ಟಿಎ/ಡಿಎಗೆ ನೀವು ಅರ್ಹರು
-ಹೆಸರು, ಊರು ಬೇಡ
ನಾವು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಸಂಚಿತ ವೇತನ (ಕನ್ಸಾಲಿಡೇಟೆಡ್ ಸ್ಯಾಲರಿ)ದಲ್ಲಿ ಮಾಡುತ್ತಿದ್ದೇವೆ. ನಮ್ಮ ಸೇವೆಯಲ್ಲಿ ಆಗಾಗ್ಗೆ ಆಯುಷ್ ಅಧಿಕಾರಿಗಳ ಸಭೆಗಳಿಗೂ ಹೋಗಬೇಕು. ಗ್ರಾಮಗಳಿಗೂ ಭೇಟಿ ನೀಡಬೇಕು. ಈ ಭೇಟಿಗಳಿಗೆ ನಮಗೆ ಟಿಎ/ಡಿಎ ಸಿಗುವುದಿಲ್ಲವೇ?
- ಸಂಬಳ ಸಂಚಿತವಾದರೂ ಪ್ರಯಾಣ ಭತ್ಯೆ, ದಿನಭತ್ಯೆ ಪಡೆಯಲು ನಿಮಗೆ ಅರ್ಹತೆ ಇದೆ. ಇಲಾಖೆಯಿಂದ ಕೇಳಿ. ಕೊಡದಿದ್ದರೆ ಸರ್ಕಾರಕ್ಕೂ ಅರ್ಜಿ ಸಲ್ಲಿಸಿ, ಕೆಎಟಿಗೂ ಅರ್ಜಿ ಹಾಕಿ.
ಉತ್ತರಾಧಿಕಾರಿಗಳಿಗೆ ಸೇರುತ್ತದೆ
-ಗೋಪಾಲರಾವ್, ಊರು ಬೇಡ
ಚಿಕ್ಕಮ್ಮನವರ ಪತಿ ಅಪಘಾತದಲ್ಲಿ ತೀರಿದ್ದು, ಈಗ ಚಿಕ್ಕಮ್ಮನೂ ಅನಾರೋಗ್ಯದಿಂದ ಮೃತಪಟ್ಟಿರುತ್ತಾರೆ. ಅವರಿಗೆ ಮಕ್ಕಳಿಲ್ಲದಿರುವ ಕಾರಣ ನಾನೇ ಅವರ ಶುಶ್ರೂಷೆ ಮಾಡಿರುತ್ತೇನೆ. ಚಿಕ್ಕಮ್ಮ ತೀರಿಕೊಂಡಾಗಲೂ ನಾನೇ ಕ್ರಿಯಾಕರ್ಮಗಳನ್ನು ನನ್ನ ಹಣದಿಂದ ಮಾಡಿರುತ್ತೇನೆ. ಪ್ರಶ್ನೆ ಏನೆಂದರೆ, ಚಿಕ್ಕಮನ ಹೆಸರಿನಲ್ಲಿ ಒಂದು ನಿವೇಶನವಿದೆ. ನಿವೇಶನದ ದಾಖಲೆಪತ್ರಗಳೆಲ್ಲ ನನ್ನ ಬಳಿಯೇ ಇದೆ. ಆ ನಿವೇಶನದ ಮೇಲೆ ನನಗೆ ಹಕ್ಕಿದೆಯೇ?
- ಕಲಂ 15 ಹಿಂದೂ ಉತ್ತರಾಧಿಕಾರ ಕಾಯ್ದೆಯಂತೆ ಆಕೆಯ ಗಂಡನ ಉತ್ತರಾಧಿಕಾರಿಗಳಿಗೆ ಸೇರುತ್ತದೆ. ನೀವು ಆಕೆಯ ಗಂಡನ ಉತ್ತರಾಧಿಕಾರಿಯಾಗಿದ್ದರೆ (ಕಲಂ 8,9) ನಿಮಗೆ ಸಿಗುತ್ತದೆ.
ರಿಜಿಸ್ಟ್ರಾರ್ಗೆ ಮನವಿ ಕೊಡಿ
-ಬಿ. ಬೆಟ್ಟ ಹಲಸೂರು
ಹಾಲು ಉತ್ಪಾದಕರ ಸಂಘದಲ್ಲಿ ಹಿಂದಿನ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳು ತಮ್ಮ ಸಂಬಂಧಿಗಳು ಹಾಗೂ ಬೇಕಾದವರನ್ನು ಸೇರಿಸಿಕೊಂಡು ಹಾಲು ಸರಬರಾಜು ಮಾಡಿದ ಬಗ್ಗೆ ಚೀಟಿ ಪಡೆದು ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗುತ್ತಿದ್ದಾರೆ. ಇದರ ವಿರುದ್ಧ ಅರ್ಜಿ ಕೊಟ್ಟಿದ್ದರೂ ಈವರೆಗೆ ವಿಚಾರಣೆ ಆಗಿಲ್ಲ. ಈಗ ಏನು ಮಾಡಬಹುದು?
