

ನವದೆಹಲಿ: ನವೆಂಬರ್ ಮತ್ತು ಡಿಸೆಂಬರ್ ಆರಂಭದಲ್ಲಿ ದಕ್ಷಿಣ ಭಾರತದಲ್ಲಿ ಸುರಿದ ಮಳೆಯಿಂದಾಗಿ ರು.20,000 ಕೋಟಿ ಆರ್ಥಿಕ ನಷ್ಟ ಉಂಟಾಗಿದೆ ಎಂದು ವಿಮಾ ಬ್ರೋಕರೇಜ್ ಕಂಪನಿ ಆನ್‍ಬೆನ್‍ಫೀಲ್ಡ್ ತನ್ನ ಮಾಸಿಕ ವರದಿಯಲ್ಲಿ ಹೇಳಿದೆ. ಪ್ರವಾಹ, ಮಳೆ ನೀರು ಹರಿದುಹೋಗಲು ಸಮರ್ಪಕ ಕಾಲುವೆ ವ್ಯವಸ್ಥೆ ಮಾಡದಿರುವುದರಿಂದ ಏಷ್ಯಾದಲ್ಲಿ ಆರ್ಥಿಕ ಪ್ರಗತಿಗೆ ಹಿನ್ನಡೆಯಾಗಿದೆ ಎಂದು ವರದಿ ವಿವರಿಸಿದೆ.
ಹಿಂಗಾರು ಮಳೆ ದಕ್ಷಿಣ ಭಾರತ ಮತ್ತು ಶ್ರೀಲಂಕಾದಲ್ಲಿ ಭಾರಿ ಅವಾಂತರ ಸೃಷ್ಟಿಸಿತು. ತಮಿಳುನಾಡು, ಆಂಧ್ರ ಪ್ರದೇಶ ಮತ್ತು ಶ್ರೀಲಂಕಾದಲ್ಲಿ ಹೆಚ್ಚಿನ ನಷ್ಟ ಉಂಟಾಗಿದೆ. ನದಿಗಳು ಗರಿಷ್ಠ ಮಿತಿ ಮೀರಿ ಹರಿದಿದ್ದರಿಂದ ಕೃಷಿ ಮತ್ತು ಮೂಲಸೌಕರ್ಯ ವಲಯಕ್ಕೆ ಭಾರಿ ನಷ್ಟ ಉಂಟು ಮಾಡಿದೆ. ಅದರಲ್ಲೂ ಚೆನ್ನೈ ಮಹಾನಗರ ಹೆಚ್ಚಿನ ಸಂಕಷ್ಟಕ್ಕೆ ಸಿಲುಕಿದೆ ಎಂದು ವರದಿ ವಿವರಿಸಿದೆ. ಇದರಿಂದ ವಿಮಾ ಕ್ಲೇಮ್ ಗಳ ಸಂಖ್ಯೆಯೂ ಹೆಚ್ಚಿದ್ದು ರು.2,000 ಕೋಟಿಗೆ ಮುಟ್ಟಬಹುದು ಎಂದು ಅಂದಾಜಿಸಲಾಗಿದೆ.
ಚೆನ್ನೈ ಪ್ರವಾಹ ನಗರ ನಿರ್ಮಾಣ ಯೋಜನೆಗಳನ್ನು ಪುನರ್ ವಿನ್ಯಾಸಗೊಳಿಸುವತ್ತ ನೋಟ ಹರಿಸುವಂತೆ ಮಾಡಿದೆ. ಇಂತಹ ಪ್ರಕೃತಿ ವಿಕೋಪಗಳನ್ನು ನಿಯಂತ್ರಿಸುವ ಕ್ರಮಗಳನ್ನು ಕೈಗೊಳ್ಳುವ ಅಗತ್ಯವನ್ನು ತೋರಿಸಿದೆ ಎಂದು ವರದಿಯಲ್ಲಿ ಹೇಳಲಾಗಿದೆ