

ದೆಹಲಿ: ಅಮೇಥಿ ಪ್ರವಾಸದ ಬಳಿಕ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಪಾಕ್ ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡುತ್ತಿದ್ದು, ಪಾಕ್ ದಾಳಿಯಿಂದ ನಲುಗಿರುವ ಗಡಿ ಪ್ರದೇಶದ ಹಳ್ಳಿಗರನ್ನು ಕಂಡು ಮಾತನಾಡಿಸಲಿದ್ದಾರೆ. ಜತೆಗೆ ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ಪಿಡಿಪಿ -ಬಿಜೆಪಿ ಸರ್ಕಾರದ ವೈಫಲ್ಯಗಳನ್ನು ಹೈಲೈಟ್ ಮಾಡಲಿದ್ದಾರೆ.
ಆಗಸ್ಟ್ 26 ರಿಂದ ಕಣಿವೆನಾಡಿನಲ್ಲಿ 3 ದಿನಗಳ ಪ್ರವಾಸವನ್ನು ಕೈಗೊಳ್ಳುತ್ತಿರುವ ರಾಹುಲ್, ಪೂಂಚ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆ ಬಳಿಯೂ ಭೇಟಿ ನೀಡಲಿದ್ದಾರೆ.ಕಾಶ್ಮೀರದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಜತೆ ಸಮಾಲೋಚನೆ ನಡೆಸಲಿರುವ ರಾಹುಲ್, ಸೋಪೋರ್ ಅಥವಾ ಸಂಗ್ರಾಮ ಗ್ರಾಮದಲ್ಲಿ ಮೆರವಣಿಗೆಯನ್ನು ಸಹ ನಡೆಸಲಿದ್ದಾರೆ.
"ಇದೊಂದು ದೀರ್ಘ ಪ್ರವಾಸವಾಗಿದೆ. ರಾಹುಲ್ ಗಾಂಧಿ ಮೂರು ದಿನಗಳ ಕಾಲ ಇಲ್ಲಿರಲಿದ್ದಾರೆ. ಆಗಸ್ಟ್ 27 ಕ್ಕೆ ಜಮ್ಮು ತಲುಪುವ ಅವರು ಪಕ್ಷದ ಕಾರ್ಯಕರ್ತರ ಜತೆ ಮಾತುಕತೆ ಮುಗಿಸಿದ ಬಳಿಕ ಫೂಂಚ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯ ಬಳಿ ಪಾಕ್ ದಾಳಿಯ ಪ್ರಭಾವಕ್ಕೊಳಗಾಗಿರುವ ಗ್ರಾಮಸ್ಥರ ಜತೆ ಸಭೆ ನಡೆಸಲಿದ್ದಾರೆ" ಎಂದು, ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಗುಲಾಮ್ ಅಹ್ಮದ್ ಮಿರ್ ಮಾಧ್ಯಮದೊಂದಿಗೆ ಹೇಳಿದ್ದಾರೆ.