ಕಿವಿಗೆ ಬಿದ್ದ

ಕಿವಿಗೆ ಬಿದ್ದ
Updated on: 

ಜಾತ್ರೆಗೆ ಹೋಗಿದ್ವಿ ಎನ್ನುವ ಮಾತಿನಲ್ಲೆ ಜನಪದದ ಸೊಗಡು ಅಡಗಿದೆ. ಅದು ಬಹುಜನರ ಸಾಂಸ್ಕೃತಿಕ ಆಚರಣೆಯನ್ನು ಪ್ರತಿಧ್ವನಿಸುತ್ತದೆ. ದೆಹಲಿಯ 'ಹಾತ್‌'ನಿಂದ ಹಿಡಿದು ನಮ್ಮೂರ-ನಿಮ್ಮೂರ ಮಾರಮ್ಮನ ಜಾತ್ರೆವರೆಗೆ ಈ ದೇಶದಲ್ಲಿ ಅದರ ಸ್ವರೂಪ ಮತ್ತು ಆಚರಣೆಯನ್ನು ನೋಡಬಹುದು.
ಬಹುತೇಕ ಸಂಕ್ರಾಂತಿಯೊಂದಿಗೆ ಆರಂಭವಾಗುವ ಊರ ಜಾತ್ರೆಗಳು ಯುಗಾದಿಯೊಂದಿಗೆ ಮುಕ್ತಾಯಗೊಳ್ಳುತ್ತವೆ. ಶಿರಸಿಯ ಮಾರಿಕಾಂಬ ಜಾತ್ರೆ, ನಾಯಕನಹಟ್ಟಿಯ ತಿಪ್ಪೇಸ್ವಾಮಿ ಜಾತ್ರೆ, ಮದ್ದೂರಮ್ಮನ ಜಾತ್ರೆ, ತೈಲೂರಮ್ಮನ ಜಾತ್ರೆ, ಆದಿ ಚುಂಚನಗಿರಿ ಜಾತ್ರೆ, ಬೀರಪ್ಪನ ಜಾತ್ರೆ, ಬಸವಣ್ಣನ ಜಾತ್ರೆ ಹೀಗೆ ಊರಿಗೊಂದು, ಸೀಮೆಗೊಂದು ಜಾತ್ರೆ. ಈ ಎಲ್ಲ ಜಾತ್ರೆಗಳು ಶೂದ್ರ- ದಲಿತ ಸಂಸ್ಕೃತಿಯ ಹಿನ್ನೆಲೆಯಲ್ಲೆ ರೂಪುಗೊಂಡಿವೆ. ಅವು ನೆಲದ ಬದುಕನ್ನು ಅರಿಯುವ ಮಾರ್ಗವೂ ಹೌದು.
ಜಾತ್ರೆಯ ವಿಚಾರದಲ್ಲಿ ಹೆಣ್ಣು ದೇವರ ಪ್ರಾತಿನಿಧ್ಯವೇ ಜಾಸ್ತಿ. ಇದು ಹಿಂದೆ ಪುರುಷ, ಪ್ರಕೃತಿಯ ಆರಾಧಕನಾಗಿದುದ್ದಕ್ಕೆ, ಸ್ತ್ರೀಗೆ ಸಿಗುತ್ತಿದ್ದ ಪ್ರಾಮುಖ್ಯ ಮತ್ತು ಗೌರವಕ್ಕೆ ಸಾಕ್ಷಿಯಂತಿದೆ. ಎಷ್ಟೋ ಹಳ್ಳಿಗಳ ಊರಹಬ್ಬ ಹೆಣ್ಣು ದೇವತೆಗೆ ಮೀಸಲು. ಆ ಮೂಲಕ ಗಂಡು, ಹೆಣ್ಣಿನ ಆರಾಧಕ ಮತ್ತು ಅಧೀನ. ಇದಲ್ಲದೆ ನಮ್ಮ ಜನಪದದಲ್ಲಿ ಹೇರಳವಾಗಿ ಸಿಗುವ ಬಲಿದಾನದಂಥ ಘಟನೆಗಳನ್ನು ದೈವೀಕರಿಸುವ ಒಂದು ಪ್ರಯತ್ನವಾಗಿಯೂ ಜಾತ್ರೆಗಳನ್ನು ನೋಡಬಹುದು.
