ಗಾಂಧಿ V/s ಗಾಂಧಿ

ಸ್ವಲ್ಪ ದಿನಗಳ ಹಿಂದಿನವರೆಗೂ ಗಾಂಧಿ ಢ/ಡ ಮೋದಿ ಇತ್ತು. ಅದರ ಭರಾಟೆ ಮುಗಿಯಿತೆನ್ನುವಾಗಲೇ 'ಗಾಂಧಿ v/s ಗಾಂಧಿ' ಎಂಬ ನಾಟಕ ಪ್ರದರ್ಶನ ಕಂಡಿದೆ. ದಿನಕರ್ ಜೋಷಿ ಅವರ ಗುಜರಾತಿ ಕಾದಂಬರಿಯನ್ನು ಅಜಿತ ದಳವಿ ಅವರು ಮರಾಠಿ ನಾಟಕರೂಪಕ್ಕೆ ತಂದರು. ನಂತರ ಡಿ.ಎಸ್. ಚೌಗಲೆ ಅವರು ಕನ್ನಡಕ್ಕೆ ತಂದ ನಂತರ ಮೈಸೂರಿನ ರಂಗಾಯಣ ತಂಡಕ್ಕಾಗಿ ಸಿ. ಬಸವಲಿಂಗಯ್ಯ ನಿರ್ದೇಶಿಸಿದ್ದಾರೆ.
ಈ ನಾಟಕದ ಆರಂಭದಲ್ಲೇ ಗಾಂಧಿಯ ಮಗ ಹರಿಲಾಲ್ನ 'ಗುಣಗಾನ' ಮಾಡಿ ಅವನ ಪರಲೋಕದ ಯಾತ್ರೆಯಲ್ಲಿ ತಂದೆ ಗಾಂಧಿಯನ್ನು ಸಂಧಿಸುವಲ್ಲಿಂದ ನಾಟಕವು ಹರವಿಕೊಳ್ಳುತ್ತದೆ. ಮೂಲ ಗಾಂಧಿ ಇಲ್ಲಿ ಪ್ರಮುಖ ಪಾತ್ರದಲ್ಲಿದ್ದರೂ ಮಗ ಹರಿಲಾಲನೇ ನಾಯಕ. ಒಬ್ಬ ಸ್ವಚ್ಛ ಮನಸ್ಸಿನ ವ್ಯಕ್ತಿಯು ನಿರಂತರ ಮೋಹದ ತುಳಿತಕ್ಕೆ ಸಿಲುಕಿ ರೂಪಾಂತರಗೊಳ್ಳುವ ಸಂಘರ್ಷದ ಪ್ರತಿರೂಪವೇ ಈ ಹರಿಲಾಲ್. ತನ್ನ ತಂದೆಯ ಕಾಲನ್ನು ತೊಳೆಯುವ ಮಗನೇ ಮುಂದೊಮ್ಮೆ ತನ್ನ ಮೇಲಿನ ನಿರಂತರ ಪ್ರಹಾರಕ್ಕೆ ಪ್ರತಿಯಾಗಿ ಬಹಿರಂಗ ಪತ್ರ ಬರೆಯುವ ಮಟ್ಟಕ್ಕೆ ತಲುಪುತ್ತಾನೆ.
