ಖುಷಿ

ಬದುಕನ್ನು ಇಷ್ಟಪಡುವ ಶಿಶಿಲರ ಕಾದಂಬರಿಗಳು

ಬದುಕನ್ನು ಇಷ್ಟಪಡುವ ಶಿಶಿಲರ ಕಾದಂಬರಿಗಳು
Published On :

ಕನ್ನಡದ ಪ್ರಮುಖ ಲೇಖಕರಾಗಿ ಹೆಸರು ಮಾಡಿರುವ ಡಾ. ಪ್ರಭಾಕರ ಶಿಶಿಲರ ಐದು ಕಾದಂಬರಿಗಳ ಸಂಪುಟ 'ಪಂಚ ಕಾದಂಬರಿ' ಅವರ ಬಹುಮುಖಿ ಆಸಕ್ತಿಯನ್ನು ತೋರಿಸುತ್ತದೆ. ಇದರಲ್ಲಿ ಎರಡು ಪೌರಾಣಿಕ, ಎರಡು ಐತಿಹಾಸಿಕ ಮತ್ತು ಒಂದು ಸಾಮಾಜಿಕ ಕಾದಂಬರಿ ಇದೆ.
ಇಲ್ಲಿಯ 'ಮತ್ಸ್ಯಗಂಧಿ' ಕಾದಂಬರಿಯು ಮಹಾಭಾರತಕ್ಕೆ ಸೇರಿದ ಕತೆಯನ್ನು ಹೊಂದಿದೆ. ಭೀಷ್ಮನ ತಂದೆ ಶಂತನು ಮಹಾರಾಜನು ದಾಶರಾಜನ ಪುತ್ರಿ ಮತ್ಸ್ಯಗಂಧಿಯನ್ನು ಮದುವೆಯಾಗುವುದು, ಅದಕ್ಕೂ ಪೂರ್ವದಲ್ಲಿ ಅವಳು ಪರಾಶರ ಮುನಿಯಿಂದ ಭೋಗಿಸಲ್ಪಟ್ಟು ವ್ಯಾಸನನ್ನು ಮಗನನ್ನಾಗಿ ಪಡೆಯುವುದು, ತನ್ನ ಪುತ್ರರಿಗೇ ಸಿಂಹಾಸನ ಬೇಕೆಂಬ ಅವಳ ಆಸೆ ವಿಫಲವಾಗಿ ಅವರ ಪುತ್ರರಿಬ್ಬರೂ ಸಾವಿಗೀಡಾಗುವುದು, ಕೊನೆಗೆ ನಿಯೋಗದಿಂದ ಧೃತರಾಷ್ಟ್ರ ಮತ್ತು ಪಾಂಡುವನ್ನು ಪುತ್ರರನ್ನಾಗಿ ಪಡೆಯುವ ವರೆಗಿನ ಕತೆಯನ್ನು ಇದು ಹೊಂದಿದೆ.
ಮಹಾಭಾರತದ್ದೇ ಇನ್ನೊಂದು ವಸ್ತುವನ್ನು ಆಧರಿಸಿದ್ದು 'ಪುಂಸ್ತ್ರೀ'. ಇದು ಭೀಷ್ಮ ಮತ್ತು ಅಂಬೆಯ ಸುತ್ತ ಸುತ್ತುವುದು. ಅಂಬೆಯೇ ಶಿಖಂಡಿಯಾಗುವುದು ಇತ್ಯಾದಿಯನ್ನೆಲ್ಲ ಮೂಲ ಆಶಯಕ್ಕೆ ಧಕ್ಕೆಯಾಗದಂತೆ ಹೊಸ ಹೊಳಹಿನೊಂದಿಗೆ ನೀಡಿದ್ದಾರೆ.