ಸಾಮಾನ್ಯವಾಗಿ ಶೂದ್ರ- ದಲಿತ ಸಂಸ್ಕೃತಿಯ ನೆಲೆಗಟ್ಟಿನಲ್ಲೇ ಜಾತ್ರೆಗಳು ರೂಪುಗೊಂಡಿರುವುದರಿಂದ ತಿಪ್ಪೇಸ್ವಾಮಿ, ಮಾರಮ್ಮ, ಪಟ್ಟಲದಮ್ಮ, ಮಾದಪ್ಪ, ಬೀರಪ್ಪ ಇಂತ ಕೆಳವರ್ಗದ ದೇವ-ದೇವತೆಗಳಿಗೆ ಹೆಚ್ಚಿನ ಜಾತ್ರೆಗಳು ಮೀಸಲು ಮತ್ತು ಈ ಅನೇಕ ಜಾತ್ರೆಗಳು ಪ್ರಾಣಿಬಲಿಯನ್ನು ಆಚರಣೆಯ ಒಂದು ಭಾಗವಾಗಿ ಒಳಗೊಂಡಿವೆ. ಕೋಣ, ಕುರಿ, ಮೇಕೆ, ಕೋಳಿ ಮುಂತಾದ ಪ್ರಾಣಿಗಳ ವಧೆಯನ್ನು ಆಚರಣೆಯ ಪ್ರಜ್ಞಾವಲಯದಲ್ಲೇ ಸೇರಿಸಲಾಗಿದೆ. ತಾಮಸ ಗುಣದ ಪ್ರತೀಕದಂತಿರುವ ಮಾರಮ್ಮ, ಪಟ್ಟಲದಮ್ಮನಂಥ ದೇವತೆಗಳನ್ನು ಸಂತುಷ್ಟಗೊಳಿಸಲು ವರ್ಷಕ್ಕೊಮ್ಮೆ ಒಂದು ಕ್ಷುದ್ರಜೀವಿಯ ಬಲಿಯಾದರೂ ಬೇಡವೆ? ಪ್ರಾಣಿಬಲಿ ಮೂಲಕ ಇಂಥ ದೇವ-ದೇವತೆಗಳನ್ನು ಸುಪ್ರೀತಗೊಳಿಸಬಹುದು. ಗ್ರಾಮದ ಶಾಂತಿ, ಆರೋಗ್ಯ ಮತ್ತು ನೆಮ್ಮದಿಯನ್ನು ಕಾಪಾಡಿಕೊಳ್ಳಬಹುದು ಎಂಬ ಬಲವಾದ ನಂಬಿಕೆಯೆ ಇಂಥ ಆಚರಣೆಗಳು ಬೆಳೆಯಲು ಪ್ರೇರಣೆಯಾದದ್ದು.
ಸಂಕ್ರಾಂತಿಯೆಂದರೆ ಸುಗ್ಗಿಯ ಕಾಲ. ಹೊಲದ ಫಸಲು ಕಟಾವು ಆಗಿ ಮನೆ ಸೇರಿರುತ್ತದೆ. ದನಗಳಿಗೆ, ಜನಗಳಿಗೆ ವಿಶ್ರಾಂತಿ. ಹಾಗಾಗಿ ಊರಹಬ್ಬಗಳನ್ನು ಆವರಿಸಲು ಇದಕ್ಕಿಂತ ಸುಸಮಯ ಇನ್ನಾವುದಿದೆ? ನಂಬಿಕೆಯಂತೆ ಆಚೆ-ಈಚೆ ಮಳೆ ಬೀಳುವುದರಿಂದ ಮತ್ತೆ ರೈತರಿಗೆ ಕೆಲಸ ಆರಂಭವಾಗುತ್ತದೆ. ನಡುವಿನ ಎರಡು-ಎರಡೂವರೆ ತಿಂಗಳು ಹಬ್ಬಗಳ ಸುಗ್ಗಿ. ಋತುಮಾನವೆಲ್ಲ ಬಿಡುವಿಲ್ಲದೆ ದುಡಿದ ಜನಕ್ಕೆ ನೆಂಟರಿಷ್ಟರೊಡನೆ ಒಂದೆಡೆ ಕಲೆಯುವ, ಸಂತೋಷದಿಂದ ಕಾಲ ಕಳೆಯುವ ಸಡಗರ. ಈ ವಾರ ಒಂದೂರಿನಲ್ಲಿ ಹಬ್ಬವಾದರೆ ಇನ್ನಾವುದೊ ಹತ್ತಿರದ ಊರಿನಲ್ಲಿ ಮುಂದಿನ ವಾರ ಹಬ್ಬ.
