ಮಾನಾ ಮೋಹಕ

ಬಸ್ ಬದ್ರಿ ತಲುಪಿತು. ಅಲಕಾನಂದ ತಟದ ಬದ್ರಿನಾರಾಯಣನನ್ನು ನೋಡುವುದರ ಜೊತೆಗೆ ಪೂರ್ವಿಕರಿಗೆ ತರ್ಪಣ ಬಿಡುವುದು ಅಲ್ಲಿನ ವಿಶೇಷ. ಟ್ರಿಪ್ ಮ್ಯಾನೇಜರ್ ಅಂದರು, 'ಯಾರಿಗೆ ತರ್ಪಣ ಕೊಡ್ಬೇಕೊ ಹೋಗಿ, ಇಷ್ಟು ಗಂಟೆಗೆ ವಾಪಸ್ಸಾಗ್ಬೇಕು'. ಚಾರ್‌ಧಾಮ್ ಯಾತ್ರೆಯ ಲಿಸ್ಟ್‌ನಲ್ಲಿ ಬದ್ರಿ, ಕೇದಾರ ಮತ್ತಿನ್ನಿತರ ಖ್ಯಾತಿಯ ಸ್ಥಳಗಳು ಇತ್ತೇ ವಿನಃ 'ಮಾನ' ಎಂಬ ಚಿಕ್ಕ ಹಳ್ಳಿಯ ಹೆಸರು ಖಂಡಿತಾ ಇರಲಿಲ್ಲ.
ಸರಿ. ಬಸ್‌ನಲ್ಲಿದ್ದವರೆಲ್ಲ ತರ್ಪಣ ಕೊಡುವುದಕ್ಕೆ ಹೋದರು. ನನ್ನ ತಂದೆ ಬಹಳ ಸಾಹಸಪ್ರಿಯ. ಬಸ್‌ನಿಂದ ಇಳಿದು, ಅಲ್ಲೇ ಸುತ್ತಾಡುತ್ತ, ಸುತ್ತಮುತ್ತ ನೋಡೋಕೆ ಏನಿದೆ ಅಂತ ಅಲ್ಲಿಯ ಜನರಿಂದ ಸ್ವಲ್ಪ ಮಾಹಿತಿ ಸಂಗ್ರಹಿಸಿ, ಅಮ್ಮನನ್ನು ಕರೆದು, ಇನ್ನು ಕೆಲ ಹುಡುಗರನ್ನು ಜೊತೆ ಸೇರಿಸಿಕೊಂಡು, 'ಇಲ್ಲಿ ತರ್ಪಣ ಬಿಡದಿದ್ರೆ ನಮ್ಮ ಪೂರ್ವಿಕರೇನೂ ಬೇಜಾರ್ ಮಾಡ್ಕೊಳಲ್ಲ. ಬಾ ಮಾನ ನೋಡ್ಕೊಂಡು ಬರೋಣ' ಎಂದು ಹೊರಟೇಬಿಟ್ಟರು. ಬದ್ರಿಯಿಂದ 4-5 ಕಿ.ಮೀ. ದೂರವಿರುವ ಮಾನಕ್ಕೆ ಹೋಗೋದಿಕ್ಕೆ ಸ್ಥಳೀಯ ಆಟೋಗಳೂ ಸಾಕು.
