ಜನಕ ಮಹಾರಾಜ

ಅವನ ಕಿರುಬೆರಳು ಹಿಡಿದು ನಡೆವಾಗ ಸಿಗುವ ಧೈರ್ಯ, ದೊಡ್ಡ ಚಪ್ಪಲಿಯೊಳಗೆ ನಮ್ಮ ಪುಟ್ಟ ಕಾಲು ತುರುಕಿ ಓಡಾಡುವಾಗ ಸಿಗುವ ಖುಷಿ, ಎದೆಗೊರಗಿ ನಿದ್ರಿಸುವಾಗ ಸಿಗುವ ಸಂತೃಪ್ತಿ... ಆಹ್!
ಅವನಿಗೆ ಅಮ್ಮನಂತೆ ಮುದ್ದು ಮಾಡಲು ಬರುವುದಿಲ್ಲ, ಆದರೆ ಪ್ರೀತಿಕಾಳಜಿ ಇಲ್ಲದಿಲ್ಲ. ತನ್ನ ಪ್ರೀತಿಯನ್ನು ವ್ಯಕ್ತಪಡಿಸುವಲ್ಲಿ ಆತ ಕಂಜೂಸ್ ಇರಬಹುದು, ಆದರೆ ಮಕ್ಕಳ ಏಳ್ಗೆಯ ಬಗ್ಗೆ ಸದಾ ಚಿಂತಿತನಾಗಿರುತ್ತಾನೆ. ಅಪ್ಪ ಅಂದ್ರೆ ಆಕಾಶ!
ಜಗತ್ತು ಹಿರಿದಾಗುತ್ತಿದ್ದಂತೆ ಸಂಸಾರಗಳು ಕಿರಿದಾಗುತ್ತಿದೆ. ಅಪ್ಪ- ಅಮ್ಮ ಮಕ್ಕಳ ಸಂಬಂಧಗಳಲ್ಲಿಯೂ ಬದಲಾವಣೆಗಳು ಕಾಣತೊಡಗಿವೆ. ಈಗ ಮಗುವೊಂದಕ್ಕೆ ತಂದೆ ಇಲ್ಲವೇ ತಾಯಿಯಾಗಲು ಮದುವೆಯೇ ಆಗಬೇಕೆಂದಿಲ್ಲ. ಅದರಲ್ಲೂ ಹೆಣ್ಣು ಬಸುರಿ, ಹೆರಿಗೆ, ಬಾಣಂತನ ಅನುಭವಿಸದೆಯೇ ಮಗುವಿಗೆ ಅಮ್ಮನಾಗಬಹುದು. ಅವಿವಾಹಿತನಾಗಿದ್ದುಕೊಂಡೇ ಮಗುವೊಂದನ್ನು ದತ್ತು ಪಡೆದು ಪುರುಷನೊಬ್ಬ ಅಪ್ಪನಾಗಬಹುದು!
ಯೆಸ್, ಅದೇ ಸಿಂಗಲ್ ಮದರ್, ಸಿಂಗಲ್ ಫಾದರ್ ಪದ್ಧತಿ. ಇಂಥಾ ಪದ್ಧತಿಗಳ ಉಗಮ ಸ್ಥಾನ ಪಾಶ್ಚಾತ್ಯ ದೇಶಗಳೇ ಆಗಿದ್ದರೂ, ಕ್ರಮೇಣ ಇದು ಭಾರತಕ್ಕೂ ಕಾಲಿಟ್ಟಿದೆ. ಭಾರತದಲ್ಲಿ ಕಾಯ್ದೆ ಪ್ರಕಾರ ಮಹಿಳೆ ಅಥವಾ ದಂಪತಿಗೆ ಮಾತ್ರ ಮಕ್ಕಳನ್ನು ದತ್ತು ಪಡೆವ ಹಕ್ಕಿದೆ. ಇಲ್ಲಿ ಅವಿವಾಹಿತ ಮಹಿಳೆ ಮಗುವೊಂದನ್ನು ದತ್ತು ಪಡೆಯಬಹುದೇ ವಿನಾ ಅವಿವಾಹಿತ ಪುರುಷ ದತ್ತು ಪಡೆಯುವಂತಿಲ್ಲ!
