ಖುಷಿ

ತಾಯಿ ಮರಿ

ತಾಯಿ ಮರಿ
Published On :

ಹೀಗೆ ದಿನಗಳ ಗೋಜೆಲ್ಲ ಏಕೆ ಬೇಕು ಅಂತ ಪ್ರಶ್ನಿಸುವವರಿದ್ದಾರೆ. ಇವೆಲ್ಲ ಮಾರ್ಕೆಟಿಂಗ್ ತಂತ್ರವಷ್ಟೇ ಎಂದೂ ಮನಸ್ಸು ಚೀರುತ್ತದೆ. ಅವೆಲ್ಲದರ ನಡುವೆಯೂ ದಿನಗಳನ್ನು ಹುಟ್ಟುಹಾಕಿದವರ ಉದ್ದೇಶಗಳು ಏನೇ ಇದ್ದಿರಲಿ, ಆದರೆ ನಿಗದಿಯಾದ ಆ ದಿನಕ್ಕೆ ಜಗತ್ತೇ ಒಂದು ಗುಂಗಿನಲ್ಲಿ ಬೀಳುವ ಪ್ರಯತ್ನಕ್ಕೆ ಮುಂದಾಗುವುದರಲ್ಲೂ ಒಂದು ಸೋಜಿಗವಿದೆ.
ಅಮ್ಮಂದಿರ ದಿನಕ್ಕೂ ಅನ್ವಯಿಸುತ್ತದೆ ಈ ಸಕಾರಾತ್ಮಕ ಆಯಾಮ. ಎಲ್ಲ ದಿನಗಳಲ್ಲೂ ತಾಯಿಯನ್ನು ನೆನಪಿಸಿಕೊಳ್ಳಬೇಕು ಎಂಬುದು ಸರಿಯೇ. ಹಾಗಿದ್ದೂ ಜಗತ್ತೆಲ್ಲ ಒಂದು ದಿನ ಅವಳ ಹೆಸರಲ್ಲೇ ಸಂಭ್ರಮಕ್ಕಿಳಿಯುತ್ತದೆ ಅಂತಾದರೆ ಅಂಥ ಖುಷಿಯಿಂದ ನಾವೇಕೆ ಹೊರಗಿರೋಣ? ಅಮ್ಮ, ಅಪ್ಪ, ಪ್ರೇಮಿಗಳ ಹೆಸರಿನಲ್ಲಿ ದಿನವೊಂದನ್ನು ಮಾಡಿಕೊಂಡು ಒಂದಷ್ಟು ಉಡುಗೊರೆ- ಕಾರ್ಡುಗಳ ವಾಣಿಜ್ಯ ಪ್ರಪಂಚವನ್ನು ಬೆಳೆಸಲಾಗುತ್ತಿದೆ ಎಂಬ ಆತಂಕವೇನೋ ಸರಿಯಾದುದೇ. ಆದರೂ ಅಂಥ ಜಗಮಗಗಳಿಗೇನೂ ಸಿಕ್ಕಿಬೀಳದೇ ಅಮ್ಮ ಎಂಬುದರ ಅನನ್ಯ ಆಯಾಮಗಳೆಡೆ ಕುತೂಹಲದ ತಿಣುಕಾಟವೊಂದನ್ನು ಕೈಗೊಂಡು ಆ ದಿನವನ್ನು ಅರ್ಥಪೂರ್ಣಗೊಳಿಸುವ ಆಯ್ಕೆಯೂ ನಮ್ಮದೇ. ಅಂಥ ಅವಕಾಶವೊಂದರತ್ತ ಚಿತ್ತವನ್ನು ಜೀಕಿಸಿದಾಗ ಎಲ್ಲ ತಾಯಂದಿರ ಮಹಾತಾಯಿಯ ಮಡಿಲಿಗೆ ಕರೆದೊಯ್ದುಬಿಟ್ಟಿತು. ಸಕಲರನ್ನೂ ಸಲಹುತ್ತ ತನ್ನ ಮಡಿಲಲ್ಲೇ ಅವೆಷ್ಟೋ ಅಮ್ಮಂದಿರ ಮಾದರಿಗಳನ್ನು ಉರಿಸಿಕೊಂಡ ಆ ತಾಯಿಯ ಹೆಸರು ಪ್ರಕೃತಿ ಅಂತ...