ಮಾನ ಉತ್ತರಾಂಚಲದ ಒಂದು ಚಿಕ್ಕ ಹಳ್ಳಿ. ಟಿಬೆಟ್ (ಈಗ ಚೀನಾ) ಬಾರ್ಡರ್‌ನಲ್ಲಿರುವ ಇದಕ್ಕೆ 'ಭಾರತ್ ಕೀ ಆಖ್ರಿ ಗಾಂವ್' (ಭಾರತದ ಕೊನೇ ಹಳ್ಳಿ) ಎಂದೇ ಹೆಸರು. ವರ್ಷದಲ್ಲಿ ನಾಲ್ಕೈದು ತಿಂಗಳು ಮಾತ್ರ ಪ್ರಯಾಣಿಕರಿಗೆ ಲಭ್ಯ. ಮಿಕ್ಕಂತೆಲ್ಲ ಹಿಮಾವೃತ. ಮಾನದ ಸ್ಪೆಷಾಲಿಟಿ ಏನಂದ್ರೆ, ಇದು ಪಾಂಡವರು ಸ್ವರ್ಗಾರೋಹಣ ಮಾಡಿದ ಸ್ಥಳ. ನಿಸರ್ಗದ ಮಡಿಲಿನಲ್ಲಿ ಮಲಗಿರುವ ಮಾನದ ತುಂಬೆಲ್ಲ ಗುಹೆಗಳು. ಹಿಂದಿನ ಕಾಲದಿಂದಲೂ ಜಪ, ತಪ, ಯೋಗ ಮಾಡಲು ಇಲ್ಲಿ ಋಷಿಮುನಿಗಳು ಬರುತ್ತಿದ್ದರು. ಸರಸ್ವತಿ ನದಿಯ ಉಗಮಸ್ಥಾನ. ಮಾನದಲ್ಲಿ ಆಲೂಗಡ್ಡೆ ಮುಖ್ಯ ಬೆಳೆ. ಹಳ್ಳಿಯಲ್ಲಿ ಎಲ್ಲೆಲ್ಲೂ ಆಲೂಗಡ್ಡೆ ತುಂಬಿದ ಗೋಣಿಚೀಲಗಳೇ.
ನಲ್ವತ್ತು ಅಡಿಯ ಕಡಿದಾದ ಬೆಟ್ಟವೇರಿದರೆ ಅಲ್ಲಿ ಸಿಗುವುದು ವ್ಯಾಸ ಗುಫ. ವೇದವ್ಯಾಸರು ಚತುರ್ವೇದಗಳನ್ನು ವ್ಯಾಸ ಗುಹೆಯಲ್ಲಿ ಬರೆದಿದ್ದು ಎಂದು ಪುರಾಣ ಹೇಳುತ್ತದೆ. ವ್ಯಾಸ ಗುಹೆಯ ಚಾವಡಿಯೂ ತಾಳೆಗರಿಗಳನ್ನು ಹೋಲುತ್ತದೆ. ಮಹಾಭಾರತದ ಉಕ್ತಲೇಖನವೂ ಇಲ್ಲೇ ನಡೆದಿದ್ದಂತೆ. ಮಹಾಭಾರತದ ಕಥೆಯನ್ನು ವ್ಯಾಸಮಹರ್ಷಿ ಗುಹೆಯಲ್ಲಿ ಕುಳಿತು ಕೆಳಗಿರುವ ಗಣೇಶನಿಗೆ ಹೇಳುತ್ತಿದ್ದರೆ, ಗಣೇಶ ಬರೆಯುತ್ತಿದ್ದಾನೆ. ವ್ಯಾಸ ಗುಹೆಗೂ ಗಣೇಶನ ಗುಹೆಗೂ ಸುಮಾರು ನಲ್ವತ್ತು ಅಡಿಗಳ ಅಂತರ. ವ್ಯಾಸರು ಹೇಳುತ್ತಿರುವ ಮಹಾಭಾರತದ ಕಥೆ ಗಣೇಶನಿಗೆ ಕೇಳುತ್ತಿಲ್ಲ. ಯಾಕೆ? ಕೆಳಗೆ ಅಷ್ಟು ರಭಸವಾಗಿ ಹರಿಯುತ್ತಿದ್ದಾಳೆ ಸರಸ್ವತಿ! ಗಣೇಶ ಅವಳಲ್ಲಿ ಹೋಗಿ, 'ಮಾತೆ... ವ್ಯಾಸರು ಹೇಳುತ್ತಿರುವ ಕಥೆ ನನಗೆ ಸ್ವಲ್ಪವೂ ಕೇಳುತ್ತಿಲ್ಲ. ನಿನ್ನ ರಭಸ ಕೊಂಚವಾದರೂ ಕಡಿಮೆ ಮಾಡ್ಕೋ' ಎಂದು ಹೇಳಿದಾಗಿನಿಂದ ಸರಸ್ವತಿ ನದಿಯ ರಭಸ ಕಾಣುತ್ತಿದ್ದರೂ ನೀರಿನ ಶಬ್ದ ಸ್ವಲ್ಪವೂ ಇಲ್ಲ!