'ಇರುವುದೆಲ್ಲವ ಬಿಟ್ಟು' ಒಂದು ಸಾಮಾಜಿಕ ಕಾದಂಬರಿ. ಕಲಾಪ್ರಕಾರ, ನದಿ ಮತ್ತು ಜನರ ಜೀವನ ಅವನತಿಯತ್ತ ಸಾಗಿರುವಾಗ ಅದನ್ನು ಒಂದು ಸುವ್ಯವಸ್ಥೆಗೆ ಒಳಪಡಿಸುವುದು ಸಾಧ್ಯವೆ ಎಂಬ ಜಿಜ್ಞಾಸೆಯನ್ನು ಒಳಗೊಂಡಿರುವ ಈ ಕೃತಿಯ ಆಶಯ ಮಹತ್ವಾಕಾಂಕ್ಷೆಯದು. ಕಪಿಲಳ್ಳಿ ಎಂಬ ಒಂದು ಕಾಲ್ಪನಿಕ ಊರಿನಲ್ಲಿ ತಪಸ್ವಿನಿ ಎಂಬ ನದಿಯ ತಟದಲ್ಲಿ ನಡೆಯುವ ಘಟನಾವಳಿಗಳನ್ನು ಇದು ಒಳಗೊಂಡಿದೆ.
'ನದಿ ಎರಡರ ನಡುವೆ'  ಹಾಗೂ 'ಮೂಡಣದ ಕೆಂಪು ಕಿರಣ' ಐತಿಹಾಸಿಕ ಕಾದಂಬರಿಗಳು. 'ನದಿ ಎರಡರ ನಡುವೆ' ಕೊಡಗನ್ನು 1590ರಿಂದ 1834ರ ವರೆಗೆ ಆಳಿದ ಹಾಲೇರಿ ರಾಜರು ಕಾವೇರಿ ಮತ್ತು ನೇತ್ರಾವತಿ ನದಿಗಳ ನಡುವೆ ನಾಡನ್ನು ಕಟ್ಟುವಾಗ ಅನುಭವಿಸಿದ ಏಳುಬೀಳನ್ನು ವಿವರಿಸುತ್ತದೆ. ಬ್ರಿಟಿಷರೊಂದಿಗಿನ ಸಖ್ಯ ಮತ್ತು ವೈಷಮ್ಯದ ವಿವರಗಳನ್ನು ಇತಿಹಾಸದ ಚೌಕಟ್ಟಿನಲ್ಲಿಯೇ ಶಿಶಿಲರು ನೀಡಿದ್ದಾರೆ. ಈ ಕಾದಂಬರಿಯ ಎರಡನೇ ಭಾಗ ಎಂಬಂತೆ 'ಮೂಡಣದ ಕೆಂಪು' ಮೂಡಿ ಬಂದಿದೆ. 1837ರ ಕೊಡಗು-ಕೆನರಾ ರೈತ ಬಂಡಾಯ ಇಲ್ಲಿಯ ವಸ್ತು.
ಶಿಶಿಲರ ಈ ಕಾದಂಬರಿಗಳು ಪುರಾಣಕ್ಕೆ ಮತ್ತು ಇತಿಹಾಸಕ್ಕೆ ಹೊಸ ವ್ಯಾಖ್ಯಾನವನ್ನು ನೀಡಿದಂತಿವೆ. 'ನೆನಪಿಟ್ಟಿಕೋ ಹೆಣ್ಣೇ, ಜೀವನ ಒಂದು ನದಿ. ಹುಟ್ಟು ಮತ್ತು ಸಾವು ಅದರ ಎರಡು ದಂಡೆಗಳು. ನದಿಯಂತೆ ಜೀವನ ಚಲಿಸುತ್ತಿರಬೇಕು. ಇಲ್ಲದಿದ್ದರೆ ಬದುಕಿದ್ದೂ ಸತ್ತಂತೆ.' ಎಂದು ಪರಾಶರ ಮುನಿಯು ಮತ್ಸ್ಯಗಂಧಿಗೆ ಹೇಳಿದ ಮಾತು 'ಯಮುನೆ ಎಂದಿಗೂ ಬತ್ತುವುದಿಲ್ಲ ಮಗಳೆ...' ಎಂದು ದಾಸರಾಜ ಮಗಳಿಗೆ ಹೇಳಿದ ಮಾತು ಒಂದಕ್ಕೊಂದು ಅಂತರಸಂಬಂಧ ಹೊಂದಿರುವಂತೆ ತೋರುತ್ತದೆ. ಈ ಹೆಣ್ಣಿನ ಸಂಘರ್ಷದ ಬದುಕು 'ಪುಂಸ್ತ್ರೀ'ಯ ಅಂಬೆಯಲ್ಲೂ ಮುಂದುವರಿಯುತ್ತದೆ. 