ರೈಕ್ಯಗಾನ

ರೈಕ್ಯಗಾನ
Updated on: 

ಬೆಂಕಿ ಬಿದ್ದಿದೆ, ನಮ್ಮ ಮನೆಗೆ ಓ ಬೇಗ ಬನ್ನಿ,
ಕನ್ನಡದ ಗಡಿ ಕಾಯೋಣ ಬನ್ನಿ
ಗಡಿನಾಡ ಹೋರಾಟಗಾರ ಕಯ್ಯಾರ ಕಿಂಞಣ್ಣ ರೈಗಳ ಕೂಗಿದು.
1956ರ ಭಾಷಾವಾರು ಪ್ರಾಂತ್ಯ ರಚನೆ ಸಂದರ್ಭ ಕಾಸರಗೋಡು ಕರ್ನಾಟಕಕ್ಕೆ ಸೇರುತ್ತದೆ ಎಂದು ಸರ್ದಾರ್ ಪಣಿಕ್ಕರ್ ಗಡಿನಾಡ ಹೋರಾಟಗಾರರಿಗೆ ಹೇಳುತ್ತಲೇ ಬಂದಿದ್ದರು. ಹಿಂದಿನ ದಿನದವರೆಗೆ ದಕ್ಷಿಣಕನ್ನಡದಲ್ಲಿದ್ದ ಕಯ್ಯಾರರು, ಮರುದಿನ ಬೆಳಗ್ಗೆ ಕೇರಳದಲ್ಲಿರುವುದನ್ನು ನೋಡಿ ದಿಗ್ಭ್ರಾಂತರಾಗಿ 'ಬೆಂಕಿ ಬಿದ್ದಿದೆ ಮನೆಗೆ ಓ ಬೇಗ ಬನ್ನಿ' ಆಂದು ಆರ್ತನಾದ ಮಾಡಿದರು. ಕರ್ನಾಟಕದ ಅಣ್ಣ, ತಮ್ಮಂದಿರೇ ಬಂದು ರಕ್ಷಿಸಿ ಎಂದು ಕೂಗಿ ಕರೆದರು. 58 ವರ್ಷಗಳು ಸಂದರೂ ಈ ಕೂಗು ಕರ್ನಾಟಕದ ಆಳುವವರ ಕಿವಿಗೆ ಬೀಳಲೇ ಇಲ್ಲ.
'ಕಾಸರಗೋಡು ಕರ್ನಾಟಕಕ್ಕೆ ಸೇರಬೇಕು ಎಂಬ ಹೋರಾಟಕ್ಕೆ ಹವ್ಯಕ ಬ್ರಾಹ್ಮಣ ಮತ್ತು ಬಂಟರು ಹೆಚ್ಚಿನ ಬಲ ತಂದರು. ಎಲ್ಲ ವರದಿಗಳಲ್ಲಿ ಕಾಸರಗೋಡು ಕರ್ನಾಟಕಕ್ಕೆ ಸೇರಬೇಕು ಎಂದು ಹೇಳಿದೆ. ಈ ವರದಿಗಳು ಕೇಂದ್ರ ಸರ್ಕಾರದಲ್ಲಿದೆ. ಆದರೆ ವರದಿ ಜಾರಿಗೊಳಿಸಿ ಎಂದು ಕರ್ನಾಟಕ ಸರ್ಕಾರ ಸರಿಯಾಗಿ ಕೇಳಲೇ ಇಲ್ಲ. ನಿಜಲಿಂಗಪ್ಪ ಸರ್ಕಾರ ಕೇಳುವ ಮನಸ್ಸು ಮಾಡಿತು. ಆದರೆ ಅವರು ತೀರಿ ಹೋದ ಬಳಿಕ ಬೆಳವಣಿಗೆ ಆಗಲೇ ಇಲ್ಲ. ಕರ್ನಾಟಕದಲ್ಲಿ ಲಿಂಗಾಯಿತ, ಗೌಡರ ಪ್ರಾಬಲ್ಯ, ಆದರೆ ಕಾಸರಗೋಡಲ್ಲಿ ಅವರ ಸಂಬಂಧಿಕರು ಯಾರೂ ಇಲ್ಲ' ಎಂದು ಕಿಂಞಣ್ಣ ರೈಗಳು ಹಿಂದೊಮ್ಮೆ ನೋವು, ಆಕ್ರೋಶ, ಬೇಸರ ಹೊರಹಾಕಿದ್ದರು.
