ಖಲೀಫರು ದೀಪದ ಬೆಳಕಲ್ಲಿ ಏನನ್ನೋ ಬರೆಯುತ್ತಿದ್ದರು. ಆಗ ಅಲ್ಲಿಗೆ ಒಬ್ಬ ವ್ಯಕ್ತಿ ಬಂದು ತಮ್ಮಲ್ಲಿ ಸ್ವಲ್ಪ ಮಾತನಾಡಬೇಕು ಎಂದು ಕೋರಿಕೊಂಡರು. ಸಮ್ಮತಿ ಸೂಚಿಸಿದ ಖಲೀಫರು ದೀಪವನ್ನು ಆರಿಸಿದರು. ಮಾತುಕತೆಯಾಗಿ ಆ ವ್ಯಕ್ತಿಯನ್ನು ಬೀಳ್ಕೊಟ್ಟ ನಂತರ ದೀಪವನ್ನು ಹೊತ್ತಿಸಿ ಪುನಃ ಬರೆಯಲು ಪ್ರಾರಂಭಿಸಿದರು. ಅದನ್ನು ಗಮನಿಸಿದ ಶಿಷ್ಯನೋರ್ವ ಹಾಗೇಕೆ ಮಾಡಿದಿರಿ? ಎಂದು ಖಲೀಫರಲ್ಲಿ ಪ್ರಶ್ನಿಸಿದನು. 'ಉರಿಯುತ್ತಿರುವ ದೀಪದ ಎಣ್ಣೆ ನನ್ನ ಸ್ವಂತದ್ದಲ್ಲ. ಅದು ರಾಜ್ಯಕ್ಕೆ ಸಂಬಂಧಪಟ್ಟಿದ್ದು. ಆಡಳಿತಕ್ಕೆ ಸಂಬಂಧಿಸಿದ ವಿಚಾರ ಬರೆಯುವಾಗ ಮಾತ್ರ ನಾನದನ್ನು ಬಳಸಬೇಕು. ಆಗ ನಡೆಸಿದ ಚರ್ಚೆ ವೈಯಕ್ತಿಕ ವಿಚಾರವಾಗಿದೆ. ನನ್ನ ವೈಯಕ್ತಿಕ ಕೆಲಸಗಳಿಗೆ ರಾಜ್ಯದ ಸೊತ್ತನ್ನು ಬಳಸಿದ ಮೇಲೆ ದೇವರು ಪ್ರಶ್ನಿಸಿದರೆ ನಾನೇನು ಹೇಳಲಿ? ರಾಜ್ಯಕ್ಕೆ ನ್ಯಾಯ ಹೇಳುವ ನಾನೇ ಅನ್ಯಾಯ ಮಾಡುವುದು ಸರಿಯೇ?' ಎಂದು ಪ್ರಶ್ನಿಸಿದರು.