಹಾಗೂ ನೇಯ್ಗೆಯಿಂದ ಖ್ಯಾತಿ ಪಡೆದಿವೆ. ಮದುವೆ ಹಾಗೂ ಹಬ್ಬಗಳಿಗೆ ವಿಶೇಷ ಮೆರಗು ನೀಡುತ್ತವೆ. ಇದರಲ್ಲಿ ಮೈಸೂರ್ ಸಿಲ್ಕ್ ಹಾಗೂ ಕಾಂಚೀಪುರಂ ಸಿಲ್ಕ್ ಸೀರೆಗಳು ಅಗ್ರ ಸ್ಥಾನ ಹೊಂದಿದೆ.
ಸಂಬಲ್ಪುರಿ
ಒರಿಸ್ಸಾದಲ್ಲಿ ಜನ್ಮ ಪಡೆದ ಈ ಸೀರೆಗಳು ಅಪ್ಪಟ ಕೈಮಗ್ಗದಿಂದ ತಯಾರಾಗುತ್ತವೆ. ಇದರಲ್ಲಿ 4ರಿಂದ 9 ಮೀ. ಡಿಸೈನ್‌ಗಳಿದ್ದು ವಿವಿಧ ಶೈಲಿಯಲ್ಲಿ ಉಡಬಹುದಾದ ಸೀರೆಯಿದು. ಇದನ್ನು ಪ್ರಾದೇಶಿಕ ಭಾಷಿಯಲ್ಲಿ ಶಾದಿ ಎಂದೂ ಕರೆಯುತ್ತಾರೆ
ಶಿಫಾನ್ ಸೀರೆ
ಇದೊಂಥರಾ ಟ್ರೆಂಡಿ ಲುಕ್ ಕೊಡೋ ಸ್ಯಾರಿ. ಹಗುರವಾಗಿದ್ದು, ತುಂಬಾ ಬಣ್ಣಗಳಲ್ಲಿ ದೊರೆಯುವ ಇದನ್ನು ಕಾಟನ್, ಸಿಂತೆಟಿಕ್ ಹಾಗೂ ಸಿಲ್ಕ್‌ನಿಂದ ಮಾಡಲಾಗುತ್ತದೆ. ಈಗಿನ ಯುವತಿಯರಿಗೆ ಬಹು ಪ್ರಿಯವಾದ ಸ್ಯಾರಿಯಿದು.
ಜಾರ್ಜೆಟ್ ಸೀರೆ
ಮನಮೋಹಕ ಪ್ರಿಂಟೆಡ್ ಡಿಸೈನ್‌ಗಳಿಂದ ಹೆಸರು ಮಾಡಿದ ಈ ಸೀರೆಯನ್ನು ಎಲ್ಲ ಶೈಲಿಯಲ್ಲೂ ಉಡಬಹುದಾಗಿದೆ. ಎಲ್ಲಾ ವಯಸ್ಸಿನವರಿಗೂ ಹೇಳಿ ಮಾಡಿಸಿದ ಸೀರೆಯಿದು.
ನೆಟ್ಟೆಡ್ ಸೀರೆ
ಆಲ್‌ಟೈಮ್ ಫೇವರೈಟ್ ಸೀರೆಯಿದು. ಉಟ್ಟವರಿಗೆ ಹಾಟ್ ಮತ್ತು ಗ್ಲಾಮರಸ್ ಲುಕ್ ಕೊಡುತ್ತದೆ. ಸೊಳ್ಳೆಪರದೆಯಂತಾ ಸೆರಗೋ, ಮೈಯ್ಯೋ ಇದ್ದು ಗ್ರ್ಯಾಂಡ್ ಕಾಣುವುದಲ್ಲದೆ ಫ್ಯಾಷನೇಬಲ್ ಆಗಿರುತ್ತದೆ.
ಬಾಂದಿನಿ ಸೀರೆ
ಇದು ರಾಜಸ್ಥಾನ್ ಹಾಗೂ ಗುಜರಾತ್‌ನ ಸಾಂಪ್ರದಾಯಿಕ ಉಡುಗೆ. ಬಣ್ಣ ಬಣ್ಣಗಳಲ್ಲಿ ಲಭ್ಯವಿದ್ದು, ದೈನಂದಿನ ಉಡುಗೆಯಾಗಿ ಬಹು ಚೆನ್ನಾಗಿ ಕಾಣುತ್ತದೆ.
ಇಳಕಲ್ ಸೀರೆ
ಬಾಗಲಕೋಟೆಯ ಇಳಕಲ್‌ನಲ್ಲಿ ತಯಾರಾಗುವ ಈ ಸೀರೆ ಹಳ್ಳಿಯ ಜನರಿಗೆ ಬಹುಪ್ರಿಯ. ಸಂಪೂರ್ಣ ಕೈಮಗ್ಗದಿಂದಲೇ ತಯಾರಾಗುವ ಈ ಸೀರೆಗಳು ಉತ್ತಮ ಕಾಟನ್ ಬಟ್ಟೆಗಳಾಗಿರುತ್ತವೆ.

ಮೊಳಕಾಲ್ಮೂರು ಸೀರೆ
ಚಿತ್ರದುರ್ಗದಲ್ಲಿ ತಯಾರಾಗುವ ಈ ಸೀರೆಯಲ್ಲಿರುವ ಅತ್ಯಾಧುನಿಕ ಡಿಸೈನ್‌ಗಳು ರೇಶ್ಮೆ ಸೀರೆಯನ್ನು ಹೋಲುವುದರಿಂದ ಸಾಂಪ್ರದಾಯಿಕ ಸಭೆಸಮಾರಂಭಗಳಿಗೆ ಹೇಳಿ ಮಾಡಿಸಿದವು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com