ಮದುವೆ, ಕುಟುಂಬದ ಕಟ್ಟು ಪಾಡುಗಳಿಗೆ ಬಂಧಿಯಾಗದೆ ಅವಿವಾಹಿತರಾಗಿಯೇ ಉಳಿದುಕೊಂಡು ಮಗುವೊಂದರ ಅಪ್ಪನಾಗುವುದು ಅಷ್ಟು ಸುಲಭದ ಮಾತಲ್ಲ. ಮಗುವಿನ ಪಾಲನೆ ಪೋಷಣೆ ಆರೈಕೆ ಎಲ್ಲವನ್ನೂ ಹೆಣ್ಣೊಬ್ಬಳ ಸಹಾಯವಿಲ್ಲದೆ ಮಾಡುವುದು ಅವಿವಾಹಿತ ಪುರುಷನಿಗೆ ಸಾಧ್ಯವಾ? ಎಂಬ ಹುಬ್ಬೇರಿಸುವ ಪ್ರಶ್ನೆಗೆ ಉತ್ತರವಾದವರು ಈ ಸಿಂಗಲ್ ಫಾದರ್ಗಳು.
ಸಿಂಗಲ್ ಫಾದರ್ಗಳ ಲೋಕ
ಹಾಲಿವುಡ್ನಲ್ಲಿ ಟ್ರೆಂಡ್ ಎಂಬಂತೆ ಅವಿವಾಹಿತ ಪುರುಷರು ಮಕ್ಕಳನ್ನು ದತ್ತು ಪಡೆದು ಸಿಂಗಲ್ ಫಾದರ್ಗಳಾಗಿ ಬಡ್ತಿ ಪಡೆಯುತ್ತಿದ್ದಾರೆ. ಆದರೆ ಭಾರತದಲ್ಲಿ ಸಿಂಗಲ್ ಫಾದರ್ಗಳಾಗುವುದು ಕಷ್ಟವೇ. ಮಗುವೊಂದರ ಆರೈಕೆ, ಪಾಲನೆ, ಪೋಷಣೆ ಮಾಡಲು ಶಕ್ತ ಎಂದು ಕಾನೂನಿಗೆ ಮನವರಿಕೆ ಮಾಡಿಕೊಡುವುದು ಬಹಳ ಕಷ್ಟದ ಕೆಲಸ. ಆದಾಗ್ಯೂ, 2007ರಲ್ಲಿ ಖ್ಯಾತ ಕೊರಿಯೋಗ್ರಾಫರ್ ಸಂದೀಪ್ ಸೊಪಾರ್ಕರ್ ಗಂಡು ಮಗುವೊಂದನ್ನು ದತ್ತು ಪಡೆಯುವ ಮೂಲಕ ಭಾರತದ ಮೊದಲ ಸಿಂಗಲ್ ಫಾದರ್ ಎನಿಸಿಕೊಂಡರು. ಅವಿವಾಹಿತನಾಗಿರುವ ಸಂದೀಪ್ ಸೊಪಾರ್ಕರ್ ಮಗುವೊಂದನ್ನು ದತ್ತು ಪಡೆಯುವುದಕ್ಕಾಗಿ ಹೋರಾಟ ಮಾಡಿದ್ದು ಬರೋಬ್ಬರಿ ನಾಲ್ಕು ವರ್ಷ! ಈ ನಾಲ್ಕು ವರ್ಷಗಳಲ್ಲಿ ಆತನ ಬ್ಯಾಂಕ್ ಬ್ಯಾಲೆನ್ಸ್, ಆರೋಗ್ಯ ಪರೀಕ್ಷೆ ಇನ್ನಿತರ ತಪಾಸಣೆಗಳನ್ನು ಮಾಡಿಸಿ ಎಲ್ಲದಕ್ಕೂ ಓಕೆ ಸರ್ಟಿಫಿಕೇಟ್ ಸಿಕ್ಕಿದ್ದು ಹರಸಾಹಸದಲ್ಲಿ.
