ಇನ್ನೊಂದು ಮನೆ

ಯಾರೋ ಶೇಕ್‌ಸ್ಪಿಯರ್‌ನನ್ನು ಕೇಳಿದರು: 'ನೀನು ನಿನಗಿಂತ ದೊಡ್ಡವಳನ್ನು ಯಾಕೆ ಮದುವೆಯಾದೆ?' ಅದಕ್ಕೆ ಆತ...
ಇನ್ನೊಂದು ಮನೆ
Updated on: 

ಯಾರೋ ಶೇಕ್‌ಸ್ಪಿಯರ್‌ನನ್ನು ಕೇಳಿದರು: 'ನೀನು ನಿನಗಿಂತ ದೊಡ್ಡವಳನ್ನು ಯಾಕೆ ಮದುವೆಯಾದೆ?' ಅದಕ್ಕೆ ಆತ ಒಂದು ಕ್ಯಾಲೆಂಡರ್ ತೋರಿಸುತ್ತ ಉತ್ತರಿಸಿದ್ದು ಹೀಗೆ:
A Week Has 7 Days;
Can U Say Which Day Is Younger,
Either Sunday Or Saturday ??
So, Love Comes From Heart Not In Age
Love Has No Age
ನಮ್ಮ ಕೆಲ ರಾಜಕಾರಣಿಗಳನ್ನು ನೆನಪಿಸಿಕೊಂಡಾಗಲೆಲ್ಲ ಈ ಮಾತು ನೆನಪಿಗೆ ಬಂದರೆ, ತಮಾಷೆಯಾಗಿ ಕಂಡರೆ ಅಚ್ಚರಿ ಇಲ್ಲ. ಹಾಗಂತ ಇದು ನಗುವ ವಿಚಾರವೇನಲ್ಲ. ಪ್ರೀತಿಗೆ ಜಾತಿ, ಧರ್ಮ, ದೇಶ, ಭಾಷೆ ಹಾಗೇ ವಯಸ್ಸಿನ ಹಂಗಿಲ್ಲ ನಿಜ. ಜಾತಿ, ಧರ್ಮ, ದೇಶ, ಭಾಷೆಯ ಚೌಕಟ್ಟಿನೊಳಗಷ್ಟೇ ಹುಟ್ಟುವ ಬಾಂಧವ್ಯ ಅಸಲಿಗೆ ಪ್ರೀತಿಯೂ ಅಲ್ಲ.
'ಪ್ರೀತಿ- ವಯಸ್ಸು' ಕುರಿತು ಇಷ್ಟೆಲ್ಲ ಪೀಠಿಕೆ ಹಾಕಲು ಕಾರಣವೂ ಉಂಟು. ಅದು ದಿಗ್ವಿಜಯ್ ಸಿಂಗ್. ನಮ್ಮ ಈ ಹಿರಿಯ ಕಾಂಗ್ರೆಸ್ಸಿಗ. ಅವರೀಗ ಟೀವಿ ನಿರೂಪಕಿ ಅಮೃತಾ ರಾಯ್ ಪ್ರೀತಿಯಲ್ಲಿ ಬಿದ್ದಿದ್ದಾರೆ. ಈ ಸುದ್ದಿ ಕೇಳಿ ಬಹುತೇಕರು ಈಗಾಗಲೇ ಅಚ್ಚರಿ, ಆಘಾತ ವ್ಯಕ್ತಪಡಿಸಿದ್ದಾರೆ. ಮೊನ್ನೆ ಮೊನ್ನೆಯಷ್ಟೆ ಮೊಮ್ಮಕ್ಕಳ ತಲೆಗೆ ಆರತಕ್ಷತೆ ಹಾಕಿದ್ದ ದಿಗ್ವಿಜಯ್ ಈಗ ತಮ್ಮ ಮದುವೆಯ ಸಿದ್ಧತೆ ನಡೆಸುತ್ತಿದ್ದಾರೆ. ಈ ಸುದ್ದಿ ಕೇಳಿದ ಕೆಲವರು ದಿಗ್ವಿಜಯ್‌ರ ನಿರ್ಧಾರವನ್ನು ಬೆಂಬಲಿಸಿದರೆ ಇನ್ನು ಗೇಲಿ ಮಾಡಿದವರೂ ಇದ್ದಾರೆ. ಮತ್ತೆ ಕೆಲವರು ಇವರಿಗೇನು ಬಂತಪ್ಪಾ ಕೇಡು ಎಂದು ಹಳಹಳಿಸಿದ್ದೂ ಉಂಟು. ತಮ್ಮ ಪ್ರೇಮ ಪ್ರಕರಣವನ್ನು ದಿಗ್ವಿಜಯ್ ಸಿಂಗ್ ವೈಯಕ್ತಿಕ ವಿಚಾರ ಎಂದಿದ್ದಾರೆ. ಕೆಲವೇ ದಿನಗಳಲ್ಲಿ ಕಾನೂನು ಪ್ರಕಾರ ಮದುವೆಯಾಗುತ್ತಿರುವುದಾಗಿಯೂ ಘೋಷಿಸಿದ್ದಾರೆ. ಹಾಗಿದ್ದ ಮೇಲೆ ಅವರ ಈ ವೈಯಕ್ತಿಕ ಜೀವನದ ಕುರಿತು ಯಾಕೆ ಇಷ್ಟೊಂದು ಚರ್ಚೆ ನಡೆಯಬೇಕು?