ದಟ್ಟ ದಢೂತಿಯಾಗಿ ಹರಡಿಕೊಂಡ ಹಸಿರಿನ ಕವಚವನ್ನು ಭೇದಿಸಿ ಹೇಗಾದರೂ ನೆಲವ ಚುಂಬಿಸಬೇಕು ಅಂತ ಸೂರ್ಯನ ಕಿರಣ ಶತಪ್ರಯತ್ನ ನಡೆಸುತ್ತಿರುವ ಕಾಡು. ಆ ನೆಲದ ಯಾವುದೋ ಮರದ ಬೊಡ್ಡೆಯೊಂದರ ಪೊಟರೆಯಲ್ಲಿ ತಾಯಿಯಾದ ಖುಷಿಯಲ್ಲಿದ್ದಾಳೆ 'ಕೆಂಪಮ್ಮ'. ಅಲ್ಲಿ ಅಳುವಿನ ಶಬ್ದವಲ್ಲ, ಮಿಜಿಮಿಜಿಮಿಜಿ. ನಮ್ಮ ಕೈ ಹೆಬ್ಬೆರಳ ಗಾತ್ರದಷ್ಟಿರಬಹುದಾದ ಆ 'ಕೆಂಪಮ್ಮ', ಜಪಾನೀಸ್ ರೆಡ್‌ಬಗ್ ಎಂಬ ಕೀಟದ ಕುಡಿಗಳು ಅವೆಲ್ಲ. ಅವುಗಳದ್ದು ರಣ ಹಸಿವು. ಆ ಕಾಡಿನಲ್ಲೊಂದು ವಿಶಿಷ್ಟ ಕೆಂಪುಹಣ್ಣು. ನೆಲಕ್ಕೆ ಬಿದ್ದ ಹಣ್ಣುಗಳಲ್ಲಿ ಕೊಳೆತಿರದ, ಹುಳು ಹೊಡೆದಿರದ ಉತ್ತಮ ಹಣ್ಣನ್ನು ಆರಿಸಿ, ಅದನ್ನು ಹರಸಾಹಸದೊಂದಿಗೆ ಮರದ ಬುಡದ ತನ್ನ ಮಕ್ಕಳ ಸಾಮ್ರಾಜ್ಯಕ್ಕೆ ಉರುಳಿಸಿಕೊಂಡು ಬರುವ ಕೆಲಸ ಆ ಕೆಂಪಮ್ಮನದ್ದು. ಅದರ ಗಾತ್ರಕ್ಕೆ ಹೋಲಿಸಿದಾಗ ಅದು ತುಂಬ ತ್ರಾಸದ ಕೆಲಸವೇ ಸರಿ. ಅದು ಹೇಗೋ ಹಣ್ಣು ಆರಿಸಿದ್ದೂ ಆಗಿದೆ. ಮನೆ ಕಡೆಗೆ ಉರುಳಿಸುವಾಗ ಎದುರಾದಳು ಇನ್ನೊಬ್ಬಳು ಕೆಂಪಮ್ಮ. ನಮ್ಮಲ್ಲಿ ನಲ್ಲಿ ನೀರಿಗೆ ಹೊಡೆದಾಡುವ ಗಯ್ಯಾಳಿಯಂತೆ, ಈ ಜಪಾನೀಸ್ ರೆಡ್ ಬಗ್ ತನ್ನ ಮರಿಗಳಿಗೆ ಅಂದುಕೊಂಡಿದ್ದ ಹಣ್ಣನ್ನು ಆಕೆ ಕಸಿದಿದ್ದಾಳೆ ಹಾಗೂ ಇನ್ನೆಲ್ಲೋ ಇರುವ ತನ್ನ ಪೊಟರೆ ಸಾಮ್ರಾಜ್ಯದತ್ತ ನುಗ್ಗಿದ್ದಾಳೆ. ಈ ಕೆಂಪಮ್ಮಳ ಶ್ರಮ ವ್ಯರ್ಥ. ಆಕೆ ಬರಿದಾಗಿ ಪೊಟರೆಗೆ ಬಂದು ನೋಡಿದರೆ ಅಲ್ಲಿ ಇನ್ನೊಂದು ಆಘಾತ. ತನ್ನ ಮರಿಕೀಟಗಳು ಅಲ್ಲಿಲ್ಲ. ಅಮ್ಮನ ಬರುವಿಕೆಗಾಗಿ ಕಾದು ಅಸಾಧ್ಯ ಹಸಿವಿಗೆ ತುತ್ತಾದ ಅವೆಲ್ಲ ತುತ್ತು ಹುಡುಕಿ ಇನ್ನೆಲ್ಲೋ ಹೋಗಿವೆ. ಈ ಕೀಟ ಮಾತೃತ್ವ ಸವಿಯುವ ಭಾಗ್ಯವಿಲ್ಲದೇ ಮರುಗಿದೆ.
