ಕೊಡು-ಕೊಳ್ಳುವ ವಿನಿಮಯವೇ ಸಂಬಂಧ
ಈ ದಿನಗಳಲ್ಲಿ ಒಂದು ಸಂಬಂಧವನ್ನು ಪೊರೆಯುವುದು, ಕಾಪಾಡುವುದು ಸಹ ದೊಡ್ಡ ಸವಾಲೇ ಸರಿ. ನಾವು ನಮಗೊಂದೇ ಅಲ್ಲ, ನಮ್ಮ ಮನೆಯಲ್ಲೊಂದೇ ಅಲ್ಲ, ಸುತ್ತಮುತ್ತ, ಆಫೀಸಿನಲ್ಲಿ, ಕ್ಲಬ್ಬಿನಲ್ಲಿ, ಸ್ನೇಹಿತರ ಸಮ್ಮುಖದಲ್ಲಿ, ಪಾರ್ಟಯಲ್ಲಿ, ಸಭೆ ಸಮಾರಂಭಗಳಲ್ಲಿ, ಹೀಗೆ ಸರ್ವತ್ರ ಎಲ್ಲರೊಡನೆ ಒಳ್ಳೆಯವರಾಗಿರಬೇಕು ಹಾಗೂ ಪ್ರತಿಯೊಬ್ಬರೊಂದಿಗೂ ಉತ್ತಮ ಸಂಬಂಧ ಹೊಂದಿರಬೇಕು. ಇದು ಒಂದು ದಿನ, ಒಂದು ವಾರ, ಒಂದು ತಿಂಗಳು ಅಥವಾ ಒಂದು ವರ್ಷದ ಕೆಲಸವಲ್ಲ. ಪ್ರತಿ ಕ್ಷಣ, ಪ್ರತಿದಿನ, ಯಾವಜ್ಜೀವ ನಾವು ಒಳ್ಳೆಯವರಾಗಿರಬೇಕು ಹಾಗೂ ಎಲ್ಲರೊಂದಿಗೆ ಉತ್ತಮ ಸಂಬಂಧ ಹೊಂದಿರಬೇಕು. ಒಬ್ಬರ ಜತೆ ಸಂಬಂಧ ಕೆಡಿಸಿಕೊಂಡರೆ, ಅದರ ಪರಿಣಾಮ ಹಲವು-ಹತ್ತು ರೀತಿಯಲ್ಲಿ ಆಗಬಹುದು. ಅಳಿಯನ ಜತೆ ಭಿನ್ನಾಭಿಪ್ರಾಯವೋ, ಅಸಮಾಧಾನವೋ ಉಂಟಾದರೆ, ಅದರಿಂದ ಮಗಳ ನೆಮ್ಮದಿಗೆ ಭಂಗವುಂಟಾಗಬಹುದು. ಅಳಿಯನ ತಂದೆ-ತಾಯಿ ಮುನಿಸಿಕೊಳ್ಳಬಹುದು. ಮಗಳು ಕಣ್ಣೀರು ಹಾಕಿದರೆ ಅದರಿಂದ ನಿಮ್ಮ ಹೆಂಡತಿಯ ಮನಶ್ಶಾಂತಿ ಸಾಳು ಮೇಳಾಗಬಹುದು. ಇವೆಲ್ಲವುಗಳ ಪರಿಣಾಮದಿಂದ ನಿಮ್ಮ ಕುಟುಂಬದ ನೆಮ್ಮದಿ, ಸಮಾಧಾನ ಹಾಳಾಗಿ ತೊಳಸಂಬಟ್ಟೆಯಾಗಬಹುದು.
ಇದು ಒಂದು ಸಂಬಂಧ ಹಾಳಾಗಿ ಹೋದ ಸಂಕಟವಿದು. ಒಮ್ಮೆ ಮಾಡಿದ ತಪ್ಪಿನ ಪರಿಣಾಮವಿದು. ಆದರೆ, ಇದರ ತೀವ್ರತೆ ಮಾತ್ರ ಜೀವನಪೂರ್ತಿ ಉಳಿದು ಬಿಡಬಹುದು. ಒಮ್ಮೆ ಸಂಬಂಧ ಹಳಸಿದರೆ, ಅದು ಸುಧಾರಿಸಿದರೂ ಮೊದಲಿನಂತಿರುವುದಿಲ್ಲ. ಅಡ್ಡವಾಸನೆ, ಹೊಡೆಯುತ್ತಲೇ ಇರುತ್ತದೆ. ನಾವು ನಮ್ಮ ದೈನಂದಿನ ಜೀವನದಲ್ಲಿ ಬೇರೆ ಬೇರೆ capacityಯಲ್ಲಿ ಬೇರೆ ಬೇರೆ ಪಾತ್ರಗಳನ್ನು ಜವಾಬ್ದಾರಿಗಳನ್ನು ನಿಭಾಯಿಸುತ್ತಿರುತ್ತೇವೆ. ಅಲ್ಲೆಲ್ಲ ನಮ್ಮ ಪಾತ್ರ ಬದಲಾಗುತ್ತಲೇ ಇರುತ್ತದೆ. ಆದರೆ, ಸಂಬಂಧವನ್ನು ಮಾತ್ರ ಎಲ್ಲೂ ಕೆಡಿಸಿಕೊಳ್ಳುವಂತಿಲ್ಲ. ಎಷ್ಟೇ ತೊಂದರೆಯಾಗಲಿ, ಕಿರಿಕಿರಿಯಾಗಲಿ, ಎಲ್ಲವನ್ನೂ ಸಹಿಸಿಕೊಳ್ಳಬೇಕು.