ಮದುವೆ, ಪ್ರೀತಿ ಅನ್ನುವುದು ವೈಯಕ್ತಿಕ ವಿಚಾರ. ಆ ವಿಚಾರದಲ್ಲಿ ಮೂಗು ತೂರಿಸುವ ಅಧಿಕಾರ ನಮಗ್ಯಾರಿಗೂ ಇಲ್ಲ. ಒಪ್ಪಿಕೊಳ್ಳೋಣ. ಆದರೆ, ದಿಗ್ವಿಜಯ್ ಸಿಂಗ್ ಸಾಮಾನ್ಯ ವ್ಯಕ್ತಿಯೇನಲ್ಲ. ಮೂರು ಬಾರಿ ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿದ್ದವರು. ಕೇಂದ್ರದಲ್ಲಿ ಉನ್ನತ ಹುದ್ದೆಯನ್ನು ಅಲಂಕರಿಸಿದವರು. ಹಲವು ವರ್ಷಗಳಿಂದ ಸಾರ್ವಜನಿಕ ಜೀವನದಲ್ಲಿರುವ ವ್ಯಕ್ತಿಯೊಬ್ಬರು ತಮ್ಮ 67ನೇ ವಯಸ್ಸಿನಲ್ಲಿ ಮತ್ತೊಂದು ಮದುವೆಗೆ ಸಿದ್ಧವಾಗುತ್ತಿದ್ದಾರೆ ಎಂದರೆ ಕುತೂಹಲ ಹುಟ್ಟದೇ ಇದ್ದೀತೇ?
ಇಂಥ ಕುತೂಹಲ ಇಟ್ಟುಕೊಂಡೇ ದಿಗ್ವಿಜಯ್‌ರಂತೆ ಪ್ರೇಮದ ಬಲೆಗೆ ಬಿದ್ದ ಅನೇಕ ರಾಜಕಾರಣಿಗಳ ಮೇಲೊಂದು ದೃಷ್ಟಿ ನೆಟ್ಟಾಗ ಅನೇಕರ ಹೆಸರು ನಮ್ಮ ಚಿತ್ತಪಟದ ಮುಂದೆ ಹಾದು ಹೋಗುತ್ತದೆ. ಚಾಂದ್ ಮೋಹನ್, ಎನ್.ಡಿ. ತಿವಾರಿ, ಎನ್.ಟಿ.ಆರ್, ರಾಮದಾಸ್, ರೇಣುಕಾಚಾರ್ಯ, ಎಚ್.ಡಿ. ಕುಮಾರಸ್ವಾಮಿ, ಶಶಿ ತರೂರ್... ಹೀಗೆ ಈ ಪಟ್ಟಿಗೆ ಕೊನೆಯಿಲ್ಲ. ದುರಂತವೆಂದರೆ ಇಂಥ ರಾಜಕಾರಣಿಗಳ 'ಸೆಕೆಂಡ್ ಇನ್ನಿಂಗ್ಸ್‌'ನ ಆಯುಷ್ಯ ಮಾತ್ರ ಅಲ್ಪ. ಕೆಲವು ದುರಂತ ಕಂಡದ್ದೂ ಇದೆ.

50ರ ಪ್ರೇಮ...