ಇತ್ತ, ಹಣ್ಣು ಕಸಿದುಕೊಂಡು ತನ್ನ ಮರಿಕೀಟಗಳಿಗೆ ಕೊಡಲು ಬಂದ ಕೀಟಕ್ಕೂ ಅಚ್ಚರಿ. ಏಕೆಂದರೆ ಅಲ್ಲಿ ತನ್ನ ಸಂತಾನದೊಂದಿಗೆ ಇನ್ನೊಂದು ಮರಿಕೀಟಗಳ ಗುಂಪು ಮಿಜಿಮಿಜಿ ಎನ್ನುತ್ತಿದೆ, ಆಹಾರಕ್ಕಾಗಿ ಬಾಯೊಡ್ಡಿ! ದೇವರ ಆಟ ಬಲ್ಲವರ್ಯಾರು? ಅವು ಹಣ್ಣುವಂಚಿತ ಕೆಂಪಮ್ಮನ ಸಂತಾನಗಳು! ಆಹಾರ ಹುಡುಕಿ ಈ ಗೂಡು ಸೇರಿವೆ. ಹಾಗಂತ ಈ ಮೊದಲು ವಿಲನ್‌ನಂತಿದ್ದ ಈ ಕಳ್ಳಕೀಟ ಅವುಗಳನ್ನು ನಿರ್ಲಕ್ಷಿಸುತ್ತಿಲ್ಲ. ಅವೆಲ್ಲ ಬಾಯಿಗಳಿಗೂ ಹಣ್ಣು ತಂದುಕೊಡುವ ತಾಯ್ತನದ ಜವಾಬ್ದಾರಿ ಹೊರುತ್ತದೆ. ಒಂದು ಸಂತಾನ ಸಲಹುವುದೇ ಕಷ್ಟ. ಅಂಥಾದ್ದರಲ್ಲಿ ಇವೆರಡು ಗುಂಪುಗಳನ್ನು ಸಲಹುವುದೆಂದರೆ? ಹಣ್ಣುರುಳಿಸಿಕೊಂಡು ಬಂದಷ್ಟೂ ಸಾಲದು. ಇದೇ ಪ್ರಕ್ರಿಯೆಯಲ್ಲಿ ಆ ಜಪಾನೀಸ್ ರೆಡ್‌ಬಗ್ ಸುಸ್ತಾಗಿ ಹೋಗುತ್ತದೆ. ಈ ಕೀಟಗಳೆಲ್ಲ ಪ್ರಾಯಕ್ಕೆ ಬರುವಷ್ಟರಲ್ಲಿ ಅದು ತಾಯ್ತನದ ಅತಿ ಜವಾಬ್ದಾರಿಯ ಭಾರದಲ್ಲಿ ಸತ್ತೇಹೋಗಿರುತ್ತದೆ! ಇಷ್ಟು ದಿನ ಕುಳಿತು ತಿಂದ ಕೀಟಗಳಿಗೆಲ್ಲ ಈಗ ತಮ್ಮ ದಾರಿ ನೋಡಿಕೊಳ್ಳುವ ಸಮಯ. ಅವು ಹೊರಗಡಿಯಿಡುತ್ತವೆ. ಸತ್ತುಬಿದ್ದ ತಾಯಿಕೀಟದ ದೇಹವೇ ಹೊರಗಡಿಯಿಡುವ ಮುಂಚಿನ ಅವುಗಳ ಭೋಜನ.