'ಹೆಣ್ಣು ಎಂದಿಗೂ ಬಲಶಾಲಿಗಳ ಸ್ವತ್ತು' ಎಂದು ಅಂಬೆಯ ತಂದೆ ಕಾಶಿರಾಜ ಸ್ವಯಂವರವನ್ನು ಏರ್ಪಡಿಸಿದಾಗಲೇ ಅಂದುಕೊಂಡಿದ್ದ. ಅದು ಆ ಕಾಲದ ಪುರುಷಕೇಂದ್ರಿತ ಸಮಾಜ ವ್ಯವಸ್ಥೆಯನ್ನು ಬಿಂಬಿಸುತ್ತದೆ. ಸ್ವಯಂವರ ಪದ್ಧತಿಯ ಹಿಂದಿನ ಧೋರಣೆ ಕೂಡ ಅದೇ. ಅಂಬೆಯ ದುಃಖ  ಮುಂದೆ ಕುಂತಿಯ, ಗಾಂಧಾರಿಯ, ದ್ರೌಪದಿಯ ದುಃಖದ ಕತೆಯಾಗಿಯೂ ಬೆಳೆಯುತ್ತದೆ.
ಶಿಶಿಲರ ಮುಖ್ಯ ಕಾಳಜಿ ನ್ಯಾಯಸಮ್ಮತವಾದ ಜೀವನವನ್ನು ಬದುಕುವುದು. ಈ ಐದೂ ಕಾದಂಬರಿಗಳ ಮುಖ್ಯಪಾತ್ರಗಳು ಇಂಥ ಬದುಕನ್ನು ಇಷ್ಟಪಡುತ್ತವೆ ಮತ್ತು ಅದನ್ನು ಸಾಧಿಸಲು ಹೋರಾಡುತ್ತವೆ. ಆ ಹೋರಾಟದಲ್ಲೇ ಅವುಗಳ ಬದುಕಿನ ಸಾರ್ಥಕತೆ ಇದೆ. ಇದು ಈ ಕೃತಿಗಳ ಸಾರ್ಥಕತೆ ಕೂಡ.
ಒಬ್ಬ ಲೇಖಕನ ಒಂದು ಪ್ರಕಾರದ ಸೃಜನ ಸಾಹಿತ್ಯವನ್ನು ಈ ರೀತಿಯ ಸಂಪುಟದಲ್ಲಿ ತರುವುದರಿಂದ ಅವರನ್ನು ಅಧ್ಯಯನಿಸುವವರಿಗೆ ಒಂದು ಅನುಕೂಲವನ್ನು ಒದಗಿಸಿದಂತೆ ಆಗುತ್ತದೆ. ಆ ದಿಶೆಯಲ್ಲಿ ಇದೊಂದು ಸ್ತುತ್ಯರ್ಹವಾದ ಪ್ರಯತ್ನವಾಗಿದೆ. ಈ ಹಿಂದೆ ಕುವೆಂಪು ಅವರ ನಾಟಕಗಳ ಸಂಪುಟ ಬಂದಿತ್ತು. ಹಲವು ಪ್ರಮುಖ ಸಾಹಿತಿಗಳ ಕಥಾ ಸಂಪುಟ, ಕಾವ್ಯ ಸಂಪುಟ, ಸಮಗ್ರ ಗದ್ಯ, ಸಮಗ್ರ ಕಾವ್ಯ ಮೊದಲಾದವು ಪ್ರಕಟವಾಗಿವೆ. ಕಾದಂಬರಿ ಪ್ರಕಾರವನ್ನು ಒಂದು ಸಂಪುಟದ ರೀತಿಯಲ್ಲಿ ಹೊರ ತರುವುದು ಸವಾಲಿನ ಕೆಲಸವೇ. ಆ ಸವಾಲು ಪುಟಗಳ ಸಂಖ್ಯೆಯದು. ಶಿಶಿಲರಿಗೆ ಅದು ಇಲ್ಲಿ ಸಮಸ್ಯೆಯಾಗಿಲ್ಲ.
ಪ್ರ: ರಾಜ್ ಪ್ರಕಾಶನ, ಮೈಸೂರು, ಪುಟಗಳು 944, ಬೆಲೆ ರು. 650

ಕಿರು ವಿಮರ್ಶೆ
ಬಾಬುರಾವ್ ಪಟೇಲ್
ಪ್ರಚಂಡ ಪತ್ರಕರ್ತ ಬಾಬುರಾವ್ ಪಟೇಲ್ ಹಲವು ಕಾರಣಗಳಿಗಾಗಿ ಸ್ಮರಣೀಯ ವ್ಯಕ್ತಿ. ಇವರ ವಿಶೇಷಗಳನ್ನು ಕಟ್ಟಿಕೊಡುವ ಪ್ರಯತ್ನವನ್ನು ವಿಶ್ವೇಶ್ವರ ಭಟ್ ತಮ್ಮ 'ಪತ್ರಕರ್ತ ಬಾಬುರಾವ್ ಪಟೇಲ್- ಮತ್ತೊಬ್ಬ ಉಕ್ಕಿನ ಮನುಷ್ಯ!' ಎಂಬ ಕೃತಿಯಲ್ಲಿ ಮಾಡಿದ್ದಾರೆ. ಪತ್ರಕರ್ತನಿಗೆ ಜವಾಬ್ದಾರಿ ಇರುತ್ತದೆ. ಹಾಗೆಯೇ ಅವನು ಎಡವಿ ಬೀಳುವ ಸನ್ನಿವೇಶಗಳೂ ಎದುರಾಗುತ್ತವೆ. ಬಾಬುರಾವ್ ಪಟೇಲ್ ಇವನ್ನೆಲ್ಲ ಹೇಗೆ ಎದುರಿಸಿದರು, ಅವರ ಇಚ್ಛಾಶಕ್ತಿ ಎಷ್ಟೊಂದು ದೃಢವಾಗಿತ್ತು ಎಂಬುದನ್ನೆಲ್ಲ ಭಟ್ ಅವರು ತಮ್ಮ ವಿಶಿಷ್ಟ ಶೈಲಿಯಲ್ಲಿ ವಿವರಿಸಿದ್ದಾರೆ. ವಲ್ಲಭಭಾಯಿ ಪಟೇಲರ ಹಾಗೆ ಈ ಪಟೇಲರೂ ಉಕ್ಕಿನ ಮನುಷ್ಯ ಎಂಬುದನ್ನು ಸಮರ್ಥಿಸುವ ಹಲವು ಘಟನೆಗಳನ್ನು ಉಲ್ಲೇಖಿಸಿದ್ದಾರೆ. ಪತ್ರಕರ್ತರಾಗಬೇಕು ಎನ್ನುವ ಯುವಕರು ಇದನ್ನು ಓದಿದರೆ ಸ್ಫೂರ್ತಿಯನ್ನು ಪಡೆಯಬಲ್ಲರು.