ಇಷ್ಟಕ್ಕೂ 50 ದಾಟಿದ ಮೇಲೆ ನಮ್ಮ ರಾಜಕಾರಣಿಗಳು ಇಂಥದ್ದೊಂದು ಸಂಬಂಧದ ಹುಕಿಗೆ ಯಾಕೆ ಬೀಳುತ್ತಾರೆ? ದಿಗ್ವಿಜಯ್ ಸಿಂಗ್ ಅವರಾದರೂ ಒಬ್ಬ ವಿಧುರ. ಆದರೆ, ನಮ್ಮಲ್ಲಿ ಬಹುತೇಕರು ಬೆಳೆದು ನಿಂತ ಮಕ್ಕಳು, ಕೈಹಿಡಿದ ಪತ್ನಿ ಜೀವಂತವಾಗಿದ್ದರೂ ಬೇಲಿ ಹಾರಿದವರೇ. ಅವರು ತಮ್ಮ ರಾಜಕೀಯ ಭವಿಷ್ಯವನ್ನೇ ಪಣಕ್ಕೊಡ್ಡಿ ಇಂಥದ್ದೊಂದು ನಿರ್ಧಾರಕ್ಕೆ ಬರುವ ಕಾರಣವಾದರೂ ಏನು?
ಈ ಪ್ರಶ್ನೆಗೆ ಉತ್ತರ ಹುಡುಕುವುದು ಕಷ್ಟ. ರಾಜಕಾರಣಿಗಳ ಬಳಿ ಹಣ, ಹೆಸರಿಗೆ ಕೊರತೆಯಿಲ್ಲ. ಇಷ್ಟೆಲ್ಲಾ ಇದ್ದರೂ ಸಾಂಸಾರಿಕ ಜೀವನದಲ್ಲಿನ ಸಣ್ಣದೊಂದು ಕೊರತೆ, ಇಲ್ಲದ್ದರ ಕಡೆಗಿನ ಸೆಳೆತ ಅವರನ್ನು ಮತ್ತೊಂದು ಮಹಿಳೆಯ ಆಕರ್ಷಣೆಗೆ ಬೀಳುವಂತೆ ಮಾಡಬಹುದೇನೋ? ಶಶಿ ತರೂರ್‌ರಂಥವರು ಸ್ಟೇಟಸ್, ಸಮಾನ ಅಭಿರುಚಿಯನ್ನು ಗಮನದಲ್ಲಿಟ್ಟುಕೊಂಡು ಮತ್ತೊಂದು ಹೆಣ್ಣಲ್ಲಿ ಸೂಕ್ತ ಸಂಗಾತಿಯನ್ನು ಕಾಣಬಹುದು. ಇಂಥವುಗಳಲ್ಲಿ ಬಹುತೇಕವು ಹೈಪ್ರೊಫೈಲ್ ಪ್ರೇಮ ಪ್ರಕರಣಗಳು. ಹೈಪ್ರೊಫೈಲ್ ವರ್ಗದ ಜನರಿಗೆ ಇದೆಲ್ಲ ಹೊಸತಲ್ಲ. ಇದಕ್ಕಾಗಿ ಅವರು ಯಾವುದಕ್ಕೂ ಉತ್ತರ ಕೊಡಬೇಕಾಗೂ ಇಲ್ಲ.



ಕರ್ನಾಟಕದಲ್ಲೂ ಇದ್ದಾರೆ ಸ್ವಾಮಿ!
ಕರ್ನಾಟಕದಲ್ಲೂ ಮದುವೆಯಾಚೆಗಿನ ಸಂಬಂಧ ಇಟ್ಟುಕೊಂಡ ರಾಜಕಾರಣಿಗಳು ಅನೇಕರಿದ್ದಾರೆ. ಹುಡುಕಿದರೆ ಒಂದು ಡಜನ್ ರಾಜಕಾರಣಿಗಳ ಹೆಸರು ಪಟ್ಟಿ ಮಾಡಬಹುದೇನೋ? ರೇಣುಕಾಚಾರ್ಯರಂಥ ಒಂದಿಬ್ಬರ ಪ್ರಕರಣ ಬಹಿರಂಗವಾಗಿ ಎಡವಟ್ಟು ಆಗಿದ್ದು ಬಿಟ್ಟರೆ ಬಹುತೇಕರದು ಎಲ್ಲವೂ ಗುಪ್ತ್ ಗುಪ್ತ್. ಇನ್ನು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತಮ್ಮ ಎರಡನೇ ಪತ್ನಿ, ನಟಿ ರಾಧಿಕಾಗೆ ಅಧಿಕೃತ ಸ್ಥಾನಮಾನ ನೀಡಿದ್ದಾರೆ. ಹಾಗೆ ನೋಡಿದರೆ ಈ ರೀತಿಯ ಈ ವಿವಾಹೇತರ ಸಂಬಂಧದ ಕುರಿತು ಉಳಿದವರಿಗೆ ಗೊತ್ತಿಲ್ಲ ಅಂತೇನೂ ಅಲ್ಲ. ಆದರೆ, ಅವರ್ಯಾರೂ ಈ ವಿಚಾರದ ಕುರಿತು ತುಟಿಕ್ ಪಿಟಕ್ ಅನ್ನಲ್ಲ. ಇದೇ ನಮ್ಮ ರಾಜಕಾರಣಿಗಳ ವಿಶೇಷ. ನಮ್ಮವರ್ಯಾವತ್ತೂ ವೈಯಕ್ತಿಕ ಜೀವನಕ್ಕೂ ರಾಜಕಾರಣಕ್ಕೂ ತಳಕು ಹಾಕುವುದೇ ಇಲ್ಲ. ಯಾಕೇಂದ್ರೆ ಬಾಯ್‌ಬಿಟ್ಟರೆ ತಮ್ಮ ಬಣ್ಣ ಎಲ್ಲಿ ಬಯಲಾಗುವುದೋ ಎನ್ನುವ ಆತಂಕ ಬಹುತೇಕರಿಗಿದೆ.

ಚಾಂದ್- ಫಿಜಾ
ಮಧ್ಯವಯಸ್ಕ ಚಾಂದರ್‌ಮೋಹನ್ ಹಾಗೂ ಹರ್ಯಾಣದ ಸಹಾಯಕ ಅಡ್ವೋಕೇಟ್ ಜನರಲ್ ಅನುರಾಧಾ ಬಾಲಿ ಡಿ.7, 2008ರಂದು ಟೀವಿ ಮುಂದೆ ನಿಂತು ತಮ್ಮ ಮದುವೆಯ ಸುದ್ದಿ ಘೋಷಿಸಿದಾಗ ಇಡೀ ದೇಶದ ರಾಜಕೀಯ ವಲಯ ಒಮ್ಮೆ ಆಘಾತಕ್ಕೊಳಗಾಗಿತ್ತು. ಚಾಂದರ್‌ಮೋಹನ್ ಸಾಮಾನ್ಯ ವ್ಯಕ್ತಿಯೇನೂ ಆಗಿರಲಿಲ್ಲ. ಆಗಿನ ಮುಖ್ಯಮಂತ್ರಿ ಭಜನ್‌ಲಾಲ್ ಪುತ್ರ. ಅಷ್ಟೇ ಆಗಿದ್ದರೆ ದೊಡ್ಡ ವಿಷಯ ಆಗುತ್ತಿರಲಿಲ್ಲ. ಚಾಂದ್ ಉಪಮುಖ್ಯಮಂತ್ರಿಯೂ ಆಗಿದ್ದರು. ಪತ್ನಿ, ಪ್ರಾಯಕ್ಕೆ ಬಂದ ಮಕ್ಕಳಿರುವಾಗಲೇ ಚಾಂದರ್ ರಾತ್ರೋರಾತ್ರಿ ಮಧ್ಯವಯಸ್ಕ ಮಹಿಳೆಯ ಜತೆಗೆ ನಾಪತ್ತೆಯಾಗುತ್ತಾರೆ, ತಿಂಗಳುಗಳ ನಂತರ ನಾವು ಮದುವೆಯಾಗಿದ್ದೇವೆ, ಇದಕ್ಕಾಗಿ ಮುಸ್ಲಿಂ ಧರ್ಮ (ಚಾಂದರ್ ಮೋಹನ್ ಚಾಂದ್ ಹಾಗೂ ಅನುರಾಧಾ ಬಾಲಿ ಫಿಜಾ ಆಗಿ ಹೆಸರನ್ನೂ ಬದಲಾಯಿಸಿಕೊಂಡಿದ್ದರು)ಕ್ಕೆ ಮತಾಂತರಗೊಂಡಿದ್ದೇವೆ ಎಂದು ಟಿವಿ ಕ್ಯಾಮೆರಾ ಮುಂದೆ ನಿಂತು ಘೋಷಣೆ ಮಾಡುತ್ತಾರೆಂದರೆ ತಮಾಷೆಯ ವಿಚಾರವಲ್ಲ. ಟೀವಿ ವಾಹಿನಿಗಳಲ್ಲಿ ಈ ನವಜೋಡಿಯ ಸುದ್ದಿ ದಿನವಿಡೀ ರಸವತ್ತಾಗಿ ಪ್ರಸಾರವಾಯಿತು. ಇದ್ಯಾವುದರ ಕುರಿತೂ ತಲೆಕೆಡಿಸಿಕೊಳ್ಳದ ಜೋಡಿ ಸುಮಾರು ಒಂದು ತಿಂಗಳು ನೆಮ್ಮದಿಯ ಜೀವನ ನಡೆಸಿತು. ಬಹುಶಃ ಜ.29ರಂದು ಫಿಜಾನ ಮನೆಯಿಂದ ಹೊರಹೋದ ಚಾಂದರ್ ಮತ್ತೆ ಹಿಂತಿರುಗಲೇ ಇಲ್ಲ. ಫಿಜಾ ಪತ್ರಿಕಾಗೋಷ್ಠಿ ಕರೆದು ಚಾಂದ್ ಸಹೋದರ ಕುಲ್‌ದೀಪ್ ಬಿಷ್ಣೋಯ್ ವಿರುದ್ಧ ಪತಿಯನ್ನು ಕಿಡ್ನಾಪ್ ಮಾಡಿದ ಆರೋಪ ಹೊರಿಸುತ್ತಾರೆ. ಇದಾದ ಕೆಲವೇ ಗಂಟೆಗಳಲ್ಲಿ ಮೊದಲ ಪತ್ನಿ ಸೀಮಾ ಮತ್ತು ಮಕ್ಕಳ ನೆನಪಾಗಿ ತಾನು ಮನೆಗೆ ವಾಪಸಾಗಿರುವುದಾಗಿ ಚಾಂದರ್ ಸ್ಪಷ್ಟನೆ ನೀಡುತ್ತಾರೆ. ಎರಡು ತಿಂಗಳ ಬಳಿಕ ಲಂಡನ್‌ನಿಂದ ಚಾಂದ್ ಫಿಜಾಗೆ ಕರೆ ಮಾಡುತ್ತಾರೆ. ಫೋನ್ ಮೂಲಕ ಮೂರು ಬಾರಿ ತಲಾಕ್ ತಲಾಕ್ ತಲಾಕ್ ಅನ್ನುತ್ತಾರೆ. ಇದಾದ ಎರಡು ವರ್ಷಗಳಲ್ಲಿ ಫಿಜಾ ತನ್ನ ಮನೆಯಲ್ಲಿ ಅನಾಥ ಹೆಣವಾಗಿ ಮಲಗುತ್ತಾಳೆ. ಅಲ್ಲಿಗೆ ಚಾಂದರ್‌ಮೋಹನ್- ಫಿಜಾ ಲವ್‌ಸ್ಟೋರಿ ಅಂತ್ಯವಾಗುತ್ತದೆ. ಕೆಲವರ ಕಣ್ಣಿಗೆ ಇದು ಆತ್ಮಹತ್ಯೆಯಾಗಿ ಕಂಡರೆ ಇನ್ನು ಕೆಲವರಿಗೆ ಹತ್ಯೆಯಾಗಿ ಕಾಣುತ್ತದೆ.

ಕೇಂದ್ರ ಸಚಿವನ ಪುತ್ರಿಗೇ ಕಣ್ಣು ಹಾಕಿದ್ದ ತಿವಾರಿ
ಎನ್.ಡಿ. ತಿವಾರಿ. ಇದು ದಶಕಗಳ ಹಿಂದೆ ಪರಿಚಿತ ಹೆಸರು. ತಿವಾರಿ ಎನ್ನುವ ಮಹಾನ್ ರಸಿಕ ರಾಜಕಾರಣಿ ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ, ಕೇಂದ್ರದ ಮಾಜಿ ಸಚಿವ, ಆಂಧ್ರದ ಮಾಜಿ ರಾಜ್ಯಪಾಲ ಹೀಗೆ ತಮ್ಮ ಸುದೀರ್ಘ ರಾಜಕೀಯ ಜೀವನದಲ್ಲಿ ಅನೇಕ ಉನ್ನತ ಹುದ್ದೆಗಳನ್ನು ಅಲಂಕರಿಸಿದವರು. ಈಗ ಇಳಿಗಾಲದಲ್ಲಿ ಅಂದರೆ 86ನೇ ವಯಸ್ಸಲ್ಲಿ ವಿವಾಹೇತರ ಸಂಬಂಧದಿಂದ ತನಗೊಬ್ಬ ಮಗನಿದ್ದಾನೆ ಎಂಬುದನ್ನು ಒಪ್ಪಿಕೊಂಡಿದ್ದಾರೆ. 1968ರಲ್ಲಿ ಕೇಂದ್ರ ಸಚಿವರಾಗಿದ್ದ ಶೇರ್ ಸಿಂಗ್ ಇವರ ರಾಜಕೀಯ ಗುರು. ಹಾಗಾಗಿ ಶೇರ್‌ಸಿಂಗ್ ಮನೆಗೆ ಆಗಾಗ್ಗೆ ಭೇಟಿ ನೀಡುತ್ತಿದ್ದರು. ಆಗ ಯುವಕಾಂಗ್ರೆಸ್ ಅಧ್ಯಕ್ಷರಾಗಿದ್ದ ತಿವಾರಿ ಕಣ್ಣು ಉಜ್ವಲಾ ಶರ್ಮಾ ಮೇಲೆ ಬಿತ್ತು. ಉಜ್ವಲಾ, ಶೇರ್‌ಸಿಂಗ್ ಪುತ್ರಿ. ಪತಿ ಬಿ.