1969ರಲ್ಲಿ ಮತ್ತೊಮ್ಮೆ ಗಡಿ ನಿರ್ಣಯಕ್ಕೆ ಮಹಾಜನ್ ವರದಿ ರಚಿಸಿತು. ಆದರೆ ಅದರ ಟೇಪ್ ತೆರೆಯುವ ಕೆಲಸ ಕೇಂದ್ರ ಸರ್ಕಾರ ಮಾಡಿಲ್ಲ, ಕರ್ನಾಟಕ ರಾಜ್ಯ ಸರ್ಕಾರ ಕೇಳಲಿಲ್ಲ. ರೈಗಳ ಸಾತ್ವಿಕ ಸಿಟ್ಟಿಗೆ ಕಾರಣವಿದೆ, ಅವರು ತಮ್ಮೂರು ಕರ್ನಾಟಕಕ್ಕೇ ಸೇರಲೇ ಬೇಕು ಎಂದು ಹಗಲು ರಾತ್ರಿ, ಕನಸ್ಸು, ಮನಸ್ಸಲ್ಲಿಯೂ ಚಿಂತಿಸುತ್ತಿದ್ದರು. ಅವರ ಹಸ್ತಾಕ್ಷರ ಕೇಳಿದರೆ 'ಕಾಸರಗೋಡು-ಕನ್ನಡ ನಾಡು' ಎಂದು ಬರೆದು ಸಹಿ ಹಾಕುತ್ತಿದ್ದರು.
ಆಜಾನುಬಾಹು ದೇಹ, ಕಂಚಿನ ಕಂಠದ ರೈಗಳನ್ನು ಕಂಡರೆ ವಿದ್ಯಾರ್ಥಿಗಳಿಗೆ ಅದೇನೋ ಪುಳಕ. ಕಂಚಿನ ಕಂಠ ಊದಿ ಬಿಡು ನೀ ಪಾಂಚಜನ್ಯವ ಎಂದು ಶಾಲೆಯಲ್ಲಿ ಅಥವಾ ಸಭೆಯಲ್ಲಿ ಹಾಡಿದರೆ ಸುತ್ತಮುತ್ತ ಅನುರಣಗೊಳ್ಳುತ್ತಿತ್ತು, ಮೈಮನ ರೋಮಾಂಚನವಾಗುತ್ತಿತ್ತು ಎಂದು ಏರ್ಯ ಲಕ್ಷ್ಮೀನಾರಾಯಣ ಆಳ್ವರು ಆಗಾಗ ನೆನಪಿಸಿಕೊಳ್ಳುತ್ತಾರೆ.
ಆದರೆ ಈಗ ಕಯ್ಯಾರರಿಗೆ ಸ್ಪಷ್ಟವಾಗಿ ಕೇಳುವುದಿಲ್ಲ. ಮರೆವು ಹೆಚ್ಚಾಗಿದೆ. ಮಗಳು ಮಾತನಾಡಿದರೆ ಸ್ವಲ್ಪ ಅರ್ಥ ಮಾಡಿಕೊಳ್ಳುತ್ತಾರೆ. ಸಂದರ್ಶನ ಬೇಕು ಎಂದರೆ ಇಲ್ಲಿ ಯಾರೂ ಜನರೇ ಇಲ್ಲ, ನಾನ್ಯಾಕೆ ಮಾತನಾಡಬೇಕು ಎಂದು ಪ್ರಶ್ನಿಸುತ್ತಾರೆ. ಒತ್ತಾಯಿಸಿದರೆ ಮಾತು ಆರಂಭಿಸುತ್ತಾರೆ, ಕಾಸರಗೋಡು ಕರ್ನಾಟಕಕ್ಕೆ ಸೇರಬೇಕು ಎಂಬ ಹೋರಾಟದ ದಿನಗಳ ಭಾಷಣವನ್ನು ಯಥಾವತ್ತು ಹೇಳುತ್ತಾರೆ.
