ಆರ್ಜೆ ರ್ಯಾಪಿಡ್ ರಶ್ಮಿ ಹಿಯರ್...

ಮಾತಿನ ಮನೆಯಿಂದ ನಟನೆಗೆ ಕಾಲಿಡುತ್ತಿದ್ದೀರಿ. ಹೇಗನಿಸುತ್ತಿದೆ?
ಖುಷಿಯಾಗ್ತಿದೆ. ಟಿವಿಯಿಂದ ಸಿನಿಮಾಗೆ ಹೋಗುತ್ತಾರೆ. ಆದರೆ, ರೇಡಿಯೋದಿಂದ ಚಿತ್ರರಂಗಕ್ಕೆ ಬರುತ್ತಿರುವುದು ಹೊಸ ಬೆಳವಣಿಗೆ. ಇಷ್ಟು ದಿನ ಧ್ವನಿಯಲ್ಲಿ ಕೇಳುಗ ಅಭಿಮಾನಿಗಳನ್ನು ಸಂಪಾದಿಸಿದ್ದೆ. ಈಗ ನೋಡುಗ ಅಭಿಮಾನಿಗಳ ಮನಸ್ಸುವ ಗೆಲ್ಲುವ ಹೊಣೆ. ಇದು ನನ್ನ ಹೊಸ ಸರ್ಕಸ್.
ಸಿಕ್ಕಾಪಟ್ಟೆ ಮಾತಾಡೋರೆಲ್ಲ ನಟಿಯಾಗಬಹುದೇ?
ಹಾಗೇನಿಲ್ಲ. ನಟಿಯಾಗಲು ಬೇಕಾದ ಅರ್ಹತೆಗಳೇ ಬೇರೆ, ಆರ್ಜೆಗೆ ಇರಬೇಕಾದ ಮಾನದಂಡಗಳೇ ಬೇರೆ. ನಟಿಗೆ ಮಾತಿನ ಜೊತೆಗೆ ಭಾವನೆಗಳು, ಬಾಡಿ ಲಾಂಗ್ವೇಜ್ ಮುಖ್ಯ. ಈ ವಿಚಾರದಲ್ಲಿ ನಾನು ಎಳೆ ಮಗು ಅಂದುಕೊಂಡಿದ್ದೇನೆ. ಇನ್ನು ಆರ್ಜೆ ಆಗಲು ಸಹಜ ಮತ್ತು ಶುದ್ಧ ಧ್ವನಿಯಲ್ಲಿ ಮಾತನಾಡಬೇಕು. ಇಲ್ಲಿ ಅಂದಚೆಂದ ಮುಖ್ಯವಲ್ಲ. ಆದರೆ, ಈ ಚಿತ್ರದಲ್ಲಿ ನನ್ನ ರೇಡಿಯೋ ವ್ಯಕ್ತಿತ್ವವೇ ಪಾತ್ರವಾಗಿರುವುದು ನಾಯಕಿಯಾಗಲು ಒಪ್ಪಿಕೊಂಡೆ.
ಆರ್ಜೆ ಮಾತಿಗೂ, ನಟಿಯ ಡೈಲಾಗ್ಗೂ ಇರುವ ವ್ಯತ್ಯಾಸವೇನು?
ಆರ್ಜೆ ಮಾತು ಸಹಜವಾಗಿರಬೇಕು. ಕೇಳುಗರನ್ನು ಬೇಗ ಹಿಡಿದಿಡಬೇಕು. ಮತ್ತು ನಮ್ಮ ಮಾತು ಕೇಳುವಂಥವರು ನಮ್ಮ ಜೊತೆ ಬೇಗ ಕನೆಕ್ಟ್ ಆಗುತ್ತಾರೆ. ಆದರೆ, ಸಿನಿಮಾಗಳಲ್ಲಿ ಹಾಗಲ್ಲ. ಇಲ್ಲಿ ಪಾತ್ರವನ್ನು ಆಧರಿಸಿ ಸಂಭಾಷಣೆಗಳು ಇರುತ್ತವೆ. ಆ ಪಾತ್ರಕ್ಕೆ ಜೀವ ತುಂಬುವ ಮಾತುಗಳಿಗೆ ಇಲ್ಲಿ ಹೆಚ್ಚು ಸ್ಕೋಪ್.
ರ್ಯಾಪಿಡ್ ರಶ್ಮಿ ಆರ್ಜೆ ಎನ್ನುವುದು ಬಿಟ್ಟರೆ, ನಿಮ್ಮ ಬಗ್ಗೆ ಹೆಚ್ಚು ಗೊತ್ತಿಲ್ಲದವರಿಗೆ ನಿಮ್ಮ ಕುರಿತು ಹೇಳುವುದಾದರೆ?
ನಾರ್ಮಲ್ ಹಾಗೂ ಬೋಲ್ಡ್ ಹುಡುಗಿ. ಕಟ್ಟುಪಾಡುಗಳನ್ನು ಹಾಕಿಕೊಂಡಿಲ್ಲ. ಜೀವನವನ್ನು ತುಂಬಾ ಗಂಭೀರವಾಗಿ ತೆಗೆದುಕೊಂಡಿಲ್ಲ. ಬಂದದ್ದನ್ನು ಬಂದ ಹಾಗೆ ಸ್ವೀಕರಿಸುವ ಹ್ಯಾಪಿ ಗರ್ಲ್.
