ಚೂಪು ಮತ್ತೆ ಮೊಂಡಾಗುತ್ತದೆ...

ಈ ಸಂತೆಯಲ್ಲಿ ಸಕಲ ಮಾರಾಟಗಳ ನಡುವೆ ನಾನು ನಿಂತು ಅತ್ತಿತ್ತ ನೋಡುತ್ತೇನೆ. ಸಾಣೆ ಹಿಡಿಯವವನು ತನ್ನ ಪಾಡಿಗೆ ತಾನು ಸಾಣೆ ಹಿಡಿಯುತ್ತಿದ್ದಾನೆ. ಒಬ್ಬೊಬ್ಬರೇ ಬಂದು ಅವನು ಕೇಳದಿದ್ದರೂ ತಮ್ಮ ತಮ್ಮ ಮನೆಯ ಕತ್ತರಿ, ಚಾಕು ಮತ್ತು ಈಳಿಗೆ ಮನೆಗಳನ್ನು ಕೊಟ್ಟು ಚೂಪಾಗುವುದನ್ನೇ ಕಾಯುತ್ತ ಕೂತಿದ್ದಾರೆ. ಇಲ್ಲಿ ಈ ಚೂಪುಗಳೆಲ್ಲ ಮತ್ತೆ ಮತ್ತೆ ಮೊಂಡಾಗುವುದೇ ಆಶ್ಚರ್ಯ...! ನೋಡಿ ಚೂಪು ಮತ್ತು ಮೊಂಡುಗಳ ನಡುವಿನ ಸಂಬಂಧ. ಚೂಪುಗಳು ಹಸಿವಿಗೆ ಕುಮ್ಮಕ್ಕು ಕೊಡುತ್ತಿವೆ. ಮೊಂಡು ಹಸಿವಿನ ತೀವ್ರತೆಯನ್ನು ಕುರಿತು ಮಾತಾಡುತ್ತಿದೆ. ಮೊಂಡಾಗಿದೆ ಎಂದು ಇವರಿಗೆ ಯಾವಾಗ ಅರಿವಿಗೆ ಬರುತ್ತದೋ ಗೊತ್ತಿಲ್ಲ. ಅಂತೂ ಸಂತೆಗೆ ಕಾದಿದ್ದಾರೆ ಅಥವಾ ಇವನು ಬೀದಿಯಲ್ಲಿ ಹೋಗುವಾಗ ಅಲ್ಲೇ ತಮ್ಮ ತಮ್ಮದನ್ನು ಕೊಟ್ಟು, ಅಲ್ಲಿ ಎಗರುವ ಕಿಡಿಗಳನ್ನು ಕಂಡು ಕಣ್ಣು ಮುಚ್ಚಿ, ಕಣ್ಣು ಬಿಟ್ಟು ಕೆಲವರು ತಮ್ಮ ಕತ್ತರಿ ಚಾಕು ಇತ್ಯಾದಿಗಳಲ್ಲಿ ತಾವು ಕಂಡರಿಯದಿದ್ದ ಕಿಡಿಗಳನ್ನು ನೋಡಿ ಬೆರಗಾಗಿ ಬೆಲೆ ತೆತ್ತಲು ಸಿದ್ಧರಾಗುತ್ತಾರೆ. ಸಾಣೆ ಹಿಡಿಯುವವನು ಹೊತ್ತು ತಂದಿರುವ ಆ ಯಂತ್ರದಲ್ಲಿ ಒಂದು ಕೆಟ್ಟು ಹೋದ ಸೈಕಲ್ಲಿನ ಚಕ್ರವಿದೆ. ಒಂದು ಚರ್ಮದ ಬೆರಟಿದೆ. ಯಾರದೋ ಕೆಟ್ಟ ಸೈಕಲ್ಲು ಮತ್ಯಾವುದೋ ಪ್ರಾಣಿಯ ಚರ್ಮ, ಬೇರೆಯವರ ಬದುಕುಗಳ ಮೂಲಕ ಇನ್ನೊಬ್ಬರ ಬದುಕು ಸಾಗುತ್ತಿದೆ. ಬದುಕುಗಳು ಸವೆಯುತ್ತಿವೆ ಮತ್ತು ಚೂಪಾಗುತ್ತಿವೆ.
ನೆಂಟರ ಶವಸಂಸ್ಕಾರ
ಹೊಂಗೆ ಮರದ ಕೆಳಗೆ ನಿಂತೆ. ಮಾತಾಡದೆ ನಿಂತ ಇದರ ಎಣ್ಣೆ ಈಗ ಎಲ್ಲೆಲ್ಲಿ ಉರಿದಿರಬಹುದು? ಮರ ಮಾತ್ರ ಹಿಂದಿನ ಜನ್ಮ ನೆನಪಾಗದವರಂತೆ ನಿಂತಿದೆ. ನೆಲದ ಮೇಲೆ ಬಿದ್ದಿದ್ದ ಬೀಜವೊಂದನ್ನು ಕೈಗೆತ್ತಿಕೊಂಡೆ. ಇದರ ಜೊತೆಯ ಬೀಜಗಳೆಲ್ಲ ಸಂತೆ ಸಂತೆ ತಿರುಗಿವೆ. ಎಣ್ಣೆಯ ವೇಷ ಧರಿಸಿ ಪಂಜಿನಿಂದ ಪಂಜಿಗೆ ಪ್ರಯಾಣ ಮಾಡುತ್ತಿವೆ. ಇಷ್ಟೆಲ್ಲ ನಾನು ಹೇಳುವಾಗ ಪಂಜುಗಳು ಕಾಣಲಿಲ್ಲ. ಎಲ್ಲಿ ಹೋದವೆಂದು ನೋಡಿದೆ. ಕಾಣದ ದೂರದ ಊರಲ್ಲಿ ಉಗ್ರಗಾಮಿಗಳಿಗೆ ಹೆದರಿ ಮನೆ ಮಠ ಬಿಟ್ಟು ಓಡುತ್ತಿರುವ ನಿರಾಶ್ರಿತರ ಕೈಯಲ್ಲಿದ್ದವು. ಆ ಕತ್ತಲಲ್ಲಿ ಅವರೆಲ್ಲ ದಾರಿ ತೋರಿಸುವುದಕ್ಕೋಸ್ಕರ ಪಂಜುಗಳನ್ನು ಹಿಡಿಯುವುದಕ್ಕಿಂತ ಮುಂಚೆ ಆ ಪಂಜುಗಳೆಲ್ಲ ಉಗ್ರಗಾಮಿಗಳಿಂದ ಹತರಾದ ಅವರದೇ ನೆಂಟರ ಶವಸಂಸ್ಕಾರ ಮಾಡಿದ್ದವು.
-ಸಿ.ವಿ. ಶೇಷಾದ್ರಿ ಹೊಳವನಹಳ್ಳಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


