ಖುಷಿ

ವಿಲ್‌ನಲ್ಲಿ ಆಸ್ತಿಯ 1/3ಗಿಂತ ಹೆಚ್ಚು ಬರೆಯುವಹಾಗಿಲ್ಲ

Published On :

ವಿಲ್‌ನಲ್ಲಿ ಆಸ್ತಿಯ 1/3ಗಿಂತ ಹೆಚ್ಚು ಬರೆಯುವಹಾಗಿಲ್ಲ
-ಹೆಸರು ಬೇಡ, ಶಿರಾ
1961ರಲ್ಲಿ ನಮ್ಮ ಅಜ್ಜಿ 6 ಎಕರೆ 20 ಗುಂಟೆ ಜಮೀನು ಖರೀದಿಸಿದ್ದರು. 1997ರಲ್ಲಿ ಅವರ ಇಬ್ಬರು ಮಕ್ಕಳು ತಾಯಿಗೆ ತಿಳಿಸದೆಯೇ ವಿಭಾಗ ಮಾಡಿಕೊಂಡಿರುತ್ತಾರೆ. ಅದರಂತೆ ಅಜ್ಜಿಯ ಮೊದಲನೆಯ ಮಗ ತನ್ನ ಇಬ್ಬರು ಹೆಂಡತಿಯರಿಗೆ ತನ್ನ ಆಸ್ತಿಯನ್ನು ವಿಭಾಗ ಮಾಡಿ ಕೊಟ್ಟಿರುತ್ತಾನೆ. ಉಳಿದ ಜಮೀನನ್ನು 2007ರಲ್ಲಿ ಬೇರೆಯವರಿಗೆ ಮಾರಾಟ ಮಾಡಿರುತ್ತಾನೆ. ಅಜ್ಜಿ 2011ರಲ್ಲಿ ತೀರಿಕೊಂಡಳು. ಆದರೆ 1994ರಲ್ಲೇ ಅಜ್ಜಿ ನನ್ನ ಹೆಸರಿಗೆ ವಿಲ್  ಮಾಡಿರುತ್ತಾರೆ. ಈ ಆಧಾರದ ಮೇಲೆ ನಾನು ಸಂಬಂಧಿಸಿದವರ ವಿರುದ್ಧ ದಾವಾ ಹಾಕಿರುತ್ತೇನೆ. ಸಾಕ್ಷಿ ವಿಚಾರಣೆಯಾಗಿ ಪಾಟಿ ಸವಾಲನ್ನು ಬೇಕೆಂದೇ ಮುಂದಕ್ಕೆ ಹಾಕುತ್ತಿದ್ದಾರೆ. ಮುಸಲ್ಮಾನ ಕಾನೂನಿನಂತೆ ವಿಲ್ ಬಗ್ಗೆ ತೀರ್ಪುಗಳಿವೆಯೇ?
- ಮುಸಲ್ಮಾನರ ಕಾನೂನಿನಲ್ಲಿ ತಾಯಿ ಸಾಯುವವರೆಗೂ ಮಕ್ಕಳಿಗೆ ಆಕೆಯ ಆಸ್ತಿಯ ಮೇಲೆ ಯಾವ ಹಕ್ಕೂ ಇರುವುದಿಲ್ಲ. ಆದ್ದರಿಂದ ನಿಮ್ಮ ಅಜ್ಜಿಯ ಮಕ್ಕಳ ವಿಭಾಗ, ಅವರ ಹೆಂಡತಿಯರಿಗೆ ವಿಭಾಗ ಹಾಗೂ ಕ್ರಯ ಇವುಗಳಿಗೆ ಕಾನೂನಿನಲ್ಲಿ ಮಾನ್ಯತೆ ಇಲ್ಲ. ಕಾರಣ ಅವರ ತಾಯಿಯ ಜೀವಿತ ಕಾಲದಲ್ಲಿ ಮಕ್ಕಳಿಗೆ ತಾಯಿಯ ಆಸ್ತಿಯ ಮೇಲೆ ಯಾವುದೇ ಹಕ್ಕು ಇರುವುದಿಲ್ಲ. ಆದ್ದರಿಂದ ಈ ವ್ಯವಹಾರಗಳನ್ನು ರದ್ದು ಮಾಡುವಂತೆ ನೀವು ಕೋರ್ಟನ್ನು ಕೋರಬಹುದು. (7ಆಟಟ, 834) ಆದರೆ ನಿಮ್ಮ ಅಜ್ಜಿಯು ತನ್ನ ಆಸ್ತಿಯಲ್ಲಿ 1/3 ಭಾಗಕ್ಕಿಂತ ಹೆಚ್ಚಾಗಿ ಮರಣಶಾಸನದಲ್ಲಿ ಬರೆದುಕೊಡುವಹಾಗಿಲ್ಲ. ಅಲ್ಲದೆ ಅಂತಹ ವಿಲ್ ಮೂಲಕ ತನ್ನ ಉತ್ತರಾಧಿಕಾರಿಗಳಿಗೆ ಆಸ್ತಿಯನ್ನು ಕೊಡುವಹಾಗಿಲ್ಲ. ಇದಕ್ಕೆ ಯಾವ ಮುಖ್ಯವಾದ ಹಳೇ ತೀರ್ಪುಗಳಿಲ್ಲದಿದ್ದರೂ ಕಾನೂನಿನಲ್ಲಿ ಸ್ಪಷ್ಟವಾಗಿದೆ. ಉಳಿದ ಜಮೀನು ಅಜ್ಜಿಯ ಕಾಲಾನಂತರ ಆಕೆಯ ಮಕ್ಕಳಿಗೇ ಹೋಗುತ್ತದೆ.