ಕೋಸ್ಟಾರಿಕಾದ ಅರಣ್ಯದ ನೆಲಹಾಸು. 'ಸ್ಟ್ರಾಬೆರಿ ಪಾಯ್‌ಸನ್ ಆ್ಯರೋ ಫ್ರಾಗ್‌' ಅಂತ ಕರೆಸಿಕೊಳ್ಳುವ ಕಿರಿಬೆರಳ ಗಾತ್ರದ ಆ ಕಪ್ಪೆಗೆ ತಾಯ್ತನದ ಸಂಭ್ರಮ.
ಮರದ ಬೊಡ್ಡೆಯಲ್ಲಿ ಸಂಗ್ರಹವಾಗಿರುವ ನೀರಿನಲ್ಲಿ ಅದು ಮೊಟ್ಟೆ ಇಟ್ಟಿದೆ. ಅರ್ಧಂಬರ್ಧ ಜೀವ ಚಿಗುರಿದ ಲಾರ್ವಾ ಹಂತದಲ್ಲಿವೆ ಅದರ ಆರು ಸಂತಾನಗಳು. ಆಗಲೇ ಎಲೆಯುದುರುವ ಕಾಲ ಬಂದು ನೀರಿನ ಸೆಲೆಗಳೆಲ್ಲ ಬತ್ತಿವೆ. ಈಗದು ತನ್ನ ಲಾರ್ವಾಗಳನ್ನು ಇಟ್ಟು ಕಾಪಾಡುವ ಬೊಗಸೆ ಗಾತ್ರದ ನೀರಿನ ಸೆಲೆಯನ್ನು ಅರಸಬೇಕು. ಆ ಅರಣ್ಯದ ಬೃಹತ್ ಮರವೊಂದರ ತಲೆಯಲ್ಲೆಲ್ಲೋ ಬ್ರೊಮಿಲಿಯಾಡ್ ಜಾತಿಗೆ ಸೇರಿದ ಪರಾವಲಂಬಿ ಸಸ್ಯವೊಂದು ಬೆಳೆಯುತ್ತದೆ. ಆ ಸಸ್ಯದ ಮಧ್ಯಭಾಗದಲ್ಲಿ ಬೊಗಸೆ ಗಾತ್ರದ ಕೊಳ. ಈ ಪುಟ್ಟಜೀವಿ ತನ್ನದೊಂದು ಲಾರ್ವಾವನ್ನು ಬೆನ್ನ ಮೇಲೇರಿಸಿಕೊಂಡು ಆ ಮರವನ್ನು ಹತ್ತುವ ತ್ರಾಸದಾಯಕ ಪ್ರಯಾಣದಲ್ಲಿ ತೊಡಗಿಸಿಕೊಳ್ಳುತ್ತದೆ. ಬಿಬಿಸಿ ಅರ್ಥ್ ಸರಣಿಯಲ್ಲಿ ಇದರ ಚಿತ್ರಣ ಕೊಡುತ್ತ ಡೇವಿಡ್ ಅಟೆನ್‌ಬರೊ ಹೇಳುತ್ತಾರೆ- 'ಅಷ್ಟು ಚಿಕ್ಕ ಜೀವಿಗೆ ಹಾಗೆ ಮರ ಹತ್ತುವುದೆಂದರೆ ನಮ್ಮ ತಾಯಿಯೊಬ್ಬಳು ತನ್ನ ಕಂದಮ್ಮನನ್ನು ಬೆನ್ನಿಗಿರಿಸಿಕೊಂಡು ಎಂಪೈರ್ ಸ್ಟೇಟ್ ಬಿಲ್ಡಿಂಗ್ ಹತ್ತಿದಂತೆ..' ಉಸ್ಸಪ್ಪಾ.. ಒಂದನ್ನು ಅಲ್ಲಿ ಬಿಟ್ಟಿದ್ದಾಯಿತು. ಮುಗಿಯಿತೇ? ಇಲ್ಲ. ಅದೇ ರೀತಿ ಉಳಿದ ಐದೂ ಸಂತಾನಗಳನ್ನೂ ಅಲ್ಲಿ ತಲುಪಿಸುತ್ತದೆ. ಆಗಲೂ ವಿಶ್ರಾಂತಿಯಿಲ್ಲ. ಆ ಲಾರ್ವಾಗಳಿಗೆ ಆಹಾರ ಕೊಡಬೇಕಲ್ಲ? ತನ್ನೊಳಗಿನ ಫಲಿಸದ ಮೊಟ್ಟೆಗಳನ್ನೇ ಆ ನೀರಿಗೆ ಬಿಟ್ಟು ಅವುಗಳ ಹೊಟ್ಟೆ ತುಂಬಿಸುತ್ತದೆ. ಆ ಸಮಯದಲ್ಲಿ ತನ್ನ ಆಹಾರ, ವಿಶ್ರಾಂತಿ ಬಗ್ಗೆ ಅದಕ್ಕೆ ವಿಚಾರಣೆಯ ಪುರಸೊತ್ತಿಲ್ಲ. ದಿನವೂ ಮರವಿಳಿದು ಬಂದು ಸ್ವಲ್ಪಮಟ್ಟಿಗೆ ತನ್ನ ಉದರ ಪೋಷಿಸಿಕೊಂಡು, ಮತ್ತೆ ಮರದ ತಲೆ ತಲುಪಿ ಫಲಿಸದ ಅಂಡಗಳನ್ನು ಬಿಡುವ ಕಾರ್ಯ. ಇಂಥ ಕಾಳಜಿಯಲ್ಲಿ ಬೆಳೆವ ಆ ಕುಡಿಗಳು ಅದೊಂದು ದಿನ ಪೂರ್ಣ ಪ್ರಮಾಣದಲ್ಲಿ ಬಲಿತೊಡನೆ ತಮ್ಮ ದಾರಿ ಹುಡುಕಿಕೊಂಡು ಮರದಿಂದ ಕೆಳಗಿಳಿಯುತ್ತವೆ. ಹೋಗಿ ನೋಡಿದಾಗ ಈ ತಾಯಿಕಪ್ಪೆಗೆ ಮರಿಗಳು ಕಾಣಿಸುವುದಿಲ್ಲ. ಆದರೆ ಅದಕ್ಕೆ ತನ್ನ ಜೀವಿತದ ಉದ್ದೇಶ ಈಡೇರಿಸಿದ ಸಂತೃಪ್ತಿ.

