

ಬಿರ್ಬೂಮ್(ಪಶ್ಚಿಮ ಬಂಗಾಳ): ಆಡಳಿತರೂಢ ತೃಣಮೂಲ ಕಾಂಗ್ರೆಸ್ ವಿರುದ್ದ ಏರ್ಪಡಿಸಲಾಗಿದ್ದ ರ್ಯಾಲಿಯಲ್ಲಿ ಮಾತನಾಡಿದ ಪಶ್ಚಿಮ ಬಂಗಾಳದ ಶಾಸಕನೊಬ್ಬ ಬಹಿರಂಗ ಸಭೆಯಲ್ಲೇ ಪೊಲೀಸರನ್ನು ನಾಯಿಗೆ ಹೋಲಿಸಿದ್ದು, ಶಾಸಕನ ಈ ಹೇಳಿಕೆ ಈಗ ವಿವಾದಕ್ಕೀಡಾಗಿದೆ.
ಮೊರ್ಶಿದಾಬಾದ್ ಜಿಲ್ಲೆಯ ಕಾಂಗ್ರೆಸ್ ಶಾಸಕ ಅಶೀಶ್ ಮರ್ಜಿತ್ ಎಂಬವರು ಪಶ್ಚಿಮ ಬಂಗಾಳದ ಪೊಲೀಸರು ಟಿಎಂಸಿ ಪಕ್ಷದ ತಾಳಕ್ಕೆ ಕುಣಿಯುತ್ತಿದ್ದು, ತೃಣ ಮೂಲ ಕಾಂಗ್ರೆಸ್ ಕಾರ್ಯಕರ್ತರು ಕಾಂಗ್ರೆಸ್ ಕಾರ್ಯಕರ್ತರ ಮೇಲೆ ದೌರ್ಜನ್ಯ ನಡೆಸುತ್ತಿದ್ದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲವೆಂದು ಆರೋಪಿಸಿದ್ದಾರೆ.
ಕಾಂಗ್ರೆಸ್ ಕಾರ್ಯಕರ್ತರು ತಮ್ಮ ವಿರುದ್ದ ನಡೆದ ದೂರುಗಳನ್ನು ದಾಖಲಿಸಲು ಮುಂದಾದರೂ ಪೊಲೀಸರು ಅದನ್ನು ನಿರಾಕರಿಸುತ್ತಿದ್ದಾರೆ. ಆದರೆ ಟಿಎಂಸಿ ಕಾರ್ಯಕರ್ತರು ನೀಡಿದ ದೂರನ್ನು ಕೂಡಲೇ ದಾಖಲಿಸಿ ಕಾಂಗ್ರೆಸ್ ಕಾರ್ಯಕರ್ತರಿಗೆ ಕಿರುಕುಳ ನೀಡುತ್ತಿದ್ದಾರೆಂದು ದೂರಿದ್ದಾರೆ. ಶಾಸಕರ ಈ ಹೇಳಿಕೆಗೆ ಆಡಳಿತರೂಢ ಟಿಎಂಸಿ ತೀವ್ರ ವಿರೋಧ ವ್ಯಕ್ತಪಡಿಸಿದೆ.