

ಲಖನೌ: ಕೊಲೆ ಪ್ರಕೃತಿ ಸಹಜ ಪ್ರಕ್ರಿಯೆಯಾಗಿದ್ದು ಅದನ್ನು ತಡೆಯಲು ಸಾಧ್ಯವಿಲ್ಲ ಎಂದು ಉತ್ತರ ಪ್ರದೇಶದ ಸಚಿವರೊಬ್ಬರು ಹೇಳಿದ್ದಾರೆ.
ಉತ್ತರ ಪ್ರದೇಶದಲ್ಲಿ ಪದೇ ಪದೇ ನಡೆಯುತ್ತಿರುವ ಪತ್ರಕರ್ತರ ಮೇಲಿನ ಹಲ್ಲೆ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ತೋಟಗಾರಿಕಾ ಖಾತೆ ಸಚಿವ ಪರಸನಾಥ ಯಾದವ್ ಅವರು, ಕೊಲೆಯಂತಹ ಘಟನೆಗಳು ಪ್ರಕೃತಿ ಸಹಜ ಪ್ರಕ್ರಿಯೆಯಾಗಿದ್ದು, ಪ್ರಕೃತಿದತ್ತ ಘಟನೆಗಳನ್ನು ನಾವು ತಡೆಯಲು ಸಾಧ್ಯವಿಲ್ಲ ಎಂದು ಬೇಜವಾಬ್ದಾರಿಯಾಗಿ ಹೇಳಿಕೆ ನೀಡಿದ್ದಾರೆ.
ಅಲಹಾಬಾದ್ ನಲ್ಲಿ ಮಾತನಾಡಿದ ಪರಸನಾಥ್ ಯಾದವ್, "ಇಂತಹ ಕೆಲ ಘಟನೆಗಳು ನಡೆದಿರುವುದು ನಮ್ಮ ಗಮನಕ್ಕೂ ಬಂದಿದೆ. ಆದರೆ ಇವೆಲ್ಲವೂ ಪ್ರಕೃತಿ ಸಹಜ ಪ್ರಕ್ರಿಯೆಗಳಾಗಿದ್ದು, ಪ್ರಕೃತಿ ವಿರುದ್ಧ ಹೋರಾಡಲು ಸಾಧ್ಯವಿಲ್ಲವಲ್ಲ" ಎಂದು ಹೇಳಿದ್ದಾರೆ.
ಉತ್ತರ ಪ್ರದೇಶದ ಸಚಿವರಾದ ರಾಮಮೂರ್ತಿ ವರ್ಮಾ ಅವರ ಅಕ್ರಮಗಳ ವಿರುದ್ಧ ಪತ್ರಕರ್ತ ಜಗೇಂದರ್ ಸಿಂಗ್ ಎಂಬಾತ ಫೇಸ್ ಬುಕ್ ನಲ್ಲಿ ಬರೆದ ಎಂಬ ಒಂದೇ ಕಾರಣಕ್ಕಾಗಿ ಕಳೆದ ಜೂನ್ 1ರಂದು ರಾಮಮೂರ್ತಿ ಬೆಂಬಲಿಗರು ಸಾರ್ವಜನಿಕವಾಗಿ ಜಗೇಂದರ್ ಸಿಂಗ್ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹತ್ತಿ ಅಮಾನುಷವಾಗಿ ಹತ್ಯೆ ಮಾಡಿದ್ದರು. ಈ ಪ್ರಕರಣ ಮಾಧ್ಯಮಗಳಲ್ಲಿ ದೇಶಾದ್ಯಂತ ಬಿತ್ತರಗೊಂಡು ಉತ್ತರ ಪ್ರದೇಶ ಸರ್ಕಾರದ ವಿರುದ್ಧ ತೀವ್ರ ಒತ್ತಡ ಬಂದಿತ್ತು. ಹೀಗಾಗಿ ಕ್ರಮ ಕೈಗೊಂಡಿರುವ ಉತ್ತರ ಪ್ರದೇಶ ಸರ್ಕಾರ ಪ್ರಕರಣ ಸಂಬಂಧ ನಾಲ್ವರು ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಿದೆ.
ಅಲ್ಲದೆ ಸಚಿವ ರಾಮಮೂರ್ತಿ ವಿರುದ್ಧ ಪ್ರಕರಣ ದಾಖಲಿಸಿ ಅವರನ್ನು ಬಂಧಿಸಿದೆ. ಇದಾದ ಕೆಲವೇ ದಿನಗಳ ಅಂತರದಲ್ಲಿ ಫಿಲಿಬಿಟ್ ಜಿಲ್ಲೆಯಲ್ಲಿ ಹೈದರ್ ಖಾನ್ ಎಂಬ ಪತ್ರಕರ್ತನ ಮೇಲೂ ಮಾರಣಾಂತಿಕ ಹಲ್ಲೆ ನಡೆದಿದೆ. ಈ ಎಲ್ಲ ಬೆಳವಣಿಗೆಗಳನ್ನು ಗಮನಿಸಿದರೆ ಉತ್ತರ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದ್ದು, ಅರಾಜಕತೆ ತಾಂಡವವಾಡುತ್ತಿದೆ ಎಂದೆನಿಸುತ್ತಿದೆ.