

ಸಿಡ್ನಿ: ಭಾರತದ ಯುವಜನತೆಗೆ ಕಲ್ಲನ್ನು ಪುಡಿಗಟ್ಟೋ ತಾಕತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಹೇಳಿದ್ದಾರೆ.
ಆಸ್ಟ್ರೇಲಿಯಾದ ಸಿಡ್ನಿಯಲ್ಲಿರುವ ಅಲ್ಫೋನ್ಸ್ ಅರೆನಾ ಕ್ರೀಡಾಂಗಣದಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಭಾಷಣ ಮಾಡಿದ ಮೋದಿ, ಸ್ವಾಮಿ ವಿವೇಕಾನಂದರು ಯುವ ಭಾರತದ ಕನಸು ಕಂಡಿದ್ದರು. ಆ ಕನಸು ನನಸಾಗುತ್ತಿದೆ. ಭಾರತದ ಯುವಜನತೆಗೆ ಕಲ್ಲನ್ನು ಪುಡಿಗಟ್ಟೋ ತಾಕತ್ತಿದೆ ಎಂದು ತಿಳಿಸಿದ್ದಾರೆ.
ಇಲ್ಲಿ ಸಿಕ್ಕ ಸ್ವಾಗತ, ಸತ್ಕಾರ, ಈ ಎಲ್ಲಾ ಗೌರವಕ್ಕೆ ನಾನು ಹಕ್ಕುದಾರನಲ್ಲ. ಭಾರತ ಮಾತೆಯ 125 ಕೋಟಿ ಜನರ ಪಾದಗಳಿಗೆ ಈ ಗೌರವ ಸಮರ್ಪಣೆ ಮಾಡುತ್ತೇನೆ. ಸಿಡ್ನಿಯಲ್ಲಿ ಕಾಣುತ್ತಿರುವ ಈ ದೃಶ್ಯ ಭಾರತದಲ್ಲಿ ಆಂದೋಲವನ್ನು ಸೃಷ್ಟಿಸುತ್ತದೆ.
ಸ್ವಾಮಿ ವಿವೇಕಾನಂದರು ಹೇಳಿದ್ದರು ದೇವ ದೇವತೆಗಳನ್ನು ಜನ ಮರೆತು ಬಿಡುತ್ತಾರೆ, ಅದು ಇಂದು ನಿಜವಾಗಿದೆ. ಕೇವಲ ಭಾರತ ಮಾತೆಯನ್ನು ಪೂಜಿಸಿ. ಭಾರತವನ್ನು ಉತ್ತುಂಗಕ್ಕೆ ಏರಿಸಿ ಎಂದು ಮೋದಿ ಕರೆ ನೀಡಿದ್ದಾರೆ.
ನಾವು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸತ್ತಿಲ್ಲ. ಸಂಗ್ರಾಮದಲ್ಲಿ ಭಾಗಿಯಾಗಲು ಹಾಗೂ ಭಾರತ ತಾಯಿಯ ಸೇವೆ ಮಾಡಿ ಜೈಲು ಪಾಲಾಗುವ ಅವಕಾಶ ಸಿಕ್ಕಿಲ್ಲ. ದೇಶಕ್ಕೋಸ್ಕರ ಬದುಕಲು ನಮ್ಮಿಂದ ಸಾಧ್ಯವಿಲ್ಲವೇ? ಎಂದು ಪ್ರಶ್ನಿಸಿದ ಮೋದಿ, ಆದರೆ ದೇಶಕ್ಕಾಗಿ ಬದುಕುವ ಎಲ್ಲರೂ ಅದೃಷ್ಟವಂತರೇ ಎಂದು ಹೇಳಿದ್ದಾರೆ.
ನಾನು ಇಲ್ಲಿ ಭರವಸೆ ನೀಡಲು ಬಂದಿದ್ದೇನೆ. ಸಿಡ್ನಿ ಒಂದು ಸುಂದರ ನಗರ ಹಾಗೂ ಆಸ್ಟ್ರೇಲಿಯಾ ಸುಂದರ ದೇಶ. ಈ ಎರಡೂ ದೇಶಗಳು ಕ್ರಿಕೆಟ್ ಇಲ್ಲದೇ ಬದುಕಲಾರವು. ನನ್ನ ಹಾಗೆ ಭಾರತದಲ್ಲಿ ಜನಿಸಿರುವ ಎಷ್ಟೋ ಮಂದಿ ಇಲ್ಲಿದ್ದಾರೆ. ನನ್ನಂಥ ವ್ಯಕ್ತಿ ನಿಮ್ಮಲ್ಲಿದ್ದಾರೆ. ಆದರೆ ಅವರಿಗೆ ಸಂಗ್ರಾಮದಲ್ಲಿ ಭಾಗವಹಿಸಲು ಅವಕಾಶ ಸಿಕ್ಕಿಲ್ಲ ಎಂದು ಮೋದಿ ತಿಳಿಸಿದ್ದಾರೆ.
ನನ್ನ 6 ತಿಂಗಳ ಆಡಳಿತ ಅನುಭವ ಏನೂ ಅಲ್ಲ. ಸ್ವಾತಂತ್ರ್ಯ ಬಳಿಕ ಇನ್ನು ಎಷ್ಟೋ ಮಂದಿಗೆ ಮೂಲಸೌಕರ್ಯ ಸೌಲಭ್ಯಗಳು ಸಿಕ್ಕಿಲ್ಲ. ನಾನು ಚಿಕ್ಕ ಚಿಕ್ಕ ಕೆಲಸ ಮೊದಲು ಮಾಡಬೇಕಿದೆ. ಸಾಮಾನ್ಯ ಜನರಿಗೂ ವ್ಯವಸ್ಥೆಯ ಬಗ್ಗೆ ಅರಿವೂ ಮೂಡಿಸಬೇಕಿದೆ ಎಂದು ಮೋದಿ ಹೇಳಿದ್ದಾರೆ.
ವೀಡಿಯೊಗಾಗಿ ಇಲ್ಲಿ ಕ್ಲಿಕ್ ಮಾಡಿ