ನಿಸರ್ಗದ ಮಮತೆಯ ಮಡಿಲಲ್ಲಿ ನಮ್ಮ ಕಣ್ಣಿಗೆ ಕ್ರೌರ್ಯವೆನಿಸುವ ಸಂಗತಿಗಳೂ ಇವೆ. ದಕ್ಷಿಣ ಆಫ್ರಿಕಾ ತೀರಪ್ರದೇಶದ ಡಸ್ಸಾನ್ ದ್ವೀಪ. ಅದು ಗ್ರೇಟ್ ವೈಟ್ ಪೆಲಿಕನ್‌ಗಳ ಬಾಣಂತಿ ಕಾಲೋನಿಯಾಗಿ ಕೆಲ ಸಮಯ ಪರಿವರ್ತನೆಯಾಗುತ್ತದೆ. ಆಗಷ್ಟೇ ಕಣ್ಣುಬಿಡುತ್ತಿರುವ ಪೆಲಿಕನ್ ಕಂದಮ್ಮಗಳ ಮುಗಿಯದ ಕಚಿಪಿಚಿ. ಅವುಗಳಿಗೆ ಹೊಟ್ಟೆ ತುಂಬಿಸುವ ಸವಾಲು ಹಿರಿ ಪೆಲಿಕನ್‌ಗಳಿಗೆ. ಮೀನು ಅವುಗಳ ಆಹಾರ ಮೂಲ. ಆದರೆ ಮೀನು ಸೇವನೆಯ ಜೀವಿಗಳು ಬಹಳವಿರುವುದರಿಂದ ಅಲ್ಲಿ ಅಭಾವವೂ ಕಾಡುತ್ತದೆ. ಪೆಲಿಕನ್ ಕಂದಮ್ಮಗಳ ಹಸಿವಿನ ಚೀರುವಿಕೆ, ಗ್ರೇಟ್ ವೈಟ್ ಪೆಲಿಕನ್‌ಗಳಿಗೆ ನಿಷ್ಠುರ ನಿರ್ಧಾರವೊಂದನ್ನು ತೆಗೆದುಕೊಳ್ಳುವುದಕ್ಕೆ ಪ್ರೇರೇಪಿಸಿಬಿಡುತ್ತವೆ. ಈ ಪೆಲಿಕನ್‌ಗಳು ರೆಕ್ಕೆ ಬಡಿಯುತ್ತ ಬಂದಿಳಿಯುವುದು ಮಲಗಾಸ್ ದ್ವೀಪಕ್ಕೆ. ಅದು ಇನ್ನೊಂದು ಬೃಹತ್ ಬಾಣಂತಿ ಕಾಲೋನಿ. ಕೇಪ್ ಗ್ಯಾನ್ನೆಟ್ಸ್ ಎಂಬ ಪಕ್ಷಿ ಸಮೂಹ 60 ಸಾವಿರದ ಸಂಖ್ಯೆಯಲ್ಲಿ ಬಂದು ಅಲ್ಲಿ ಮರಿ ಮಾಡಿವೆ. ಪಾಲಕರಲ್ಲಿ ಒಬ್ಬರು ಮರಿಗಳನ್ನು ಕಾಯುವುದು ಹಾಗೂ ಇನ್ನೊಂದು ಆಹಾರ ತರಲು ಹೋಗುವುದು ಅವುಗಳ ರಿವಾಜು. ಆದರೆ ಆಹಾರ ಹೊಂದಿಸುವ ಹರಸಾಹಸದಲ್ಲಿ ಕೆಲ ಮರಿಗಳ ಎರಡೂ ಪಾಲಕರೂ ಆಹಾರ ಅನ್ವೇಷಣೆಗೆ ಹೋಗಿರುತ್ತವೆ. ಅಂಥ ಅಸರುಕ್ಷಿತ ಮರಿಗಳಿಗೆ ಹೋಗಿ ಬಾಯಿಹಾಕಿಬಿಡುತ್ತವೆ ಪೆಲಿಕನ್‌ಗಳು! ಅವನ್ನೆಲ್ಲ ಗಂಟಲಲ್ಲಿ ತುಂಬಿಸಿಕೊಂಡು ಮತ್ತೆ ಹಾರುತ್ತ ಬಂದು ಅರೆಜೀವವಾಗಿರುವ ಅವುಗಳನ್ನು ತಮ್ಮ ಕಂದಮ್ಮಗಳ ತುತ್ತನ್ನಾಗಿಸುತ್ತವೆ.