ರಾಷ್ಟ್ರಕವಿ ಗೋವಿಂದ ಪೈಗಳು ವಿಳಾಸ ಬರೆಯುವಾಗ 'ಎಂ.ಗೋವಿಂದ ಪೈ, ಮಂಜೇಶ್ವರ, ದಕ್ಷಿಣ ಕನ್ನಡ ಜಿಲ್ಲೆ' ಎಂದು ಕೊನೆವರೆಗೂ ಬರೆಯುತ್ತಲೇ ಕಣ್ಮುಚ್ಚಿದ್ದರು. ಕಯ್ಯಾರರು ಕಾಸರಗೋಡು ಕರ್ನಾಟಕಕ್ಕೆ ಸೇರಲೇ ಬೇಕು ಎಂದು ಹೇಳುತ್ತಲೇ ಇದ್ದಾರೆ. ಇದು ಈಡೇರದ ಆಸೆಯೋ ?

ಐಕ್ಯವೊಂದೇ ಮಂತ್ರ,
ಐಕ್ಯದಿಂದಲೇ ಸ್ವತಂತ್ರ...

ಮಾನವತೆ ಪಂಚಾಂಗ,
ಸೋದರತೆ ಸರ್ವಾಂಗ...

ಇಂಥ ಶ್ರೇಷ್ಠ ಕವನಗಳ ಮೂಲಕ ಸ್ವಾತಂತ್ರ್ಯ ಹೋರಾಟ, ಸೌಹಾರ್ದ ಸ್ಥಾಪನೆಗೆ ಹೋರಾಡಿದ ಕಯ್ಯಾರ ಕೃತಿಗಳು ಪಠ್ಯವಾದವು. ಕನ್ನಡದ ಮೇರು ಕವಿ, ಬಹುಭಾಷಾ ವಿದ್ವಾಂಸ ಕಯ್ಯಾರ, ಸ್ವಾತಂತ್ರ್ಯ ಸಮರದಲ್ಲಿ ಲೇಖನಿ ಝಳಪಿಸಿ ಹೋರಾಡಿದರು.
ಕಯ್ಯಾರ ಕಿಂಞಣ್ಣ ರೈಗಳ ತರವಾಡ್ ತಾಯಿ ಮನೆ ಮಂಜೇಶ್ವರ. ಉಞಕ್ಕ ಪತ್ನಿ, ಆರು ಗಂಡು ಮಕ್ಕಳು, ಇಬ್ಬರು ಹೆಣ್ಣುಮಕ್ಕಳ ತುಂಬು ಸಂಸಾರ.
ಬದಿಯಡ್ಕ ಗ್ರಾಮದ ಪೆರಡಾಲ ಕವಿತಾ ಕುಟೀರ ಇವರ ನಿವಾಸ. ಪೆರಡಾಲ ನವಜೀವನ ಶಾಲೆಯಲ್ಲಿ ಶಿಕ್ಷಕರಾಗಿ ಮಕ್ಕಳಲ್ಲಿ ಸ್ಫೂರ್ತಿ ತುಂಬಿದವರು.  
ಐಕ್ಯಗಾನ, ಶತಮಾನದ ಗಾನ, ಕೊರಗ, ಪುನರ್ನವ, ಮಕ್ಕಳ ವ್ಯಾಕರಣ ಗೀತೆ ಸಹಿತ ಕನ್ನಡದಲ್ಲಿ 50ಕ್ಕೂ ಹೆಚ್ಚು ಕೃತಿಗಳನ್ನು ಬರೆದಿದ್ದಾರೆ. ಇವರ ಕವನಗಳಿಗೆ ಕವಿ ಇದಿನಬ್ಬರು ಜೀವ ತುಂಬಿದರು. 5 ಸಾವಿರಕ್ಕೂ ಹೆಚ್ಚುಬಾರಿ ಐಕ್ಯಗಾನವನ್ನು ಅವರು ಹಾಡಿದ್ದಿರಬಹುದು. ತುಳು ಮಾತೃಭಾಷೆ, ಕನ್ನಡ ಸಾಕುತಾಯಿ ಭಾಷೆ ಎನ್ನುವ ರೈಗಳು, ಕನ್ನಡದಲ್ಲಿ ಅಂತರ್ಗತವಾದ ತುಳುವನ್ನು ಒಪ್ಪಿಕೊಳ್ಳುವ ವಿಶಾಲ ಹೃದಯಿ.