ಇನ್ನೊಂದು ಉಪಕಥೆ ಹೀಗಿದೆ. ಪಾಂಡವರು ಸ್ವರ್ಗಾರೋಹಣ ಮಾಡುವಾಗ ದ್ರೌಪದಿಗೆ ಸರಸ್ವತಿ ನದಿ ದಾಟಲಾಗಲಿಲ್ಲ. ಇದನ್ನು ಭೀಮನಲ್ಲಿ ಹೇಳಿಕೊಂಡಳು. ಭೀಮ ಎಲ್ಲಿಂದಲೋ ದೊಡ್ಡ ಬಂಡೆ ತಂದು ನದಿಗೆ ಹಾಕಿದಾಗ, ದ್ರೌಪದಿ ನದಿಯನ್ನು ಸರಾಗವಾಗಿ ದಾಟುವಂತಾಯಿತು. ಈ ಸ್ಥಳದಲ್ಲಿ ಎಲ್ಲ ಕಲ್ಲುಗಳು ಕಪ್ಪು ಅಥವಾ ಕಂದು ಬಣ್ಣದ್ದು ಕಂಡುಬಂದರೆ ಇದೊಂದು ದೊಡ್ಡ ಬಂಡೆ ಮಾತ್ರ ಬಿಳೀ ಬಣ್ಣದ್ದು. ಬೇರೆಡೆಯಿಂದ ತಂದಿಟ್ಟ ಕಲ್ಲು ಎಂದು ಸುಲಭವಾಗಿ ಗೊತ್ತಾಗುತ್ತದೆ. ಆ ಬಂಡೆಗೆ ಭೀಮ್‌ಪುಲ್ ಎಂದು ಹೆಸರು.
ಹಿಂದೆಲ್ಲ ಋಷಿ ಮುನಿಗಳು ತಪಸ್ಸು ಮಾಡಲು ಮಾನಕ್ಕೆ ಬರುತ್ತಿದ್ದರು. ಈಗ ಸುತ್ತಲೂ ನೋಡೋಕೆ ಸಿಗುತ್ತಿರುವವರು ಗನ್ ಹೊತ್ತ ನಮ್ಮ ಸೈನಿಕರು. ಹತ್ತಿರದಲ್ಲೇ ಚೀನಾ ಬಾರ್ಡರ್ ಇರುವ ಕಾರಣ, ಇಲ್ಲಿ ಸೈನ್ಯದ ಬಿಡಾರ. ನಮ್ಮ ಸೈನಿಕರಿಗೆಲ್ಲ ಒಂದು ಸಲಾಂ ಹೊಡೆದು, ಅವರನ್ನು ಮಾತಾಡಿಸಿದ ಖುಷಿಯೂ ಸಿಕ್ಕಿತು ಅಪ್ಪ ಅಮ್ಮನಿಗೆ.
ಅಲ್ಲುಂಟು ದೇಶದ ಕೊನೆ ಟೀ ಅಂಗಡಿ
ಈ ತುಟ್ಟತುದಿಯ ಹಳ್ಳಿಯಲ್ಲಿ ಒಂದು ಚಹಾ ಅಂಗಡಿ ಇದೆ, 'ಭಾರತ್ ಕೀ ಆಖ್ರಿ ದುಕಾನ್' ಅಂತ. ಈ ಅಂಗಡಿಯಿಂದ 2-3 ಕಿ.ಮೀ. ನಂತರ ಇರುವುದೆಲ್ಲ ಚೀನಾ. ಅದೇ ಭಾರತದ ಕೊನೆಯ ಅಂಗಡಿಯಲ್ಲಿ, ಚುಮು ಚುಮು ಚಳಿಯಲ್ಲಿ ಬಿಸಿ ಬಿಸಿ ಚಹಾ ಕುಡಿದು ಬದ್ರಿಗೆ ವಾಪಾಸ್ಸಾಗಲು ಆಟೊ ಏರಿದೆವು ಅಂದರು ಅಪ್ಪ.
- ರೂಪಾ ಶ್ರೀನಿವಾಸ
rups_gemini@yahoo.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


