

ಬರ್ಲಿನ್: ಗಂಡಸರೇ ನಿಮ್ಮ ಮನೆಯಲ್ಲಿ ಬೆಕ್ಕು ಸಾಕಿದ್ದರೆ ಜೋಕೆ ಜರ್ಮನಿಯಲ್ಲಿ ಯುವತಿಯೊಬ್ಬಳು ಬೆಕ್ಕು ಕಚ್ಚಿದ್ದರಿಂದ ತನ್ನ ಬಾಯ್ ಫ್ರೆಂಡ್ ಜತೆ ಮಾಡಿದ ರಾದ್ಧಾಂತ ಕೇಳಿದರೆ ಇನ್ಯಾವುದೇ ಗಂಡಸು ತನ್ನ ಮನೆಯಲ್ಲಿ ಬೆಕ್ಕು ಸಾಕುವ ಸಾಹಸವನ್ನೇ ಮಾಡಲಿಕ್ಕಿಲ್ಲ!
ಆಗಿದ್ದು ಏನಪ್ಪಾ ಅಂದ್ರೆ, 26 ವರ್ಷದ ಈ ಯುವತಿ ಹಗೇನ್ ನಗರದಲ್ಲಿರುವ ತನ್ನ 39 ವರ್ಷದ ಬಾಯ್ ಫ್ರೆಂಡ್‍ನ ಮನೆಗೆ ಶನಿವಾರ ಭೇಟಿ ಕೊಟ್ಟಿದ್ದಳು. ಈ ವೇಳೆ ಪ್ರಿಯತಮನ ಮನೆಯಲ್ಲಿ ಆಚೀಚೆ ಓಡಾಡುತ್ತಿದ್ದ ಬೆಕ್ಕನ್ನು ಹಿಡಿಯಲು ಹೋದಾಗ ಅದು ರೊಚ್ಚಿಗೆದ್ದು ಆಕೆಗೆ ಕಚ್ಚಿಬಿಟ್ಟಿದೆ.
ಈ ವೇಳೆ ಆಕೆಗೂ ಆ ಬೆಕ್ಕಿನ ಮಾಲಿಕನಾದ ಬಾಯ್ ಫ್ರೆಂಡ್ ನಡುವೆಯೂ ತೀವ್ರ ವಾಗ್ವಾದ ನಡೆದಿದೆ. ಒಂದು ಹಂತದಲ್ಲಿ ಆಕ್ರೋಶಗೊಂಡ ಆಕೆ ಬೆಕ್ಕು ಕಚ್ಚಿದ್ದಕ್ಕೆ ಪ್ರತೀಕಾರವಾಗಿ ತನ್ನ ಬಾಯಾ ಫ್ರೆಂಡ್‍ನ ಮೈ, ಕೈ ಅನ್ನು ಅನೇಕ ಬಾರಿ ಕಚ್ಚಿದ್ದಾಳೆ. ಕೈಗೆ ಸಿಕ್ಕಿದ ವಸ್ತುಗಳಿಂದ ಮೇಲೆ ಹಲ್ಲೆ ನಡೆಸಿದ್ದಾಳೆ. ಈ ವೇಳೆ ಆತ ರಕ್ಷಣೆಗೆ ಪೊಲೀಸರಿಗೆ ಕರೆ ಮಾಡಲು ಪ್ರಯತ್ನಿಸಿದರೆ ಮೊಬೈಲ್ ಕಿತ್ತುಕೊಂಡಿದ್ದಾಳೆ. ಕೊನೆಗೆ ಆತ ಅದು ಹೇಗೋ ಪೊಲೀಸರಿಗೆ ಕರೆ ಮಾಡಿ ಜೀವ ಉಳಿಸಿಕೊಂಡಿದ್ದಾನೆ. ಸದ್ಯ ಆತನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.