

ನವದೆಹಲಿ: ಲೋಕಸಭೆಯಲ್ಲಿ ಪ್ರತಿಪಕ್ಷದ ಸ್ಥಾನದ ನಿರಾಕರಣೆಯ ನಂತರ ಎದೆಗುಂದದ ಕಾಂಗ್ರೆಸ್ ಪಕ್ಷ ಟ್ವಿಟ್ಟರ್ ಹ್ಯಾಂಡಲ್ ಗಳೊಂದಿಗೆ ವಿವಿಧ ಪ್ರತಿಬಿಂಬ ಸಂಪುಟ ಸಮಿತಿಗಳನ್ನು ರಚಿಸಿ ಸರ್ಕಾರಕ್ಕೆ ಪರಿಣಾಮಕಾರಿ ವಿರೋಧಿಯಾಗಲು ಸನ್ನದ್ಧವಾಗಿದೆ.
ನವೆಂಬರ್ ೨೪ ರಿಂದ ಪ್ರಾರಂಭವಾಗುವ ಲೋಕಸಭಾ ಚುನಾವಣಾ ಅಧಿವೇಶನಕ್ಕೂ ಮುಂಚಿತಾವಾಗಿ ಈ ಸಮಿತಿಗಳನ್ನು ರಚಿಸಿದ್ದು, ನರೇಂದ್ರ ಮೋದಿ ಸರ್ಕಾರದ ಪ್ರಮುಖ ಖಾತೆಗಳ ಹಲವು ನಿರ್ಣಯಗಳು ಮತ್ತು ನೀತಿಗಳನ್ನು ವೀಕ್ಷಿಸಲಾಗುವುದು ಎಂದು ಹಿರಿಯ ಕಾಂಗ್ರೆಸ್ ಮುಖಂಡ ಇಂದು ತಿಳಿಸಿದ್ದಾರೆ.
ಕಾಂಗ್ರೆಸ್ ಪಕ್ಷ ೪೪ ಸ್ಥಾನಗಳಿಗೆ ಇಳಿದಿದ್ದರೂ, ತಮ್ಮ ಪಕ್ಷದ ಪ್ರತಿಭಾವಂತ ಮುಖಂಡರನ್ನು, ಎನ್ ಡಿ ಎ ಸರ್ಕಾರ ಜಾರಿಗೆ ತರುತ್ತಿರುವ ಹೊಸ ನೀತಿಗಳನ್ನು ಮತ್ತು ಯು ಪಿ ಎ ಜಾರಿಗೆ ತಂದಿದ್ದ ನೀತಿಗಳನ್ನು ಬದಲಾವಣೆ ಮಾಡುತ್ತಿರುವ ಕ್ರಮವನ್ನು ವಿರೋಧಿಸಲು ಉಪಯೋಗಿಸಿಕೊಂಡಿದೆ.
ಮಾಜಿ ಸಚಿವರಾದ ಎ ಕೆ ಆಂಟನಿ, ಎಂ ವೀರಪ್ಪ ಮೊಯಿಲಿ, ಆನಂದ ಶರ್ಮ, ಆಸ್ಕರ್ ಫರ್ನಾಂಡಿಸ್, ಲೋಕಸಭೆಯಲ್ಲಿ ಕಾಂಗ್ರೆಸ್ ಅಧ್ಯಕ್ಷರೂ ಆಗಿರುವ ಮಲ್ಲಿಕಾರ್ಜುನ ಖರ್ಗೆ, ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಗುಲಾಂ ನಭಿ ಆಜಾದ್ ಈ ಸಮಿತಿಗಳು ಪ್ರಮುಖ ಸದಸ್ಯರಾಗಿದ್ದಾರೆ.