ಊರಹಬ್ಬ ಎಂದ ಮೇಲೆ ಅದಕ್ಕೆ ಅನೇಕ ಆಯಾಮಗಳಿರುತ್ತವೆ. ಹಬ್ಬದ ಒಂದು ವಾರ ಮೊದಲಿಗೆ ಊರಿನಲ್ಲಿ ಕಂಟು ಹಾಕುವುದನ್ನು ನಿಷೇಧಿಸಲಾಗುತ್ತದೆ. ಟಾಂಟಾಂ ಹೊಡೆದು ಯಾರೂ ಮೆಣಸಿನಕಾಯಿ ಸುಡಬಾರದು, ಬಾಡು ಬೇಯಿಸಬಾರದು, ಬಟ್ಟೆ ಸುಡಬಾರದು ಮುಂತಾದ ನಿಷೇಧಗಳನ್ನು ಹೇರಲಾಗುತ್ತದೆ. ಇದನ್ನು ಮೀರಿ ನಡೆದವರ ಕಥೆ ಏನಾಗುತ್ತದೆ ಎಂಬುದಕ್ಕೆ ಹಿಂದಿನ ಕೆಲವು ಘಟನೆಗಳನ್ನು ನೆನಪಿಸಿಕೊಳ್ಳಲಾಗುತ್ತದೆ.
ಈ ಸಮಯದಲ್ಲಿ ಮನೆಗಳಿಗೆ ಸುಣ್ಣ ಬಣ್ಣ ಬಳಿಯುವುದು, ಕಿತ್ತು ಹೋದ ಭಾಗಗಳನ್ನು ಸರಿಪಡಿಸಿಕೊಳ್ಳುವುದು, ನೆಂಟರಿಷ್ಟರನ್ನು ಹಬ್ಬಕ್ಕೆ ಆಹ್ವಾನಿಸುವುದು, ಮಕ್ಕಳಿಗೆ ಹೊಸಬಟ್ಟೆ ಹೊಲಿಸಿಕೊಳ್ಳುವುದು ಎಲ್ಲವೂ ಜರುಗುತ್ತವೆ. ಇವೆಲ್ಲ ಮುಗಿಯುವಷ್ಟರಲ್ಲಿ ಹಬ್ಬ ಬಂದೇ ಬಿಟ್ಟಿರುತ್ತದೆ.
ಹಬ್ಬಕ್ಕೆ ಕೊಂಡದಬಂಡಿ, ಕೊಂಡ ಹಾಯುವುದು, ಸಿಡಿ ಆಡಿಸುವುದು ಪ್ರಮುಖ ಆಚರಣೆಗಳು. ಇಡೀ ದಿನ ನಡೆಯುವ ಉತ್ಸವದ ಮಧ್ಯೆಯೇ ಮೀಸಲು ನೀರು ತಂದು ಹೊಸಬೆಳೆಗಳ ಅಡುಗೆ ಮಾಡುವುದು, ತಂಬಿಟ್ಟು ಮಾಡಿ ಶೃಂಗರಿಸಿ ಆರತಿ ಬೆಳಗುವುದು, ಗೋಪೂಜೆ ಮಾಡುವುದು, ಮಡೆ ತರುವುದು ಎಲ್ಲವೂ ನಡೆಯುತ್ತವೆ. ರಾತ್ರಿ ಸೌದೆಯ ರಾಶಿಗೆ ಬೆಂಕಿ ಒಡ್ಡಿ ಬೆಳಗ್ಗೆ ಕೊಂಡ ಹಾಯುವುದು, ಕೊಂಡ ಹಾಯುವ ಮುಂಚಿತವಾಗಿ ಮರಿಬಲಿ ಕೊಡುವುದು ವಿಧಿವಿಧಾನ. ಕೊಂಡ ಹಾಯುವುದನ್ನು ದುಷ್ಟಶಕ್ತಿಗಳ ದಮನದ ಸಂಕೇತ ಎಂದು ಭಾವಿಸಿದರೂ ಅದರಾಚೆ ಶುದ್ಧತೆಯ, ಸತ್ಯಪರೀಕ್ಷೆಯ ಮತ್ತು ಊರಿನ ಯುವವರ್ಗವನ್ನು ಮಾನಸಿಕವಾಗಿ ಗಟ್ಟಿಗೊಳಿಸುವ ಪ್ರಯತ್ನವಾಗಿಯೂ ನೋಡಬಹುದು. ರಾತ್ರಿಯೆಲ್ಲ ವಿವಿಧ ಆಚರಣೆಗಳಲ್ಲಿ ತೊಡಗಿಕೊಂಡ ಭಕ್ತರು ಮತ್ತು ಗ್ರಾಮಸ್ಥರು ಆಯಾಸದಿಂದ ಬಸವಳಿದು ಸುಧಾರಿಸಿಕೊಳ್ಳಬೇಕಾದ್ದರಿಂದ ಮಾರನೇ ದಿನ ಸಿಡಿ ಆಚರಣೆ ಪ್ರಾರಂಭವಾಗುವುದು ಮಧ್ಯಾಹ್ನದ ಭೋಜನದ ನಂತರವೆ. ಇತ್ತ ಕಡೆ ಸಿಡಿ ನಡೆಯುವ ಜಾಗದಲ್ಲಿ ಅದು ಊರಿನ ಮಧ್ಯದ ರಂಗವಿರಬಹುದು ಅಥವಾ ಊರಾಚೆಯ ತೋಪಿರಬಹುದು, ಜನಗಳ ಜಾತ್ರೆ ನೆರೆಯುವುದುಂಟು. ಬಯಲಿನಲ್ಲಿ ಅಂಗಡಿ ಮುಂಗಟ್ಟುಗಳ ಭರಾಟೆ ರಂಗುರಂಗಿನ ಸಿಂಗಾರಗಳು ಕಣ್ಣಿಗೆ ಹಬ್ಬವನ್ನುಂಟು ಮಾಡುವಂತಿರುತ್ತವೆ.