'ಒಂಬತ್ತು ತಿಂಗಳು ಹೊತ್ತೂ.. ಹೆತ್ತು ಮಾಡಿದ್ದಕ್ಕೆ...' ಅಂತ ಟಿವಿ ಪೆಟ್ಟಿಗೆಯಲ್ಲಿ ಡೈಲಾಗು ಮೊಳಗುವ ಹಂತಕ್ಕೆಲ್ಲ ಅಲ್ಲೆಲ್ಲೋ ಗೊಂಡಾರಣ್ಯದಲ್ಲಿ ಆನೆ ಘೀಳಿಟ್ಟಿದೆ. ಬರೋಬ್ಬರಿ 22 ತಿಂಗಳು ಹೊಟ್ಟೆಯಲ್ಲಿ ಜೀವವೊಂದನ್ನು ಪೊರೆಯುವವಳು ನಾನು ಅಂತ ಆರ್ಭಟಿಸಿದಂತಿದೆ. ಅಷ್ಟೆಲ್ಲ ದಿನಗಳ ನಂತರ ಆನೆಯೊಂದು ಅಲ್ಲೆಲ್ಲೋ ಕಾಡಿನ ಮಧ್ಯದ ಬಯಲಲ್ಲಿ ಮರಿ ಹಾಕುತ್ತದೆ. ಆನೆಗಳ ಸಮೂಹವೇ ಆ ಹೊಸಜೀವದ ಆಗಮನಕ್ಕೆ ತಮ್ಮದೇ ವಿಧದಲ್ಲಿ ಸಂಭ್ರಮಿಸುತ್ತವೆ. ಆ ಸಂಭ್ರಮದ ಬೆನ್ನಲ್ಲೇ ಆ ಆನೆಮರಿಯನ್ನು ನೂಕುತ್ತ ಓಡಾಟಕ್ಕೆ ಪ್ರೇರೇಪಿಸುತ್ತದೆ ತಾಯಿ ಆನೆ. ಈಗ ಆ ಗುಂಪು ನೀರನ್ನು ಅರಸಿ ಹೊರಟಿದೆ. ಮರಿಗೆ ಹಾಲುಣಿಸಬೇಕೆಂದರೆ ತಾಯಿ ಚೆನ್ನಾಗಿ ನೀರು ಕುಡಿಯಬೇಕು. ಎಷ್ಟುದೂರದ ಹಾದಿಯೋ ನೀರಿನ ಸೆಲೆ ತಲುಪಲೇಬೇಕು. ಈ ಕಂದಮ್ಮ ಆನೆಮರಿ ಹುಟ್ಟುತ್ತಲೇ ಬದುಕಿನ ಸವಾಲುಗಳಿಗೆ ತೆರೆದುಕೊಳ್ಳಬೇಕು. ಕಾಲುಸೋತು, ದೇಹದ ನೀರಿನ ಪಸೆ ಆರಿ ಮುಗ್ಗರಿಸುತ್ತಿದೆ. ತಾಯಿಯೂ ಸೇರಿದಂತೆ ಉಳಿದೆಲ್ಲ ಹಿರಿ ಸದಸ್ಯರೂ ಅದನ್ನು ಕಾಲಲ್ಲೇ ನೂಕುತ್ತ ನಡೆಸುತ್ತವೆ. ಅವೆಷ್ಟೋ ಕಿಲೋಮೀಟರ್‌ಗಳು ನಡೆದ ನಂತರ ನೀರು ಸಿಗುತ್ತದೆ. ನೀರಾಟ, ಮನಸೋಇಚ್ಛೆ ದಾಹ ತಣಿಸಿಕೊಳ್ಳುವ ಕಾರ್ಯಕ್ರಮ. ಈ ಪ್ರಯಾಣದಲ್ಲಿ ಆನೆಮರಿ ಅದಾಗಲೇ ತನ್ನ ಬದುಕಿನ ಪಾಠವನ್ನು ಕಲಿತುಬಿಟ್ಟಿರುತ್ತದೆ.