ಎಲ್. ಶರ್ಮಾರಿಂದ ಆಗಷ್ಟೇ ದೂರವಾಗಿದ್ದ ಉಜ್ವಲಾ ಮತ್ತು ತಿವಾರಿ ನಡುವಿನ ಪರಿಚಯ ಪ್ರೇಮಕ್ಕೆ ತಿರುಗಿ ರೋಹಿತ್ ಎನ್ನುವ ಮಗನೂ ಹುಟ್ಟಿದ್ದ. ಆದರೆ, ರಾಜಕೀಯದಲ್ಲಿ ಮೇಲೇರುತ್ತಿದ್ದಂತೆ ತಿವಾರಿ ಉಜ್ವಲಾ ಅವರನ್ನು ಕಡೆಗಣಿಸಲು ಆರಂಭಿಸಿದರು. ನಿಯಮಿತವಾಗಿ ಉಜ್ವಲಾ ಮನೆಗೆ ಭೇಟಿ ಕೊಡುತ್ತಿದ್ದ ತಿವಾರಿ ನಂತರ ಅದನ್ನೂ ನಿಲ್ಲಿಸಿದರು. ರೋಹಿತ್ ತನ್ನ ಪುತ್ರ ಎನ್ನುವುದನ್ನು ಒಪ್ಪಿಕೊಳ್ಳಲೂ ನಿರಾಕರಿಸಿದರು. ಕೊನೆಗೆ ಸುದೀರ್ಘ ಕಾನೂನು ಹೋರಾಟದ ಬಳಿಕ ಈಗ ರೋಹಿತ್ ತನ್ನ ಪುತ್ರ ಎಂದು ಅನಿವಾರ್ಯವಾಗಿ ಒಪ್ಪಿಕೊಂಡಿದ್ದಾರೆ.

ಎನ್‌ಟಿಆರ್- ಲಕ್ಷ್ಮಿ
1993ರಲ್ಲಿ ದಕ್ಷಿಣ ಭಾರತದ ಖ್ಯಾತ ನಟ, ಆಂಧ್ರದ ಪ್ರಮುಖ ರಾಜಕಾರಣಿ ಎನ್‌ಟಿಆರ್ ಅವರು ತಮ್ಮ ಆತ್ಮಚರಿತ್ರೆ ಬರೆದ ಲೇಖಕಿ ಲಕ್ಷ್ಮಿ ಪಾರ್ವತಿ ಅವರನ್ನು ಮದುವೆಯಾದರು. 70ರ ಹರೆಯದಲ್ಲಿ ಎನ್‌ಟಿಆರ್‌ಗೇನಿಂಥ ಹುಚ್ಚು ಎಂದು ಬಹುತೇಕರು ಅವರನ್ನು ಹಳಿದದ್ದುಂಟು. ಎನ್‌ಟಿಆರ್ ಕುಟುಂಬ ಕೂಡ ಪಾರ್ವತಿ ಅವರನ್ನು ಈವರೆಗೂ ಹತ್ತಿರ ಬಿಟ್ಟುಕೊಂಡಿಲ್ಲ.

ಫ್ರಾಂಕೋಯಿಸ್ ಹೊಲಾಂಡೆ
ಕಳೆದ ವರ್ಷ ವಿಶ್ವಮಟ್ಟದಲ್ಲಿ ಹೆಚ್ಚು ಚರ್ಚೆಯಾದ ಲವ್‌ಸ್ಟೋರಿ ಇದು. ಫ್ರಾನ್ಸ್ ಅಧ್ಯಕ್ಷ ಫ್ರಾಂಕೋಯಿಸ್ ಹೊಲಾಂಡೆ ಅವರು ವೆಲೆರಿ ಟ್ರೈರೆವೆಲಿಯರ್ ಜತೆಗಿದ್ದಾಗಲೇ ನಟಿ ಜೂಲಿ ಗಯೆಟ್ ಜತೆಗೆ ಕದ್ದುಮುಚ್ಚಿ ಸಂಬಂಧ ಇಟ್ಟುಕೊಂಡಿದ್ದು ಭಾರಿ ಚರ್ಚೆಗೆ ಕಾರಣವಾಗಿತ್ತು. ಕೊನೆಗೆ ವೆಲೆರಿ ಫ್ರಾನ್ಸ್‌ನ ಅಧ್ಯಕ್ಷರ ಪತ್ನಿ ಸ್ಥಾನಮಾನವನ್ನು ಜೂಲಿಗೆ ಬಿಟ್ಟುಕೊಡಬೇಕಾಯಿತು.