ಜಾತ್ರೆಯ ಸೊಗಡು ಇರುವುದೇ ಅಲ್ಲಿ ನಡೆಯುವ ವ್ಯಾಪಾರ ವಹಿವಾಟಿನಲ್ಲಿ. ಬಹುತೇಕ ವ್ಯಾಪಾರ ಮಕ್ಕಳು ಮತ್ತು ಹೆಂಗಳೆಯರನ್ನು ಗುರಿಯಾಗಿರಿಸಿಕೊಂಡಿರುತ್ತದೆ. ತಾತ್ಕಾಲಿಕವಾಗಿ ಹಾಕಲಾಗುವ ಟೆಂಟಿನ ಅಂಗಡಿಗಳಲ್ಲಿ ಜೋಡಿಸಿಟ್ಟ ಬಣ್ಣಬಣ್ಣದ ಬತ್ತಾಸುಗಳು, ವಿವಿಧ ಸಿಹಿತಿನಿಸುಗಳು, ಸುಣ್ಣದ ಕಲ್ಲು, ಖಾರಸೇವೆಗಳಲ್ಲದೆ ಬಿಸಿಬಿಸಿಯಾಗಿ ಕರಿಯುವ ಬೋಂಡ ಬಜ್ಜಿಗಳ ಸುವಾಸನೆ, ಗಾಜಿನ ಲೋಟಗಳಲ್ಲಿ ತುಂಬಿಸಿಟ್ಟ ಬಣ್ಣಬಣ್ಣದ ಶರಬತ್ತು ಜಾತ್ರೆಯ ಗಮ್ಮತ್ತನ್ನು ಹೆಚ್ಚಿಸುತ್ತವೆ. ಜಾತ್ರೆಗೆ ಹೋದವರು ಕನಿಷ್ಠಪಕ್ಷ ಕಡಲೆಪುರಿಯನ್ನಾದರೂ ಖರೀದಿಸುತ್ತಾರೆ. ಇತ್ತೀಚೆಗಂತೂ ಜಾತ್ರೆಗಳಲ್ಲಿ ಐಸ್‌ಕ್ರೀಂ, ಗೋಬಿಮಂಚೂರಿ, ನೂಡಲ್ಸ್ ಮುಂತಾದ ಫಾಸ್ಟ್‌ಫುಡ್‌ಗಳ ಮಾರಾಟ ಭರಾಟೆ ಜೋರಾಗಿದೆ. ಇಲ್ಲಿ ಆರೋಗ್ಯದ ವಿಚಾರ ನಗಣ್ಯವಾಗಿರುತ್ತದೆ.
ಹಳ್ಳಿಜಾತ್ರೆಗಳಲ್ಲಿ ಮಾರಾಟವಾಗುವ ಬಣ್ಣದ ಬಲೂನುಗಳು, ಪೀಪಿಗಳು, ಟೋಪಿಗಳು, ಗಾಳಿಗೆ ತಿರುಗುವ ಗಿರಿಗಿಟ್ಲೆಗಳು, ಬಣ್ಣದ ಕನ್ನಡಕಗಳು ಹೊಸ ಪ್ರಪಂಚವನ್ನೇ ಸೃಷ್ಟಿಸುತ್ತವೆ. ಇವುಗಳನ್ನು ತೊಟ್ಟ ಅಥವಾ ಹಿಡಿದ ಮಕ್ಕಳು ಜಾತ್ರೆ ತುಂಬ ಪೀಪಿ ಊದಿ ಸದ್ದು ಮಾಡಿದರೇ ಜಾತ್ರೆಗೆ ಕಳೆಗಟ್ಟುವುದು.