ಸಿಂಗಲ್ ಮದರ್ಗಳಂತೆಯೇ ಸಿಂಗಲ್ ಫಾದರ್ ಕೂಡಾ. ಇಲ್ಲಿ ಅಂಥಾ ದೊಡ್ಡ ವ್ಯತ್ಯಾಸಗಳೇನೂ ಇರುವುದಿಲ್ಲ ಅಂತಾರೆ ಸಂದೀಪ್. ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ ಸಂದೀಪ್, ಮಗುವಿನ ಅಪ್ಪನಾದ ಮೇಲೆ ನಾನು ತುಂಬಾ ಜವಾಬ್ದಾರಿಯುತ ಹಾಗು ಶಿಸ್ತಿನ ವ್ಯಕ್ತಿಯಾಗಿದ್ದೇನೆ ಎನ್ನುತ್ತಾರೆ.
ಇತ್ತೀಚಿಗೆ ಅವಿವಾಹಿತ ಪುರುಷರು ಮಕ್ಕಳನ್ನು ದತ್ತು ಪಡೆಯುವಲ್ಲಿ ಆಸಕ್ತಿ ತೋರುತ್ತಿದ್ದಾರೆ. ಗಂಡು ಮಕ್ಕಳನ್ನು ಮಾತ್ರ ದತ್ತು ಪಡೆದುಕೊಳ್ಳಬಹುದು. ವರ್ಷಗಳ ಹಿಂದೆ ಕಿರುತೆರೆ ಕಲಾವಿದ ರಾಜೀವ್ ಕಂಡೇಲ್ವಾಲ್ ಹೆಣ್ಣು ಮಗುವೊಂದನ್ನು ದತ್ತು ಪಡೆಯಲು ಹಂಬಲಿಸಿದ್ದು, ಅವರಿಗೆ ಅನುಮತಿ ನಿರಾಕರಿಸಲಾಗಿತ್ತು. ಮಂಬೈ ಹಾಗೂ ಚೆನ್ನೈ ನ್ಯಾಯಾಲಯಗಳಲ್ಲಿ ಮಕ್ಕಳನ್ನು ದತ್ತು ಪಡೆಯಲು ಬಯಸಿ ಅವಿವಾಹಿತ ಪುರುಷರು ಸಲ್ಲಿಸಿದ ಹಲವಾರು ಅರ್ಜಿಗಳು ಇನ್ನೂ ಹಾಗೇ ಬಾಕಿ ಉಳಿದುಕೊಂಡಿವೆ.
ಮೈ ಡ್ಯಾಡಿ ಸ್ಟ್ರಾಂಗೆಸ್ಟ್!
ಒಂದು ಮಗುವಿನ ಆರೈಕೆ, ಬೇಕು ಬೇಡಗಳನ್ನು ಪೂರೈಸಲು, ಅವರ ಮನಸ್ಸನ್ನು ಅರಿತುಕೊಳ್ಳಲು ಹೆಣ್ಣಿನಿಂದ ಸಾಧ್ಯ. ಆದರೆ ಮಹಿಳೆಯೊಬ್ಬಳು ಅಮ್ಮನಾಗಿ ನಿರ್ವಹಿಸುವ ಕೆಲಸಗಳನ್ನು ಒಬ್ಬ ಪುರುಷನಿಂದ ಮಾಡಲು ಸಾಧ್ಯವೆ? ಸಿಂಗಲ್ ಫಾದರ್ ವಿಷಯಕ್ಕೆ ಬಂದಾಗ ಇಂಥಾ ಪ್ರಶ್ನೆಗಳು ಎದುರಾಗುವುದು ಸಹಜ. ಆದರೆ ಹೆಣ್ಣೊಬ್ಬಳು ಸಿಂಗಲ್ ಮದರ್ ಆದಾಗ ಅಲ್ಲಿ ಅಪ್ಪನ ಸ್ಥಾನವನ್ನು ಹೇಗೆ ನಿಭಾಯಿಸುತ್ತಾಳೋ, ಅದೇ ರೀತಿ ನಾವೂ ಮಗುವಿಗೆ ಅಪ್ಪನ ಜತೆಗೆ ಅಮ್ಮನ ಮಮತೆಯನ್ನೂ ನೀಡುತ್ತೇವೆ ಎಂಬುದು ಸಿಂಗಲ್ ಫಾದರ್ಗಳ ದಿಟ್ಟ ನುಡಿ.