ಈ ಚಿತ್ರದ ನಾಯಕ ಮಹೇಶ್, ಗೋಲ್ಡನ್ ಸ್ಟಾರ್ ಗಣೇಶ್ ಸೋದರ ಎನ್ನುವ ಕಾರಣಕ್ಕೆ ಅಭಿನಯಿಸಲು ಒಪ್ಪಿಕೊಂಡ್ರಾ?
ಖಂಡಿತಾ ಇಲ್ಲ. ಹಾಗೆ ನೋಡಿದ್ರೆ ತುಂಬಾ ಹಿಂದೆಯೇ ಎರಡು ಚಿತ್ರಗಳಲ್ಲಿ ನಟಿಸುವ ಅವಕಾಶ ಬಂತು. ಮೊದಲೇ ಹೇಳಿದಂತೆ 'ನಮಕ್ ಹರಾಮ್' ಚಿತ್ರದ ನಾಯಕಿ ನನ್ನ ಹಾಗೆಯೇ ಮಾತಿನ ಮಲ್ಲಿ. ನನ್ನ ಹಾಗೆ ಬೋಲ್ಡ್ ಧ್ವನಿ. ಹೀಗಾಗಿ ನಿರ್ದೇಶಕ ನಾಗರಾಜ್ ಅವರು ನನ್ನ ಈ ಚಿತ್ರಕ್ಕೆ ಆಯ್ಕೆ ಮಾಡಿಕೊಂಡಿದ್ದಾರೆ. ಕಥೆ ಕೇಳಿದಾಗ ನನಗೂ ಇಷ್ಟವಾಯಿತು. ನಾಯಕನ ಹಿನ್ನೆಲೆ ನೋಡಿ ಈ ಚಿತ್ರ ಒಪ್ಪಿಕೊಂಡಿಲ್ಲ.
ಸರಿ, ಈ ಚಿತ್ರಕ್ಕೆ ನೀವೇ ನಾಯಕಿ ಆಗಬೇಕು ಎನ್ನುವುದಕ್ಕೆ 5 ಕಾರಣಗಳು ಹೇಳಿ?
ನನ್ನ ಧ್ವನಿ, ಆರ್ಜೆ ವ್ಯಕ್ತಿತ್ವ, ರ್ಯಾಪಿಡ್ ರಶ್ಮಿ ಎನ್ನುವ ಬ್ರಾಂಡ್, ನನ್ನ ಮುಖ ಮತ್ತು ನನಗಿರುವ ಅಭಿಮಾನಿಗಳು... ಇವು ನಾನು ಈ ಚಿತ್ರಕ್ಕೆ ನಾಯಕಿಯಾಗಲು ಕಾರಣಗಳಾಗಿರಬಹುದು.
ನಿಮ್ಮ ಮಾತಿನಂತೆ ಚಿತ್ರದಲ್ಲೂ ನಿಮ್ಮದು ಸಖತ್ ಬೋಲ್ಡ್ ಪಾತ್ರವಂತೆ?
ನನ್ನ ಪಾತ್ರದಲ್ಲಿ ಒಂಚೂರು ಬೋಲ್ಡ್ನೆಸ್ ಇದೆ. ಮಳವಳ್ಳಿ ಸಾಯಿಕೃಷ್ಣ ಅವರ ಪಂಚಿಂಗ್ ಸಂಭಾಷಣೆಗಳಷ್ಟೇ ನನ್ನ ಪಾತ್ರವೂ ಪವರ್ಫುಲ್. ಕಥೆಗೆ ತಕ್ಕಂತೆ ನಾನು ಪಾತ್ರಕ್ಕೆ ಸಿದ್ಧತೆ ಮಾಡಿಕೊಂಡಿದ್ದೇನೆ.
ಮುಂದೆ ರ್ಯಾಪಿಡ್ ರಶ್ಮಿ ಫುಲ್ಟೈಮ್ ಸಿನಿಮಾ ನಟಿ ಆಗ್ತಾಳೆಯೇ?
ನಿಜವಾಗಲೂ ಆ ಬಗ್ಗೆ ಯೋಚಿಸಿಲ್ಲ. ಒಂದು ವೇಳೆ ಒಳ್ಳೆಯ ಪಾತ್ರಗಳು ಸಿಕ್ಕರೆ ಖಂಡಿತಾ ಅಭಿನಯಿಸುತ್ತೇನೆ.
ನೀವು ಕಂಡಂತೆ ಕನ್ನಡ ಸಿನಿಮಾ ಕುರಿತು ಹೇಳಿ...
ನಮ್ಮ ಚಿತ್ರೋದ್ಯಮಕ್ಕೆ ದೊಡ್ಡ ಇತಿಹಾಸವಿದೆ. ಬೆರಳೆಣಿಕೆಯ ಹೀರೋಗಳಿಂದ ಕೂಡಿದ ಚಿತ್ರರಂಗದಲ್ಲಿ ಈಗ ಸಾಕಷ್ಟು ಹೀರೋಗಳಿದ್ದಾರೆ. ಯಾರು ಬೇಕಾದರೂ ಇಲ್ಲಿ ಹೀರೋ ಆಗಬಹುದು. ಕಾಲಕಾಲಕ್ಕೆ ಸಿನಿಮಾಗಳು ಬದಲಾಗುತ್ತಿವೆ. ಈಗಿನ ಚಿತ್ರಗಳ ಬಗ್ಗೆ ಹೇಳುವುದಾರೆ ಇನ್ನಷ್ಟು ಪೂರ್ವ ತಯಾರಿಯ ಅಗತ್ಯವಿದೆ.
- ಆರ್. ಕೇಶವಮೂರ್ತಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


