ತಿಮ್ಮಾ: ಮುತ್ತಿನಂತ ಸಂಸಾರರೀ ಆ ಗಂಡಾ- ಹೆಂಡತಿದು ಆದರ ಇವೊತ್ತು ಆ ಗೋಳು ಯಾರಿಗೂ ಬ್ಯಾಡ ತಮ್ಮಾ... ಅಂಥ ಕಷ್ಟ ದೇವರು ಯಾರಿಗೂ ಕೊಡಬಾರದು...
ತಮ್ಮಾ: ಅದಕ್ಕ ನಾ ದೇವರನ್ನ ಏನ್ ಬೇಡಕೊತೇನಿ ಅಂದ್ರ...
ತಿಮ್ಮಾ: ಏನ್ ಬೇಡಕೊತಿ??
ತಮ್ಮಾ: ದೇವರ ಎಲ್ಲರಿಗೂ ಒಳ್ಳೆಯದನ್ನ ಮಾಡು... ಆದರ ನನ್ನಿಂದ ಶುರುಮಾಡು!!
ತಿಮ್ಮಾ: ವಾಹ ವಾಹ... ನಿನ್ನಂಥ ಜಾಣ ಭಕ್ತರಿರೊದರಿಂದ ದೇವರ ಕಲ್ಲಾಗಿ ಬಿಟ್ಟಾನ ಮಾತಾಡದ ಮೂರ್ತಿ ಆಗ್ಯಾನ...
ತಮ್ಮಾ: ಹೌದು ಸೇಮ್ ಟು ಸೇಮ್ ನಮ್ಮ ದೇಶದ ಪ್ರಧಾನಿಗಳು ಹಂಗ ಆಗ್ಯಾರ...
ತಿಮ್ಮಾ: ಹಂಗಡ ಆಗ್ಯಾರ ಅಂದ್ರೇನು, ದೇವರ ಆಗ್ಯಾರ?...
ತಮ್ಮಾ: ಎಯ್ ದೇವರಾಗ್ಯಾರಡ ಅನಬಾರದು! ಅರ್ಥ ಬ್ಯಾರೆ ಆಗತದ...
ತಿಮ್ಮಾ: ಹೋಗಲಿ ಸುಖ ಸಂಸಾರದ ಗೋಳು ಕೇಳು... ಮುತ್ತಿನಂಥ ಗಂಡಾ-ಹೆಂಡತಿಗೆ ಬಂಗಾರದಂಥ ಎರಡು ಗಂಡು ಮಕ್ಕಳು...
ತಮ್ಮಾ: ಎರಡೂ ಕೀರ್ತಿ ತಂದು ಕೊಡುವಂತಹವು...
ತಿಮ್ಮಾ: ಹೌದೌದು, ಓದಿ ಶ್ಯಾಣ್ಯಾರಾಗಿ ಇದ್ದ ಊರಾಗ ದೊಡ್ ನೌಕರಿ ಹಿಡದರು.
ತಮ್ಮಾ: ಅವ್ವ ಅಪ್ಪ ಹಿರಿಹಿರಿ ಹಿಗ್ಗಿರಬೇಕಲಾ...
ತಿಮ್ಮಾ: ಹಿಗ್ಗೊದಷ್ಟೆ... ಏನು? ತಮ್ಮ ಮಕ್ಕಳ ಹಂಗ ಬ್ಯಾರೆ ಯಾರಿದ್ದಾರ ಅಂತ ಹೆಮ್ಮೆಯಿಂದ ಓಡಾಡಿದರು...
ತಮ್ಮಾ: ಹುಡುಗರ ಲಗ್ನ ಮಾಡಿದರೋ ಇಲ್ಲೋ..??
ತಿಮ್ಮಾ: ಮಾಡಲಾರದ ಏನೋ ತಮ್ಮಾ? ಸಿಹಿ ಬೆಲ್ಲ ಇದ್ದಲ್ಲೆ ಇರುವೆಗಳಿಗೇನು ಕಮ್ಮಿ? ಕನ್ಯಾಪಿತೃರು ಇವರ ಮನಿ ಮುಂದ ದಾಳಿ ಹಚ್ಚಿದರು.
ತಮ್ಮಾ: ತಂದಿ-ತಾಯಿ ಇಬ್ಬರು ಮಸ್ತ ಸೊಸೆಯಂದಿರನ್ನ ಹುಡುಕಿರಬೇಕಲಾ?
ತಿಮ್ಮಾ: ಹೌದು, ಉತ್ತಮ ಸ್ವಭಾವದ ಕುವರಿಯರು ಕುಟುಂಬದಾಗ ಕಾಲಿಟ್ಟರು... ನೋಡ-ನೋಡತಿದ್ದ ಹಂಗ ಮೊಮ್ಮಕ್ಕಳು ಮನಿ ತುಂಬ ಅಂಬೆಗಾಲಿಡಲಿಕತ್ತರು. ಆರ ಜನರ ಕುಟುಂಬ ಎಂಟು ಆತು, ಹತ್ತು ಆತು.
ತಮ್ಮಾ: ಅಪ್ಪ ರಿಟೈರ್ ಆಗಿರಬೇಕಲಾ??
ತಿಮ್ಮಾ: ರಿಟೈರ್ ಆಗಿ ಕೆಲವು ವರ್ಷದಾಗ ಶಿವನ ಪಾದ ಸೇರಿದರು.
ತಮ್ಮಾ: ತಾಯಿ ಒಬ್ಬಂಟಿಯಾಗಿರಬೇಕು!!
ತಿಮ್ಮಾ: ಆದರ ಮಕ್ಕಳ ಮಮತಾ ದೊಡ್ಡದು... ತಾಯಿನ್ನ ಹೂವಿನ ಹಂಗ ನೋಡಕೊಂಡರು. ಹೊಂದಾಣಿಕೆ ಹಿಂದ ಮುಂದ ಆಗಿದ್ದರಿಂದ ಮನಿ ಬ್ಯಾರೆ ಮಾಡಿದ್ರು...
ತಮ್ಮಾ: ಅಂದರ ಪಾಲಾಗಿದ್ದರು?
ತಿಮ್ಮಾ: ಹೌದು ಆದರ ತಾಯಿಗೆ ಹೇಳಿ ಬಿಟ್ಟಿದ್ದರು. ತಿಂಗಳದಾಗ 15 ದಿನ ನಮ್ಮನೇಲಿ, ಇನ್ನ ಹದನೈದ ದಿನ ಅಲ್ಲಿರು ಅಂತ!!
ತಮ್ಮಾ: ತಾಯಿನ್ನ ಚಂದಾಗಿ ನೋಡಕೊತಿರಬೇಕಲಾ..!!
ತಿಮ್ಮ: ಏನೂ ಕೊರತಿಯಾಗದಂಗ ನೋಡಕೊತಾರ ಆದರ ಆ ಮುದುಕಿಗೆ 31 ದಿನದ ತಿಂಗಳ ಬಂತಂದ್ರ ತಳಮಳ ಸುರುವಾಗತದ... ಆ ದಿನ ಒಂದ ತಂಬಿಗಿ ನೀರು ಕೊಡುವರು ಇರುದಿಲ್ಲ... ಗುಳಗಿ ಔಷಧಿ ತಗೋಬೇಕಂದ್ರೆ ಹೊಟ್ಟ್ಯಾಗೇನು ಇರುದಿಲ್ಲ... ಗಂಡ ಇಲ್ಲದ ಜಗತ್ತು ನರಕ ಅನಸ್ತದ.
-ಯಶವಂತ ಸರದೇಶಪಾಂಡೆ
khullamkhullabevubella@gmail.com