ಆದರೆ ಭಾರತೀಯ ಸಮಾಜ ಸಿಂಗಲ್ ಮದರ್ಗಳನ್ನು ಒಪ್ಪಿಕೊಂಡಂತೆ ಸಿಂಗಲ್ ಫಾದರ್ಗಳನ್ನು ಒಪ್ಪಿಕೊಳ್ಳೋಕೆ ಇನ್ನೂ ರೆಡಿಯಾಗಿಲ್ಲ. ಹೆಂಗಸರಷ್ಟು ತಾಳ್ಮೆ ಗಂಡಸರಿಗೆ ಇರಲ್ಲ. ಮಗುವನ್ನು ಯಾವಾಗ ಮುದ್ದಿಸಬೇಕು? ಯಾವಾಗ ದಂಡಿಸಬೇಕು ಎಂಬುದು ಗಂಡಸರಿಗೆ ಗೊತ್ತಿರಲ್ಲ. ತಮ್ಮ ಜೀವನದ ಜತೆ ಮಕ್ಕಳ ಜೀವನವನ್ನೂ ಬ್ಯಾಲೆನ್ಸ್ ಮಾಡಿಕೊಂಡು ಹೋಗುವಲ್ಲಿ ಗಂಡಸರು ಎಡವುತ್ತಾರೆ. ಆದ್ದರಿಂದಲೇ ಭಾರತದಲ್ಲಿ ಸಿಂಗಲ್ ಫಾದರ್ಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುವುದಿಲ್ಲ ಅಂತಾರೆ ತಜ್ಞರು.
ಮಗು ಎಲ್ಲವನ್ನೂ ಕಲಿತುಕೊಳ್ಳುವ ಹಂತಕ್ಕೆ ಬಂದಾಗ ಅಮ್ಮ ಎಲ್ಲಿ ಎಂಬ ಪ್ರಶ್ನೆ ಕಾಡತೊಡಗುತ್ತದೆ. ಆಗ ಮಗುವಿನ ಪ್ರಶ್ನೆಗೆ ನೀವು ಯಾವ ರೀತಿ ಉತ್ತರ ಕೊಡುತ್ತೀರಿ? ಸಮಾಜದಲ್ಲಿ ಮಗುವನ್ನು ಹೇಗೆ ಬೆಳೆಸುತ್ತೀರಿ? ಆ ಮಗುವಿಗೆ ಯಾವ ರೀತಿಯ ರಕ್ಷಣೆ ನೀಡುತ್ತೀರಿ? ನಿಮ್ಮ ಮಕ್ಕಳು ಸೇಫ್ ಆಗಿದ್ದಾರೆ ಎಂಬ ಭಾವನೆಯನ್ನು ಅವರಲ್ಲಿ ಮೂಡಿಸುವುದು ಮುಖ್ಯವಾಗುತ್ತದೆ ಅಂತಾರೆ ಖ್ಯಾತ ಮಕ್ಕಳ ಮನೋರೋಗ ತಜ್ಞ ಪುಣೆಯ ಡಾ.ಭೂಷಣ್ ಶುಕ್ಲಾ.