ಈ ವಾಮನ ತನ್ನಲ್ಲಿನ ಅಗಾಧ ನಡಾವಳಿಗಳಿಂದ ತ್ರಿವಿಕ್ರಮನಾಗಿ ಬೆಳೆದದ್ದು ಹೇಗೆ ಎಂದು ಗಾಂಧಿಯ ಕುಟುಂಬವೇ ಇಲ್ಲಿ ತಮಟೆ ಹಿಡಿದು ಸಾರಿದೆ. ಹಾಗಂತ ಗಾಂಧಿಗೆ ಕೋಪವಿಲ್ಲ, ತಟಸ್ಥ ನೀತಿ! ತನ್ನ ಕಾಲಮಾನದಲ್ಲೇ ಮಗನೇ ತನ್ನನ್ನು ವಿರೋಧಿಸಿ ನಿಂತಾಗ ಆ ಬಗ್ಗೆ ಅನುಕಂಪವೇ ಹೊರತು ಬೇರೇನೂ ಅಲ್ಲವೆಂಬ ಮಹಾತ್ಮರ ಗುಣ ಪ್ರಕಟವಾಗಿದೆ. ಗಾಂಧಿಗೆ ಸಿಕ್ಕ ಎಲ್ಲ ಮನ್ನಣೆಗೆ ಕಾರಣೀಭೂತಳಾದ ಕಸ್ತೂರ್ ಬಾ ಪಾತ್ರ ಆವರಿಸಿಕೊಳ್ಳುತ್ತದೆ. ಅಲ್ಲದೆ, ಮರಣಶಯ್ಯೆಯಲ್ಲಿ ಗಾಂಧಿಯೊಂದಿಗಿನ ತನ್ನ ಗತ 'ವೈಭೋಗ'ವನ್ನು ವಿವರಿಸುವ ದೃಶ್ಯೀಕರಣ ಹನಿಸುತ್ತದೆ. ಸಾಯುವ ದೃಶ್ಯದಲ್ಲೂ ಜೀವಿಸಿ ನಟಿಸಿದ್ದಾರೆ. ಸಂಭಾಷಣೆಯ ನೇಯ್ಗೆ ಹಾಗೂ ಅದನ್ನು ಮಾತಾಗಿಸಿದ ಪರಿ ವಿಶೇಷ. ಕೆಟ್ಟಗುಣಗಳ ದಾಸನಾದ ಮಗನನ್ನು ತಿರಸ್ಕರಿಸುವ ಹಾಗೂ ಪೂರ್ವಾಶ್ರಮದಲ್ಲಿನ ಮಗನನ್ನು ಆದರಿಸುವ ದೃಶ್ಯ ಸಂಯೋಜನೆಯಲ್ಲಿ ನಿರ್ದೇಶಕರು ಕಾಣಿಸುತ್ತಾರೆ.
ಸಂಭಾಷಣೆ ಹರಿತವಾಗಿದ್ದು ಮನಃಪಟಲದಲ್ಲಿ ಉಳಿಯುತ್ತದೆ. ಹಿನ್ನೆಲೆ ಸಂಗೀತವು ಮೂಲ ನಾಟಕದ ಪ್ರಭಾವಕ್ಕೆ ಒಳಗಾದಂತಿದ್ದು ಕನ್ನಡೀಕರಣದ ತರಂಗಗಳನ್ನು ಸ್ಫುರಿಸಲಿಲ್ಲ. ಇತಿಹಾಸದ ಮೇಲೆ ಬೆಳಕು ಮಂದವಾಗಿ ಬೀರಿದರೂ ಅಲ್ಲಿನ ದೃಶ್ಯಗಳು ಅಚ್ಚಾಗಿಸುವಲ್ಲಿ ವಿಫಲವಾಗಲಿಲ್ಲ. ರಂಗ ಪರಿಕರಗಳಲ್ಲಿ ಆಗಿನ ಮೈಕು, ಚರಕಗಳನ್ನು ಬಳಸಿದ್ದಲ್ಲದೇ ಅತ್ತೆ- ಸೊಸೆಯರು ಕಲ್ಲು ಮನಸ್ಸುಗಳವರ ಬಗೆಗಿನ ಮಾತುಗಳಿಗೆ ಬೀಸೋಕಲ್ಲಿನ ಬಳಕೆ ಸೂಚ್ಯವಾಗಿದೆ. ಗಾಂಧಿ ಪಾತ್ರಧಾರಿಗಳಿಬ್ಬರೂ ಆಯಾಯ ವಯೋವಾನಕ್ಕೆ ನ್ಯಾಯ ಸಲ್ಲಿಸಿದ್ದಾರೆ. ಎಲ್ಲ ಕಲಾವಿದರು ಇತಿಹಾಸದಲ್ಲಿ ಮುಳುಗಿದ್ದರೂ ವರ್ತಮಾನವನ್ನು ಅರಿತು ತಮ್ಮ ಭವಿಷ್ಯವನ್ನು ರೂಪಿಸಿಕೊಂಡಿದ್ದಾರೆ. ಗಾಂಧಿ ಹಾಗೂ ಹರಿಲಾಲ್ರ ಸಂಘರ್ಷ ಯಮುನಾ ನದಿಯ ತೀರದಲ್ಲಿ ಕೊನೆಗೊಳ್ಳುತ್ತದೆ. ಸುಮಾರು ಹದಿನಾರು ವರ್ಷಗಳ ಹಿಂದೆ ಹುಟ್ಟಿದ ಈ ನಾಟಕ ಇಂದಿಗೂ ಪ್ರಸ್ತುತ.
-ಸಂಕೇತ್ ಗುರುದತ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