ಮಧುಮಿತಾ ಶುಕ್ಲಾ- ಅಮರ್‌ಮಣಿ ತ್ರಿಪಾಠಿ
ಇದೊಂದು ದುರಂತ ಲವ್‌ಸ್ಟೋರಿ! ಉತ್ತರಪ್ರದೇಶದ ಯುವ ಕವಯತ್ರಿ ಮಧುಮಿತಾ ಶುಕ್ಲಾ ಮತ್ತು ಮಾಜಿ ಸಚಿವ, ಎಸ್ಪಿ ಮುಖಂಡ ಅಮರ್‌ಮಣಿ ತ್ರಿಪಾಠಿ ಪರಿಚಿತರಾದದ್ದು ಕಾರ್ಯಕ್ರಮವೊಂದರಲ್ಲಿ. ನಂತರ ಈ ಪರಿಚಯ ಪ್ರೇಮಕ್ಕೆ ತಿರುಗಿ ಮಧುಮಿತ ಗರ್ಭವತಿಯೂ ಆಗಿದ್ದರು. ಆದರೆ, ಕೊನೆಗೆ ದುರಂತ ಸಾವು ಕಂಡರು. ಮಧುಮಿತಾ ಸಾವಿಗೆ ಸಂಬಂಧಿಸಿ ತ್ರಿಪಾಠಿ ಶಿಕ್ಷೆಗೆ ಗುರಿಯಾಗಿದ್ದಾರೆ. ಮಧುಮಿತಾ ಜತೆಗೆ ಸಂಬಂಧ ಬೆಳೆಸುವ ವೇಳೆಗಾಗಲೇ ತ್ರಿಪಾಠಿ ಅವರಿಗೆ ಮದುವೆಯಾಗಿ ಮಕ್ಕಳಾಗಿತ್ತು.

ನೆಹರೂ ಲೇಡಿ ಎಡ್ವಿನಾ
ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಹಾಗೂ ಲೇಡಿ ಎಡ್ವಿನಾ ಮೌಂಟ್‌ಬ್ಯಾಟನ್ ನಡುವಿನ ಸಂಬಂಧ ಬಹುತೇಕರಿಗೆ ಈಗಲೂ ಕುತೂಹಲದ ವಿಚಾರ. ಭಾರತದ ವೈಸರಾಯ್ ಆಗಿದ್ದ ಲಾರ್ಡ್ ಲೂಯಿಸ್ ಮೌಂಟ್‌ಬ್ಯಾಟನ್ ಪತ್ನಿಯಾಗಿದ್ದ ಎಡ್ವಿನಾ ಜತೆಗೆ ನೆಹರೂ ಮಾನಸಿಕವಾಗಿ ಹೆಚ್ಚು ಆತ್ಮೀಯರಾಗಿದ್ದರು.



ತರೂರ್- ಪುಷ್ಕರ್
ಕಾಶ್ಮೀರದ ಮಹಿಳಾ ಉದ್ಯಮಿ ಸುನಂದಾ ಪುಷ್ಕರ್ ಮತ್ತು ಕಾಂಗ್ರೆಸ್‌ನ ಹಿರಿಯ ಮುಖಂಡ ಶಶಿತರೂರ್ ನಡುವಿನ ಪ್ರೇಮ ಪ್ರಕರಣ ದೇಶದ ಉದ್ದಗಲಕ್ಕೂ ಪರಿಚಿತ. ಮಧ್ಯವಯಸ್ಸು ದಾಟಿದ ಈ ಇಬ್ಬರು ಹೈಪ್ರೊಫೈಲ್ ಪ್ರೇಮಿಗಳು ತಮ್ಮ ಸಂಬಂಧವನ್ನು ಬಹಿರಂಗವಾಗಿಯೇ ಒಪ್ಪಿಕೊಂಡವರು. ನಾಲ್ಕೈದು ವರ್ಷ ಚೆನ್ನಾಗಿ ಇದ್ದ ಈ ಪ್ರೇಮಿಗಳ ನಡುವೆ ಇತ್ತೀಚೆಗೆ ಯಾಕೋ ಮನಸ್ತಾಪ ಶುರುವಾಗಿತ್ತು. ಪಾಕಿಸ್ತಾನದ ಪತ್ರಕರ್ತೆ ಮೆಹರ್ ತರಾರ್‌ಳ ಟ್ವೀಟ್ ಸುನಂದ ಮತ್ತು ತರೂರ್ ನಡುವಿನ ಸಂಬಂಧದಲ್ಲಿ ಹುಳಿ ಹಿಂಡಿತ್ತು. ಇದಾದ ಬೆನ್ನಲ್ಲೇ ಸುನಂದಾ ದೆಹಲಿಯ ಹೋಟೆಲ್‌ವೊಂದರಲ್ಲಿ ಹೆಣವಾಗಿ ಬಿದ್ದಿದ್ದರು.