ಬಾಡಿಗೆ ತಾಯಿಯಿಂದಲೂ ಮಗು ಪಡೆಯಬಹುದು
ಸಿಂಗಲ್ ಫಾದರ್ ಆಗಲು ಇಚ್ಛಿಸುವ ಪುರುಷರು ದತ್ತು ಪಡೆಯುವ ಮೂಲಕ ಮಾತ್ರ ಅಲ್ಲ, ಬಾಡಿಗೆ ತಾಯಿ ಮೂಲಕವೂ ಮಗುವನ್ನು ಪಡೆದು ಅಪ್ಪನಾಗಬಹುದು. ಬಾಡಿಗೆ ತಾಯಂದಿರ ಮೂಲಕ ತಮ್ಮದೇ ಮಗುವನ್ನು ಪಡೆಯಬಹುದು ಎಂಬ ಕಾರಣದಿಂದ ಸಿಂಗಲ್ ಫಾದರ್ಗಳು ಬಾಡಿಗೆ ತಾಯಂದಿರ ಮೊರೆ ಹೋಗುತ್ತಾರೆ. ಪಾಶ್ಚಾತ್ಯ ದೇಶಗಳಲ್ಲಿ ದತ್ತು ಪಡೆಯುವುದಕ್ಕಿಂತ ಹೆಚ್ಚಾಗಿ ಸಿಂಗಲ್ ಫಾದರ್ಗಳು ಬಾಡಿಗೆ ತಾಯಂದಿರನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ಜಾಗತೀಕರಣದ ಫಲವಾಗಿ ಫರ್ಟಿಲಿಟಿ ಟೂರಿಸಂ ಕೂಡಾ ಜಾಸ್ತಿಯಾಗುತ್ತಿದ್ದು, ಬಾಡಿಗೆ ತಾಯಂದಿರಿಂದ ಮಕ್ಕಳನ್ನು ಪಡೆಯುವುದು ಕೂಡಾ ಸುಲಭವಾಗಿ ಬಿಟ್ಟಿದೆ.
ನೆಟ್ನಲ್ಲಿ ಸಲಹೆ ಸೂಚನೆ
ಮಕ್ಕಳನ್ನು ಆರೈಕೆ ಮಾಡುವುದು ಹೇಗೆ? ಸಿಂಗಲ್ ಪೇರೆಂಟ್ಗಳಿಗಿರುವ ಸಲಹೆ ಸೂಚನೆ, ಅನುಭವ ಎಲ್ಲವನ್ನು ಹಂಚಿಕೊಳ್ಳಲು ಹಲವಾರು ವೆಬ್ಸೈಟ್ಗಳು ವೇದಿಕೆಯೊದಗಿಸುತ್ತವೆ. ಇಲ್ಲಿ ಸಿಂಗಲ್ ಪೇರೆಂಟ್ಗಳು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡು ಸಮಾನ ಮನಸ್ಕರ ಅಭಿಪ್ರಾಯಗಳನ್ನು ಆಲಿಸಬಹುದು. ಇಂಥಾ ವೆಬ್ಸೈಟ್ಗಳಲ್ಲಿ ಒಬ್ಬಂಟಿಯಾಗಿ ಮಕ್ಕಳ ಆರೈಕೆಯಲ್ಲಿ ತೊಡಗಿರುವ ಅಪ್ಪ ಅಮ್ಮಂದಿರೂ ಪರಸ್ಪರ ವಿಚಾರ ವಿನಿಮಯ ನಡೆಸಬಹುದಾಗಿದ್ದು, ಇದರ ಜತೆಗೆ ಕಾನೂನು ಸಲಹೆಗಳ ಬಗ್ಗೆಯೂ ಮಾಹಿತಿ ಲಭ್ಯವಿದೆ.
-ಇಬ್ಬನಿ
loveibbani@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