ನೀವು ವಿಮಾನದಲ್ಲಿ ಪ್ರಯಾಣಿಸುವಾಗ ಗಗನಸಖಿಯರ ವರ್ತನೆಯನ್ನು ಗಮನಿಸಿರಬಹುದು. ನೀವು ವಿಮಾನದಲ್ಲಿದ್ದಷ್ಟು ಹೊತ್ತು ಆಕೆ ನಿಮ್ಮ ಜತೆ ತನ್ನ ಮನೆಗೆ ಬಂದ ಅತಿಥಿಯಂತೆ, ನೆಂಟರಂತೆ ವರ್ತಿಸುತ್ತಾಳೆ. ವಿಮಾನದಲ್ಲಿ ನೂರೈವತ್ತು ಜನರಿದ್ದರೆ, ಅವರೆಲ್ಲರೊಂದಿಗೂ ನಗುನಗುತ್ತಲೇ ಇರುತ್ತಾಳೆ. ಪ್ರಯಾಣಿಕರು ಎಷ್ಟೇ ಕಿರಿಕಿರಿಯಾಗುವಂತೆ ನಡೆದುಕೊಂಡರೂ ಸಂಯಮದಿಂದಲೇ ನಡೆದುಕೊಳ್ಳುತ್ತಾಳೆ. ಅವಳ ಮುಖದಲ್ಲಿ ಬೇಸರ, ಸಿಟ್ಟು, ಸಿಡುಕುತನ ಕಾಣಲು ಸಾಧ್ಯವಿಲ್ಲ. ಅವಳೆಂದೂ ಮುಖ ಗಂಟಿಕ್ಕಿಕೊಳ್ಳುವುದಿಲ್ಲ. ವಿಮಾನದಲ್ಲಿರುವ ಎಲ್ಲರೊಂದಿಗೂ ಅವಳ ವರ್ತನೆ ಅತ್ಯಂತ ಸುಮಧುರವಾಗಿರುತ್ತದೆ. ಒಂದು ದಿನದ ಮಟ್ಟಿಗೆ ಆಕೆ ಹೀಗೆ ಇರುವಂತಿಲ್ಲ. ಸೇವೆಯಲ್ಲಿರುವಷ್ಟು ವರ್ಷವೂ ತುಟಿಗೆ ಲಿಪ್ಸ್ಟಿಕ್ ಒಂದೇ ಅಲ್ಲ, ನಗುವನ್ನೂ ಮೆತ್ತಿಕೊಂಡಿರಬೇಕು. ಒಂದೇ ಒಂದು ಸಲ ಪ್ರಯಾಣಿಕರ ಜತೆ ಸಿಟ್ಟು ಸೆಡವು ಪ್ರದರ್ಶಿಸಿದರೆ ಕೆಲಸಕ್ಕೇ ಸಂಚಕಾರ.
ಸಂಬಂಧವನ್ನು ಕಾಪಾಡುವುದಿದೆಯಲ್ಲ, ಅದು ಬಹಳ ಕಷ್ಟ. ಪ್ರತಿದಿನವೂ ನಾವು ಒಳ್ಳೆಯವರಾಗಬೇಕು. ಆಫೀಸಿನಲ್ಲಂತೂ ನಮ್ಮ ಸಂಬಂಧ ಎಲ್ಲರೊಂದಿಗೆ ಚೆನ್ನಾಗಿರಬೇಕು. ಒಂದು ಸಲ ಮುಗ್ಗರಿಸಿದರೆ, ನಮ್ಮಿಂದ ತಪ್ಪಾದರೆ ಜನ ಪ್ರತಿದಿನ ಮೂದಲಿಸುತ್ತಾರೆ. ನೀವು ಎಷ್ಟೇ ಚೆನ್ನಾಗಿ ಕೆಲಸ ಮಾಡಿ, ತಡವಾಗಿ ಆಫೀಸಿಗೆ ಬರುವುದನ್ನು ರೂಢಿಸಿಕೊಂಡರೆ `ಲೇಟ್ಲತೀಫ್ ಎಂದು ವ್ಯಂಗ್ಯವಾಡುತ್ತಾರೆ. ಇನ್ನು ಬಾಸ್ ಜತೆಗೆ ಎಂದೆಂದೂ ಸಂಬಂಧ ಕೆಡಿಸಿಕೊಳ್ಳುವಂತಿಲ್ಲ. ಪ್ರತಿದಿನ ಎಷ್ಟೇ ತೊಂದರೆಯಾದರೂ ಎದುರು ಉತ್ತರ ಕೊಡುವಂತಿಲ್ಲ.