ಹಣಕಾಸು, ವಿದೇಶಿ ನೀತಿ, ವಾಣಿಜ್ಯ ವ್ಯವಹಾರ ಮತ್ತು ದೂರಸಂಪರ್ಕ ಖಾತೆಗಳ ವಿಷಯಗಳನ್ನು ನೋಡಿಕೊಳ್ಳುವ ಸಮಿತಿಯಲ್ಲಿ ಮೊಯಿಲಿ, ಶರ್ಮಾ ಮತ್ತು ಜ್ಯೋತಿರಾದಿತ್ಯ ಸಿಂಧಿಯಾ ಇದ್ದು, ಗೃಹ, ರಕ್ಷಣೆ ಮತ್ತು ಕಾನೂನು ಸಮಿತಿಗಳಲ್ಲಿ ಆಂಟನಿ, ಅಶ್ವಿನಿ ಕುಮಾರ್ ಮತ್ತು ಐ ವೈ ಸಿ ಮುಖ್ಯಸ್ಥ ರಾಜೀವ್ ಸತವ್ ಇದ್ದಾರೆ.
ಕೃಷಿ ಮತ್ತು ಕುಡಿಯುವ ನೀರು ಮತ್ತು ಕೊಳಚೆ ನಿರ್ಮೂಲನೆ ಸಮಿತಿಯಲ್ಲಿ ದಿಗ್ವಿಜಯ್ ಸಿಂಗ್, ಅಶೋಕ್ ಚವಾನ್ ಮತ್ತು ನಿನಾಂಗ್ ಎರಿಂಗ್ ಇದ್ದಾರೆ.
ರೈಲ್ವೆ ಮತ್ತು ಕಾರ್ಮಿಕ ಸಮಿತಿಗಳಲ್ಲಿ ಫರ್ನಾಂಡಿಸ್ ಮತ್ತು ರಂಜೀತ ರಂಜನ್ ಜೊತೆ ಖರ್ಗೆ ಇದ್ದಾರೆ.
ಆರೋಗ್ಯ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಮಿತಿಯಲ್ಲಿ ಆಜಾದ್, ಜೆ ಡಿ ಸಲೀಂ ಮತ್ತು ಕೆ ಸುರೇಶ್ ಇದ್ದಾರೆ.
ಮಾನವ ಸಂಪನ್ಮೂಲ, ಪಂಚಾಯತ್ ರಾಜ್ ಮತ್ತು ಈಶಾನ್ಯ ಪ್ರದೇಶದ ಸಮಿತಿಯಲ್ಲಿ ಮಣಿಶಂಕರ್ ಅಯ್ಯರ್, ಬಾಲಚಂದ್ರ ಮುಂಗೇಕರ್ ಮತ್ತು ಸುಶ್ಮಿತಾ ದೇವ್ ಸದಸ್ಯರಾಗಿದ್ದಾರೆ.
ಗ್ರಾಮೀಣ ಅಭಿವೃದ್ಧಿ ಮತ್ತು ಪರಿಸರ ಸಮಿತಿಯಲ್ಲಿ ಕೆ ವಿ ಥಾಮಸ್, ಜಯರಾಂ ರಮೇಶ್ ಮತ್ತು ಗೌರವ್ ಗೊಗಾಯ್ ಇದ್ದಾರೆ.
ಬ್ರಿಟಿಷ್ ಪಾರ್ಲಿಮೆಂಟಿನಲ್ಲಿ ಆಳುವ ಸಚಿವರಿಗೆ ಪ್ರತಿಯಾಗಿ ವಿರೋಧ ಪಕ್ಷದವರು ಒಬ್ಬ ಶ್ಯಾಡೋ ಎಂ ಪಿ ಯನ್ನು ನೇಮಕ ಮಾಡುವ ವಿಧಾನದ ಅನುಕರಣೆಯಲ್ಲೆ ಈ ಶ್ಯಾಡೋ ಸಂಪುಟದ ರಚನೆ ಮಾಡಲಾಗಿದೆ.
ಇದನ್ನು ಶ್ಯಾಡೋ ಸಂಪುಟ ಎಂದು ಕರೆಯುವುದು ಸಮಂಜಸವಲ್ಲಿ, ಕಾಂಗ್ರೆಸ್ ಪಕ್ಷ ಪರಿಣಾಮಕಾರಿಯಾದ ವಿರೋಧ ಪಕ್ಷವಾಗಿ ಕೆಲಸ ಮಾಡಲು ಈ ಸಮಿತಿಗಳನ್ನು ರಚಿಸಿದೆ ಎಂದು ಪಕ್ಷದ ನಾಯಕರು ಪ್ರತಿಕ್ರಿಯಿಸಿದ್ದಾರೆ.