ಕಯ್ಯಾರರ ಸಾಹಿತ್ಯ ಕ್ಷೇತ್ರ ಬಹುತೇಕರಿಗೆ ಗೊತ್ತೇ ಇದೆ. ಆದರೆ ಕಯ್ಯಾರ ತಮ್ಮ ಕುಗ್ರಾಮವನ್ನು ಅಭಿವೃದ್ಧಿಗೊಳಿಸಿದ ಪರಿ ಅನನ್ಯ, ಅದನ್ನು ತಿಳಿದುಕೊಳ್ಳಲೇ ಬೇಕು.
ಗಾಂಧಿ ಕರೆಗೆ ಒಗೊಟ್ಟು
ಸ್ವಾಂತಂತ್ರ್ಯ ಹೋರಾಟ ಸಂದರ್ಭ ಮಂಗಳೂರಲ್ಲಿ ಉಪಸಂಪಾದಕನಾಗಿ ದೇಶ ಭಕ್ತಿಯ ಲೇಖನ ಬರೆಯುತ್ತಿದ್ದ ಕಯ್ಯಾರ, ಕೆಲವು ಸಮಯ ಭೂಗತರೂ ಆಗಿದ್ದರು! ಸ್ವಾತಂತ್ರ್ಯ ಸಿಕ್ಕ ಬಳಿಕ ಮಹಾತ್ಮಾ ಗಾಂಧಿ ಕರೆಗೆ ಓಗೊಟ್ಟು ಹಳ್ಳಿಯ ಕಡೆಗೆ ನಡೆದರು.
'ಪೇಟೆ, ಪಟ್ಟಣಗಳಲ್ಲಿ ಇದ್ದುಕೊಂಡು ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಧೀರ ಯೋಧರೇ ನೀವೆಲ್ಲ ನಿಮ್ಮ ಹಳ್ಳಿಗೆ ಹೋಗಿ. ಹಳ್ಳಿ ಪಂಚಾಂಗ ಮೇಲೆ ರಾಷ್ಟ್ರ ಕಟ್ಟಬೇಕು, ಹಳ್ಳಿಗಳ ಅಭಿವೃದ್ಧಿಯೇ ದೇಶದ ಪ್ರಗತಿ' ಎಂದು ಸ್ವಾತಂತ್ರ್ಯ ಸಿಕ್ಕ ಬಳಿಕ ಗಾಂಧೀಜಿ ಕರೆ ನೀಡಿದ್ದರು. ನನಗೆ ಮಂಗಳೂರಂತಹ ಪಟ್ಟದಲ್ಲಿ ಸಕಲ ಸೌಲಭ್ಯ ಅನುಭವಿಸಿಕೊಂಡು ಇರಬಹುದಿತ್ತು, ಚುನಾವಣೆಯಲ್ಲಿಯೂ ಸ್ಪರ್ಧಿಸಬಹುದಿತ್ತು, ಆದರೆ ಎಂಪಿ ಆಗುವ ಹಂಬಲ ನನ್ನ ಬಳಿ ಇರಲಿಲ್ಲ. ನಾನು ನನ್ನ ಹಳ್ಳಿಗೆ ತೆರಳಿದೆ. ಇದು ಕಯ್ಯಾರರ ನಿಸ್ವಾರ್ಥ ಮಾತುಗಳು.