ಸಂಬಂಧ ಚೆನ್ನಾಗಿಟ್ಟುಕೊಳ್ಳುವುದೆಂದರೆ ನಮ್ಮತನವನ್ನು ಬಿಟ್ಟುಕೊಡುವುದಲ್ಲ. ಸ್ವಾಭಿಮಾನ ಬಿಟ್ಟು ಬಾಳುವುದಲ್ಲ. ಹಾಗೆ ನೋಡಿದರೆ ಉತ್ತಮ ಸಂಬಂಧವನ್ನು ಇಟ್ಟುಕೊಳ್ಳಲು ನಮ್ಮತನ ಹಾಗೂ ಸ್ವಾಭಿಮಾನವೇ ಆಧಾರ. ಬೇರೆಯವರೊಂದಿಗೆ ಉತ್ತಮ ಸಂಬಂಧ, ಬಾಂಧವ್ಯ ಹೊಂದುವುದೆಂದರೆ ನಮ್ಮೊಳಗೆ ಅವರಿಗೆ ನೆಲೆಸಲು ಅವಕಾಶ ಮಾಡಿಕೊಡುವುದು ಹಾಗೂ ಆ ಮೂಲಕವಾಗಿ ಅವರಲ್ಲಿ ನೆಲೆಸಲು ಪಾಲು ಕೇಳುವುದೇ ಆಗಿದೆ. ಇದು ಪರಸ್ಪರ ಕೊಡು-ಕೊಳ್ಳುವ ವಿನಿಮಯ. ನಾವು ಒಬ್ಬ ವ್ಯಕ್ತಿಯೊಂದಿಗೆ ಮೂವತ್ತು-ನಲವತ್ತು ವರ್ಷಗಳಿಂದ ಉತ್ತಮ ಸಂಬಂಧ ಹೊಂದಿದ್ದೇವೆ ಅಂದ್ರೆ ಅವನ ಎಲ್ಲ ಗುಣಾವಗುಣಗಳನ್ನು ಸಹಿಸಿಕೊಂಡಿದ್ದೇವೆ, ಲೋಪ-ದೋಷಗಳನ್ನು ಒಪ್ಪಿಕೊಂಡಿದ್ದೇವೆ, ಅವನ್ನು ಸ್ವೀಕರಿಸಿಯೇ ಅದಕ್ಕೂ ಮಿಗಿಲಾದ ಸಂಬಂಧವನ್ನು ಗೌರವಿಸಿದ್ದೇವೆ ಎಂದರ್ಥ. ಇದು ತ್ಯಾಗ, ಹೃದಯ ವೈಶಾಲ್ಯದ ಸಂಕೇತವೂ ಹೌದು.
ಯಾವುದೇ ಸಂಬಂಧವಿರಬಹುದು ಅದು ಕಡಿದುಕೊಳ್ಳುವಷ್ಟು ನಿಕೃಷ್ಟವಾಗಿರುವುದಿಲ್ಲ. ಕಡಿದುಕೊಳ್ಳಲೇ ಬೇಕಾದ ಸಂದರ್ಭ ಬಂದರೆ ಅದು ಅಷ್ಟರಮಟ್ಟಿಗೆ ದುರ್ಬಲವಾಗಿತ್ತು ಎಂದು ಭಾವಿಸಲೇಬೇಕಾಗುತ್ತದೆ.
ಸಂಬಂಧವನ್ನು ಕುದುರಿಸಲು, ಸ್ಥಾಪಿಸಲು, ಪೋಷಿಸಲು, ಪೊರೆಯಲು ಅಸಾಧಾರಣ ಸಹನೆ, ಸಂಯಮ, ಶ್ರದ್ಧೆ, ಕಾಳಜಿ, ಕಳಕಳಿ ಬೇಕು. ಅದಕ್ಕೆ ಅಮೂಲ್ಯವಾದ ಸಮಯ ಹಾಗೂ ಹಣವನ್ನು ಖಚರ್ು ಮಾಡಬೇಕು. ಅಂದರೆ, ಒಂದು ಸಂಬಂಧಕ್ಕಾಗಿ ನಾವು ನಮ್ಮ ಜೀವನದ ಒಂದು ಭಾಗವನ್ನೇ ಕೊಟ್ಟಿರುತ್ತೇವೆ. ಹೀಗಾಗಿ ಅದನ್ನು ಕಡಿದುಕೊಳ್ಳಬಾರದು. ಯಾವುದೇ ಸಂಬಂಧ ನಿಮ್ಮ ನಡೆಯಿಂದ ಮುಂದುವರಿಯುತ್ತದೆ ಎಂದಾದರೆ ನೀವು ಅದನ್ನು ಕೈ ಹಿಡಿದು ಬರಸೆಳೆದು ಅಪ್ಪಿಕೊಳ್ಳಿ. ಯಾಕೆಂದರೆ ಅಂತಿಮವಾಗಿ ಗೆಲ್ಲುವವರು ನೀವೇ.
- ವಿಶ್ವೇಶ್ವರ ಭಟ್, ಪ್ರಧಾನ ಸಂಪಾದಕ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