- ಸಹಕಾರ ಸಂಘಗಳ ಕಾಯ್ದೆ 1959, ಇದರ ಕಲಂ 6ರಂತೆ 10 ಜನಕ್ಕೆ ಕಡಿಮೆ ಇಲ್ಲದಂತೆ ವ್ಯಕ್ತಿಗಳು ಸೇರಿ ಸಂಘ ರಚಿಸಿಕೊಳ್ಳಬಹುದು. ಆದರೆ ಆ ಹತ್ತೂ ಜನರು ಒಂದೇ ಕುಟುಂಬದವರಾಗಿರಬಾರದು. ಅಂದರೆ 10ಕ್ಕಿಂತ ಜಾಸ್ತಿ ಜನ ಬೇರೆ ಬೇರೆಯವರಾಗಿದ್ದು ಅದರಲ್ಲಿ ಹತ್ತು ಜನ ಕುಟುಂಬದವರಾದರೆ ಅಭ್ಯಂತರವಿಲ್ಲ. (6(2)(ಸಿ)) ಕಲಂ ಪ್ರಕಾರ ಯಾರು ಬೇಕಾದರೂ ಸದಸ್ಯತ್ವಕ್ಕೆ ಅರ್ಜಿ ಹಾಕಬಹುದು. ಆದ್ದರಿಂದ ನೀವು ಕೊಟ್ಟ ಅರ್ಜಿ ವಿಚಾರಣೆ ತ್ವರಿತಗೊಳಿಸುವಂತೆ ಟಿಆರ್ಸಿಎಸ್ಗೆ ಮನವಿ ಮಾಡಿ. ಅಗತ್ಯಬಿದ್ದರೆ ಜಂಟಿ ರಿಜಿಸ್ಟ್ರಾರ್, ರಿಜಿಸ್ಟ್ರಾರ್ಗೆ ಮನವಿ ಕೊಡಿ.
ಬಂಧುಗಳ ಮೂಲಕ ದಾವಾ ಹಾಕಿ
-ಕಾರ್ತಿಕ್ ಎಂ., ಮಠದದೊಡ್ಡಿ
ತಂದೆಯ ತಂದೆ(ತಾತ) ಸ್ವಯಾರ್ಜಿತ ಆಸ್ತಿಯ ವಿಲ್ ಬರೆದು ತಮ್ಮ ಕಾಲಾನಂತರ ನಮ್ಮ ಅಜ್ಜಿಗೂ, ಆಕೆಯ ಕಾಲಾನಂತರ ನನಗೂ (ಮೊಮ್ಮಗ) ಸೇರಬೇಕೆಂದು ವಿಲ್ ಬರೆದು ರಿಜಿಸ್ಟರ್ ಮಾಡಿರುತ್ತಾರೆ. ತಾತ 22.11.2005ರಲ್ಲಿ ಮರಣಹೊಂದಿದರು. ನಂತರ ಅಜ್ಜಿಯ ಹೆಸರಿಗೆ ಖಾತೆಯಾಯಿತು. ಈ ಮಧ್ಯೆ ನಮ್ಮ ತಾಯಿಯ ಸಾವಿಗೆ ತಂದೆಯೇ ಕಾರಣವೆಂದು ಅಕ್ಕ ದೂರು ನೀಡಿ ತಂದೆ ಜೈಲಿನಲ್ಲಿದ್ದು, ಜಾಮೀನಿನ ಮೇಲೆ ಹೊರಬಂದು, ಗಲಾಟೆ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡರು. ನಮ್ಮ ಅಜ್ಜಿ ತಮ್ಮ ಹೆಣ್ಣುಮಕ್ಕಳಿಗೆ ತಾತನ ಆಸ್ತಿಯನ್ನು ದಾನಪತ್ರದ ಮೂಲಕ ಕೊಟ್ಟರು. ಅವರು ನಮಗೆ ಜಮೀನು ಬಿಟ್ಟುಕೊಡುತ್ತಿಲ್ಲ. ಈ ನಡುವೆ ಅಜ್ಜಿಯೂ 2013ರಲ್ಲಿ ತೀರಿಕೊಂಡರು. ನಾನು ಮೈನರ್ ಆಗಿದ್ದು, ಈ ಜಮೀನು ಪಡೆಯುವುದು ಹೇಗೆ?
- ಭಾರತೀಯ ಗಾರ್ಡಿಯನ್ ಕಾಯ್ದೆ 1890 ಇದರ ಕಲಂ 8ರಂತೆ ನಿಮಗೆ ಬೇಕಾದ ಹಿತೈಷಿಗಳು, ಬಂಧುಗಳ ಮೂಲಕ ಜಿಲ್ಲಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ ಅವರನ್ನು ನಿಮ್ಮ ಗಾರ್ಡಿಯನ್ ಆಗಿ ನೇಮಿಸಲು ಕೋರಿ ಆದೇಶ ಪಡೆದುಕೊಳ್ಳಿ. ನಂತರ ಆ ಗಾರ್ಡಿಯನ್ನರು ನಿಮ್ಮ ಪರವಾಗಿ ಕೋರ್ಟಿನಲ್ಲಿ ದಾವಾ ಹಾಕಿ ನಿಮ್ಮ ಅರ್ಜಿ ದಾನಪತ್ರವನ್ನು ವಜಾ ಮಾಡಿ ನಿಮ್ಮ ತಾತನ ಮರಣಶಾಸನವನ್ನು ಜಾರಿಗೊಳಿಸಲು ಕೋರಿ ದಾವಾ ಹಾಕಬೇಕು.
- ಎಚ್.ಆರ್. ಕಸ್ತೂರಿರಂಗನ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