12 ವರ್ಷ ಬದಿಯಡ್ಕ ಗ್ರಾಮ ಪಂಚಾಯ್ತಿ ಅಧ್ಯಕ್ಷರಾಗಿ ಕೆಲಸ ಮಾಡಿದರು. ಅದಕ್ಕೆ ಕೇಂದ್ರ ಸರ್ಕಾರದಿಂದ ಅತ್ಯುತ್ತಮ ಪಂಚಾಯ್ತಿ ಪ್ರಶಸ್ತಿಯೂ ಲಭಿಸಿತ್ತು. ಪೆರಡಾಲ ಊರಿಗೆ ಕಾಲ್ನಡಿಗೆಯಲ್ಲಿಯೂ ಹೋಗುವುದು ಕಷ್ಟ. ಅಂಥಲ್ಲಿಗೆ ರೈಗಳು ರಸ್ತೆ ಮಾಡಿಸಿದರು, ಹೊಳೆಗೆ ಸೇತುವೆ ಕಟ್ಟಿಸಿದರು. ಕುಂಬ್ಡಾಜೆವರೆಗೂ ರಸ್ತೆ ನಿರ್ಮಿಸಿದರು. ದಲಿತರ ಶಿಕ್ಷಣಕ್ಕಾಗಿ ಶಾಲೆ ಕಟ್ಟಿದರು. ದಲಿತರಿಗೆ ಉದ್ಯೋಗಕ್ಕೂ ವ್ಯವಸ್ಥೆ ಮಾಡಿಸಿದರು. ಹಳ್ಳಿಯಲ್ಲಿ ವೈದ್ಯರು ಬಂದು ಉಚಿತ ಚಿಕಿತ್ಸೆ ನೀಡುವ ವ್ಯವಸ್ಥೆ ಕೂಡಾ ಮಾಡಿಸಿದರು.
'ನಮ್ಮೂರಲ್ಲಿ ಕಾಡಿತ್ತು. ಅಲ್ಲಿ ಸಂಜೆ 6 ಗಂಟೆ ಬಳಿಕ ಹೋದರೆ ಗುಳಿಗ ಹೊಡೆದು ಹಾಕುತ್ತಾನೆ ಎಂಬ ಹೆದರಿಕೆ ಜನರಲ್ಲಿ ಇತ್ತು. ಬಳಿಕ ಅಲ್ಲಿ ದೊಡ್ಡ ವಿದ್ಯಾಗಿರಿ ಶಾಲೆ ಮಾಡಿದೆವು. ಬಳಿಕ ಗುಳಿಗ ಕಾಟವೂ ಇಲ್ಲ, ಏನೂ ಇಲ್ಲ ' ಎಂದು ರೈಗಳು ಬದಲಾವಣೆ ನೆನಪು ಮಾಡಿಕೊಳ್ಳುತ್ತಿದ್ದರು.
ಮಂಗಳೂರಿಗೆ ಹೋಗಿ ಇಂಗ್ಲೀಷ್ ಕಲಿತರು. ಸಂಸ್ಕೃತ, ಕನ್ನಡ ಪದವಿ ಪಡೆದವರು ಶಿಕ್ಷಕರಾದುದೇ ಹೆಚ್ಚು. ಆದರೆ ಕಯ್ಯಾರ ಮಂಗಳೂರಲ್ಲಿ ಮುದ್ರಣವಾಗುತ್ತಿದ್ದ ದಕ್ಷಿಣಕನ್ನಡಿಗರ ಮೊದಲ ಪತ್ರಿಕೆ ಸ್ವದೇಶಾಭಿಮಾನಿಯಲ್ಲಿ ಉಪಸಂಪಾದಕರಾಗಿ ಕೆಲಸಕ್ಕೆ ಸೇರಿದರು.