ಪ್ರ: ಸಾಹಿತ್ಯ ಪ್ರಕಾಶನ, ಹುಬ್ಬಳ್ಳಿ, ಪುಟಗಳು 216, ಬೆಲೆ ರು. 150

ದರ್ಗಾ ಅಮೃತ
ಅತ್ಯಾಧುನಿಕ ತಂತ್ರಜ್ಞಾನವು ನಮ್ಮ ಸಮಾಜವನ್ನು ಅಪ್ಪಿಕೊಂಡು ಸುಮಾರು ಕಾಲುಶತಮಾನ ಆಗುತ್ತ ಬಂತು. ನಮ್ಮ ಸಮಾಜ ಸಂಸ್ಕೃತಿಯ ಮೇಲೆ ಇದರ ಪರಿಣಾಮ ಖಂಡಿತವಾಗಿಯೂ ಆಗಿದೆ. ನವತಂತ್ರಜ್ಞಾನ ಹಾಗೂ ಜಾಗತೀಕರಣದ ಈ ಪ್ರಕ್ರಿಯೆಯಲ್ಲಿ ನಾವು ಕಳೆದುಕೊಂಡಿರುವುದೇನು, ನಮ್ಮ ಜನತಂತ್ರದ ಬೇರು ಎಲ್ಲಿ ಸಡಿಲಗೊಳ್ಳುತ್ತಿದೆ, ಕೋಮುವಾದಿ ಮತ್ತು ಸಾಮ್ರಾಜ್ಯಶಾಹಿ ಶಕ್ತಿಗಳು ಕೊಳ್ಳುಬಾಕ ಸಂಸ್ಕೃತಿಯಲ್ಲಿ ಜನಸಾಮಾನ್ಯರ ಬದುಕನ್ನು ಹೇಗೆ ಹಿಂಡುತ್ತಿವೆ ಎಂಬುದನ್ನು ಪತ್ರಕರ್ತ ರಂಜಾನ್ ದರ್ಗಾ ತಮ್ಮ 'ಅಮೃತ ಮತ್ತು ವಿಷ' ಲೇಖನಗಳ ಸಂಗ್ರಹದಲ್ಲಿ ವಿವರಿಸಿದ್ದಾರೆ.
ಪ್ರ: ಲೋಹಿಯಾ ಪ್ರಕಾಶನ, ಬಳ್ಳಾರಿ, ಪುಟಗಳು 196, ಬೆಲೆ ರು. 125

ರೈಟ್ ಶೋ
ಸಾಗರದ ನಾಗರಾಜ ಹವಾಲ್ದಾರ ಅವರ ಮೊದಲ ಕಥಾಸಂಕಲನ 'ರಾಂಗ್ ಶೋ'ಗೆ ಹಿರಿಯ ಕತೆಗಾರ ನಾ. ಡಿಸೋಜಾ ಬರೆದಿರುವ ಮಾತುಗಳು ಇವು: '... ಅವರಿಗೆ ಕೇವಲ ಕಥೆ ಹೇಳುವ ಉತ್ಸಾಹ ಮಾತ್ರವಿಲ್ಲ. ಅವರು ಪಾತ್ರ, ಸಂಭಾಷಣೆ, ಘಟನೆಗಳನ್ನ ಜೋಡಿಸಿಕೊಂಡು ಕಥೆಗಳ ಮೂಲಕ ಬೇರೇನನ್ನೋ ಹೇಳುವ ಯತ್ನ ಮಾಡಿದ್ದಾರೆ. ಈ ಕಾರ್ಯದಲ್ಲಿ ಅವರು ಯಶಸ್ವಿಯಾಗಿದ್ದಾರೆ ಕೂಡ....' ನಿಜ, ಇದರಲ್ಲಿ ಒಟ್ಟು ಆರು ಕತೆಗಳಿವೆ. ಹವಾಲ್ದಾರ್ ಅವರ ಕಥನ ಸಾಮರ್ಥ್ಯದ 'ರೈಟ್ ಶೋ' ಇಲ್ಲಿದೆ.
ಪ್ರ: ಬೆನಕ ಬುಕ್ಸ್ ಬ್ಯಾಂಕ್, ಯಳಗಲ್ಲು, ಕೋಡೂರು ಅಂಚೆ, ಹೊಸನಗರ ತಾ., ಪುಟಗಳು 96, ಬೆಲೆ ರು. 70

-ಡಾ. ವಾಸುದೇವ ಶೆಟ್ಟಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.