ಫ್ರಾನ್ಸ್, ಇಟಲಿಯ ರಸಿಕರು!
ಸ್ವಚ್ಛಂದ ಬದುಕಿಗೆ ಅವಕಾಶ ಇರುವ ನಾಡಾದ ಫ್ರಾನ್ಸ್, ಇಟಲಿಯಲ್ಲಿ ಪ್ರೀತಿ, ಪ್ರೇಮ, ಪ್ರಣಯಗಳೂ ಹೆಚ್ಚು ಮುಕ್ತ ಮುಕ್ತ. ಹಾಗಾಗಿಯೇ ಜಗತ್ತಿನ ಇತರೆ ದೇಶಗಳ ರಾಜಕಾರಣಿಗಳಿಗೆ ಹೋಲಿಸಿದರೆ ಫ್ರಾನ್ಸ್‌ನ ರಾಜಕಾರಣಿಗಳು ಹೆಚ್ಚು ರಸಿಕರು ಅನ್ನಬಹುದೇನೋ? 50 ದಾಟಿದ ಮೇಲೂ ಅಲ್ಲಿನ ರಾಜಕಾರಣಿಗಳು 20- 30ರ ಆಸುಪಾಸಿನಲ್ಲಿರುವ ತರುಣಿಯ ಕೈ ಹಿಡಿಯಲು ರೇಸ್‌ಗೆ ಬೀಳುತ್ತಾರೆ.
ಸರ್ಕೋಜಿ- ಕಾರ್ಲಬ್ರೂನಿ
ಫ್ರಾನ್ಸ್‌ನ ಮಾಜಿ ಅಧ್ಯಕ್ಷ ಸರ್ಕೋಜಿ ಅವರು ತಮ್ಮ ಎರಡನೇ ಪತ್ನಿಗೆ 2007ರಲ್ಲಿ ವಿಚ್ಛೇದನ ನೀಡಿ ಗಾಯಕಿ ಕಾರ್ಲಬ್ರೂನಿ ಕೈ ಹಿಡಿದ್ದರು. 50 ದಾಟಿದ್ದ ಸರ್ಕೋರ್ಜಿ 39ರ ಹರೆಯದ ಬ್ರೂನಿ ಕೈ ಹಿಡಿದಾಗ ಎಲ್ಲರೂ ಹುಬ್ಬೇರಿಸಿದ್ದರು.


ಕ್ಲಿಂಟನ್- ಮೊನಿಕಾ
ಅಮೆರಿಕದ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಮತ್ತು ಮೋನಿಕಾ ಲೆವಿನ್‌ಸ್ಕಿ ನಡುವಿನ ಸಂಬಂಧ ವಿಶ್ವಾದ್ಯಂತ ಚರ್ಚೆಯಾದ ಪ್ರೇಮ ಪ್ರಕರಣ. ವೈಟ್ ಹೌಸ್‌ನಲ್ಲೇ ಕಾರ್ಯ ನಿರ್ವಹಿಸುತ್ತಿದ್ದ ಮೊನಿಕಾ ಜತೆಗೆ ಕ್ಲಿಂಟನ್ ಇಟ್ಟುಕೊಂಡಿದ್ದ ಸಂಬಂಧ ಬಯಲಾಗುತ್ತಿದ್ದಂತೆ ಅವರು ಪ್ರತಿಪಕ್ಷಗಳು, ಮಾಧ್ಯಮದಿಂದ ತೀವ್ರ ಟೀಕೆಗೆ ಗುರಿಯಾಗಬೇಕಾಯಿತು. ರಾಜಕೀಯವಾಗಿಯೂ ಹಿನ್ನಡೆ ಅನುಭವಿಸಬೇಕಾಯಿತು.

- ಅಜಿತ್ ಕುಮಾರ್ ಮಠದಬೆಟ್ಟು
ajithmanipal@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com