ಉತ್ತರ ಫೆಸಿಫಿಕ್ ಸಮುದ್ರದಲ್ಲಿ ಅದೊಂದು ಜಾತಿಯ ಆಕ್ಟೋಪಸ್. ನಾಲ್ಕು ಮೀಟರ್ ಉದ್ದದ, ನಮ್ಮ ಕಣ್ಣಿಗೆ ಗಲೀಜೆನಿಸುವ ಆ ಜೀವಿ, ತಾಯ್ತನದ ಸರ್ವಶ್ರೇಷ್ಠ ಪ್ರಶಸ್ತಿಗೆ ಅರ್ಹ. ತನ್ನ ಮೈ ಅಡಿಯಲ್ಲಿ ಸಾವಿರ ಮೊಟ್ಟೆಗಳನ್ನು ಇಟ್ಟುಕೊಂಡು ಸಮುದ್ರ ತಳದ ಕಲ್ಲಿನ ಪೊಟರೆ ಹುಡುಕುತ್ತಿದೆ ಅದು. ಅದು ಆ ಆಕ್ಟೋಪಸ್‌ನ ಪ್ರಥಮ ಹಾಗೂ ಕೊನೆಯ ಹೆರಿಗೆ. ಮುಂದಿನ ಆರು ತಿಂಗಳು ಅದು ಅಲ್ಲಿಂದ ಕದಲದು. ದ್ರಾಕ್ಷಿ ಗೊಂಚಲಿನಂಥ ಮೊಟ್ಟೆಗಳಿಗೆ ಅಲ್ಗೆ ಕಟ್ಟಬಾರದು. ಆಮ್ಲಜನಕ ಸರಿಯಾಗಿ ಪೂರೈಕೆ ಆಗಬೇಕು. ಆ ನಿಟ್ಟಿನಲ್ಲಿ ತನ್ನ ಕಾಲುಗಳನ್ನೆಲ್ಲ ಬಡಿಯುತ್ತ ಸೌಲಭ್ಯ ಮಾಡಿಕೊಡುತ್ತದೆ. ಆರು ತಿಂಗಳು ಆಹಾರ- ಚಲನೆಯೇ ಇಲ್ಲದೇ ಹಾಗೆ ಕೂರುವುದು ತಮಾಷೆಯೇ? ಅವಳದ್ದು ಅವಿರತ ಶ್ರದ್ಧೆ. ಕೊನೆಯದಾಗಿ ತನ್ನ ಶಕ್ತಿಯನ್ನೆಲ್ಲ ಒಗ್ಗೂಡಿಸಿ, ನೀರಿನ ತೆರೆಗಳನ್ನು ಎಬ್ಬಿಸಿ ಮೊಟ್ಟೆಯಿಂದ ಮರಿಗಳು ಜಾರುವಂತೆ ಮಾಡುತ್ತದದು. ಹಾಗೆ ಉದುರಿದ ಸಾವಿರ ಜೀವಗಳಲ್ಲಿ ಬದುಕುಳಿಯುವವು ತುಂಬ ಅಲ್ಪ. ಅವೆಲ್ಲ ಆ ಜಗತ್ತಿಗೆ ಬರುವ ವೇಳೆಗೆ ಈ ಮಹಾತಾಯಿ ಕೊನೆಯುಸಿರೆಳೆದಿರುತ್ತಾಳೆ, ಸಾರ್ಥಕ್ಯದೊಂದಿಗೆ.

ಅಮ್ಮಂದಿರ ದಿನದಂದು ನಿಸರ್ಗ ತಾಯಿಯನ್ನು ಅರ್ಥಮಾಡಿಕೊಳ್ಳುತ್ತ ಹೋದರೆ ನಮ್ಮೆಲ್ಲರ ತಾಯಂದಿರೂ ಅರ್ಥವಾಗುತ್ತಾರೆ. ನಮ್ಮೆಲ್ಲರೊಳಗಿನ ತಾಯ್ತನವೂ ಉಸಿರಾಡೀತು. ಈ ಅಮ್ಮನಿಗೆ ಹೊರೆಯಾಗದಂತೆ ಬದುಕುವ ಸಂಕಲ್ಪವೂ ತೆರೆದುಕೊಂಡೀತು. ಅಂದಹಾಗೆ, ಇವನ್ನೆಲ್ಲ ಕಣ್ಣಿಗೆ ಕಟ್ಟುವಂತೆ ಅರ್ಥ ಮಾಡಿಸಿದ್ದು ಬಿಬಿಸಿ ವಾಹಿನಿಯ 'ಅರ್ಥ್‌' ಸಾಕ್ಷ್ಯಚಿತ್ರ ಸರಣಿ.

-  ಚೈತನ್ಯ ಹೆಗಡೆ
cchegde@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.