ರಿಟ್ ಅರ್ಜಿ ಸಲ್ಲಿಸಿ
-ಕೆ.ಎಂ. ವಿದ್ಯಾಸಾಗರ, ಮೈಸೂರು
ಕೃಷಿ ಉತ್ಪನ್ನ ಮಾರುಕಟ್ಟೆ ಸಮೀತಿಯವರು ನಿವೇಶನ ಹಂಚಿಕೆ ಮಾಡಿ ನಂತರ ಅದು ಊರ್ಜಿತವಲ್ಲವೆಂದೂ, ನಂತರ ಬೇರೊಂದು ನಿವೇಶನ ಕೊಟ್ಟರೂ ಕಟ್ಟಡ ಕಟ್ಟಲು ಅನುಮತಿ ನಿರಾಕರಿಸಿರುತ್ತಾರೆ. ಈಗ ಲೋಕಾಯುಕ್ತ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಹೀಗಿರುವಾಗ ಕಾನೂನು ಪ್ರಕಾರ ನಾವೇನು ಮಾಡಬಹುದು?
- ನೀವು ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿ ಸೂಕ್ತ ನಿವೇಶನ ಕೊಡುವಂತೆ ಕೋರಿ. ಪರಿಹಾರ ಸಿಗಬಹುದು.

ದಾವಾ ಹಾಕಿ, ಪರಿಹಾರ ಸಿಗುತ್ತದೆ
-ಹೆಸರು, ಊರು ಬೇಡ
1967ರಲ್ಲಿ ಜಮೀನು ಹಿಸ್ಸೆಯಾಗಿದ್ದು ನಮಗೆ ತಿರುಗಾಡಲು ಹಾಗೂ ದನ ಕರುಗಳನ್ನು ಹೊಡೆದುಕೊಂಡು ಹೋಗಲು ದಾರಿ ಬಿಡಬೇಕೆಂಬ ಬಗ್ಗೆ ಒಪ್ಪಂದವಾಗಿತ್ತು. ಒಂದನೇ ಪಾರ್ಟಿಯವರು 10 ವರ್ಷದ ನಂತರ ತಮ್ಮ ಹಿಸ್ಸೆಯನ್ನು ಬೇರೆಯವರಿಗೆ ಮಾರಿದ್ದು, ಸದರಿಯವರು ದಾರಿ ಬಿಡಲು ಒಪ್ಪದೆ ಬೇಲಿ ಹಾಕುತ್ತೇನೆಂದು ಹೇಳುತ್ತಿದ್ದಾರೆ. ಪರಿಹಾರವೇನು?
- ಭಾರತೀಯ ಈಸ್‌ಮೆಂಟ್ ಕಾನೂನಿನ ಕಲಂ 13ರಂತೆ ಓಡಾಡಲು ದಾರಿ ಬಿಡುವುದು ಅವಶ್ಯಕವಾಗಿರುವುದರಿಂದ ನೀವು ಕೋರ್ಟಿನಲ್ಲಿ ದಾವಾ ಹಾಕಿ ಪರಿಹಾರ ಪಡೆಯಬಹುದು.

ನಿಮಗೂ ಹಕ್ಕಿದೆ
-ಲಕ್ಷ್ಮಿ, ಮೈಸೂರು
ತಂದೆಗೆ ನಾನು ನನ್ನ ತಮ್ಮ ಇಬ್ಬರು ಮಕ್ಕಳು. ತಮ್ಮ ನನಗೆ ತಿಳಿಸದೆಯೇ ತಂದೆಯ ಕೆಲವು ಆಸ್ತಿಗಳನ್ನು ಮಾರಿದ್ದಾನೆ. ಇದರ ವಿವರ ಎಲ್ಲಿ ಸಿಗುತ್ತದೆ? ನನಗೆ ಆಸ್ತಿಯಲ್ಲಿ ಹಕ್ಕಿದೆಯೇ?
- ನಿಮ್ಮೂರಿನ ಸಬ್‌ರಿಜಿಸ್ಟ್ರಾರ್ ಕಚೇರಿಯಲ್ಲಿ ಎಲ್ಲ ವಿವರಗಳೂ ಲಭ್ಯವಿರುತ್ತದೆ. 2005ರಲ್ಲಿ ತಿದ್ದುಪಡಿಯಾದ ಹಿಂದೂ ಉತ್ತರಾಧಿಕಾರ ಕಾಯ್ದೆಯ ಕಲಂ 6ರಂತೆ ನಿಮಗೂ ನಿಮ್ಮ ತಮ್ಮನಷ್ಟೇ ಆಸ್ತಿಯ ಮೇಲೆ ಹಕ್ಕಿದೆ. ನಿಮ್ಮ ವಯಸ್ಸು ಲೆಕ್ಕಕ್ಕೆ ಬರುವುದಿಲ್ಲ.


-  ಎಚ್.ಆರ್. ಕಸ್ತೂರಿರಂಗನ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.