ಜನರ ಕಾಲ್ತುಳಿತದಿಂದ ಏಳುವ ಧೂಳು, ಅಲ್ಲಿನ ಸದ್ದು, ಅತ್ತಿಂದಿತ್ತದ ಓಡಾಟ ದೂರದಲ್ಲಿ ನಿಂತು ನೋಡುವವರಿಗೆ ಜಾತ್ರೆಯ ಸ್ಥಳ ಒಂದು ರಣಾಂಗಣದಂತೆ ಕಂಡರೆ ಅತಿಶಯೋಕ್ತಿಯೇನಲ್ಲ. ಆದರೆ ಇದೆಲ್ಲಕ್ಕಿಂತ ಜಾತ್ರೆಯ ಸೌಂದರ್ಯ ಅಡಗಿರುವುದು ಅದು ನಮ್ಮನ್ನು ಆವರಿಸಿಕೊಳ್ಳುವ ಬಗೆಯಲ್ಲಿ. ನಮ್ಮ ಗತಕಾಲದ ನೆನಪುಗಳನ್ನು, ಬಾಲ್ಯದ ತುಂಟಾಟಗಳನ್ನು, ಹಳ್ಳಿಯ ಬದುಕಿನ ಸೊಗಡನ್ನು ಮತ್ತು ಒಂದೆರಡು ದಿನಗಳ ಮಟ್ಟಿಗೆ ಬದುಕನ್ನು ಶ್ರೀಮಂತಗೊಳಿಸಿ ಆಧುನಿಕತೆಯ ಬೆರಗಿಗೆ ಒಡ್ಡಿಕೊಳ್ಳುವಂತೆ ಮಾಡುವ ಪರಿಯಲ್ಲಿ. ಯಾವ ಮನುಷ್ಯನೂ ತನ್ನ ಬಾಲ್ಯವನ್ನು ಪ್ರೀತಿಸದೆ ಇರಲಾರ. ಹಾಗೆ ತನ್ನೂರು ಮತ್ತು ಕಳೆದ ಆ ದಿನಗಳನ್ನು ಸಹ.
ಆಧುನಿಕತೆ ಮತ್ತು ಉದಾರೀಕರಣದ ಗಾಳಿ ಬೀಸುವ ಮೊದಲು ಬದುಕಿನ ಲಕ್ಷುರಿ ಎಂದರೆ ಇಂಥ ಜಾತ್ರೆಗಳಲ್ಲಿ ಸವಿಯುವ ಕ್ಷಣಗಳು ಮತ್ತು ತಿಂಡಿತಿನಿಸುಗಳೇ ಆಗಿದ್ದವು. ಯಾಂತ್ರಿಕ ಬದುಕಿನಿಂದಾಗಿ ಮತ್ತು ನಗರೀಕರಣ ಜಾಸ್ತಿಯಾದಂತೆಲ್ಲ ಜಾತ್ರೆಗಳ ಮಹತ್ವ ಕ್ಷೀಣಿಸುತ್ತಿದೆ. ನವ ಪೀಳಿಗೆಯ ಮಕ್ಕಳಿಗೆ ಪರೀಕ್ಷೆ, ಕೋಚಿಂಗ್, ಪ್ರಾಕ್ಟೀಸ್ ಮುಂತಾದ ಜಂಜಡಗಳಿಂದ ಬಿಡುವಿಲ್ಲವಾಗಿದೆ. ಇನ್ನು ಆಧುನಿಕತೆಯ ಸ್ಪರ್ಶ- ಜಾತ್ರೆಗಳಲ್ಲಿ ಏನಿದೆ, ನಿತ್ಯದ ಬದುಕಿನಲ್ಲೇ ಎಲ್ಲವನ್ನು ಅನುಭವಿಸುವಂತಾಗಿರುವಾಗ? ಬೇರುಗಳು ಕಳಚಿಕೊಂಡು ದ್ವೀಪಗಳಂತಾಗುತ್ತಿರುವ ನಮ್ಮ ಮಕ್ಕಳಿಗೆ ಬದುಕಿನ ಆರ್ದ್ರತೆಯನ್ನು ಕಲಿಸಿಕೊಡುವ ಅದ್ಭುತ ತಾಣ ಮತ್ತು ಅವಕಾಶಗಳು ಈ ಜಾತ್ರೆಗಳು ಎಂದರೆ ತಪ್ಪಾಗಲಾರದು.

 ಡಾ. ತೈಲೂರು ದೇವರಾಜ್
mayidev68@gmail.com


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com