ಅಸೌಖ್ಯವಾದಾಗ ಮಂಗಳೂರು ಆಸ್ಪತ್ರೆಯಲ್ಲಿ 1 ತಿಂಗಳು ಚಿಕಿತ್ಸೆ ಪಡೆದಿದ್ದರು. ಸ್ವದೇಶಾಭಿಮಾನಿ ಪತ್ರಿಕೆ ಪ್ರಕಾಶಕ ಕಾಮತ್ ಆಸ್ಪತ್ರೆಗೆ ಬಂದು ಚಿಕಿತ್ಸೆ ವೆಚ್ಚ ಸಾವಿರ ಕೊಟ್ಟು ಹೃದಯ ವೈಶಾಲ್ಯ ಮೆರೆದಿದ್ದರು. ಕೆಲಸ ಬಿಡುವಾಗ ಸಂಬಳ ಕೊಡದೆ ಓಡಿಸುವವರೇ ಹೆಚ್ಚಾಗಿರುವಾಗ ಕೆಲಸ ಬಿಟ್ಟ ಬಳಿಕ ಅಷ್ಟೊಂದು ದುಡ್ಡು (ಆ ಕಾಲಕ್ಕೆ) ನೀಡಿದ ಉದ್ಯೋಗದಾತರ ಕುರಿತು ರೈಗಳು ಆಗಾಗ ಆತ್ಮೀಯರ ಜತೆ ಹಂಚಿಕೊಳ್ಳುತ್ತಿದ್ದರು. <
ಗಾಂಧಿ ಬೆತ್ತ ಪೈಗಳದ್ದು!
ಐತಿಹಾಸಿಕ ದಂಡಿ ಯಾತ್ರೆಯಲ್ಲಿ ಮಹಾತ್ಮಾ ಗಾಂಧೀಜಿ ನಡೆವಾಗ ಹಿಡಿದುಕೊಂಡು ಆಧಾರವಾಗಿ ಮುನ್ನಡೆಸಿದ ಆ ಬೆತ್ತ (ಕೋಲು) ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈಗಳು ನೀಡಿದ್ದು ಎಂದು ಕಯ್ಯಾರರು ಮುಂಬಯಿ ಬಂಟರ ಮಾಸಿಕ ಪತ್ರಪುಷ್ಪದಲ್ಲಿ ಬಹಿರಂಗಪಡಿಸಿದ್ದರು. 1930ರಲ್ಲಿ ಹಿಂದಿ ರಾಷ್ಟ್ರಭಾಷೆಯಾಗಬೇಕು ಎಂದು ಆಂದೋಲನ ಮಾಡಲು ಗಾಂಧೀಜಿ ಬಂಟ ಕಾಲೇಲ್ಕರ್ ಮಂಜೇಶ್ವರಕ್ಕೆ ಬಂದಿದ್ದರು. ಆಗ ಗೋವಿಂದ ಪೈಗಳು ತಮ್ಮ ಹಿರಿಯರು ಉಪಯಾಗಿಸುತ್ತಿದ್ದ ಬೆತ್ತವನ್ನು ಗಾಂಧೀಜಿಗೆ ನೀಡುವಂತೆ ಕೊಟ್ಟರು. ಗಾಂಧೀಜಿ ದಂಡಿಯಾತ್ರೆಯಲ್ಲಿ ಈ ಬೆತ್ತವನ್ನು ಬಳಸಿದರು.
ಐಶ್ವರ್ಯ ರೈ
ಐಶ್ವರ್ಯ ರೈ ಕರ್ನಾಟಕದವಳು, ದಕ್ಷಿಣ ಕನ್ನಡ ಜಿಲ್ಲೆಗೆ ಈ ಹಿಂದೆ ಸೇರಿದ್ದ, ಈಗ ಅನ್ಯಾಯವಾಗಿ ಕೇರಳಕ್ಕೆ ತಳ್ಳಲ್ಪಟ್ಟ ಕಾಸರಗೋಡಿನ ಮಂಜೇಶ್ವರದ ಸೋಂತಾಡಿ ಬಂಟ ಸಮಾಜದವರು. ಸೋಂತಾಡಿ ರಾಮಣ್ಣ ರೈಗಳ ಮೊಮ್ಮಗಳು ಎಂದು ಲೇಖನ ಬರೆಯುವ ಮೂಲಕ ಅವರ ಮೇಲಿನ ಅಭಿಮಾನವನ್ನೂ ಕಾಸರಗೋಡು ಕೇರಳಕ್ಕೆ ಸೇರಿದ ನೋವನ್ನೂ ಹೊರಹಾಕಿದ್ದರು.


- ಜಿತೇಂದ್ರ ಕುಂದೇಶ್ವರ    
kundeshwara@gmail.com


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com