

ನವದೆಹಲಿ: ಕುಟುಂಬ ಪದ್ಧತಿ ಮುಂದುವರೆಸಲು ಹಾಗೂ ತಮ್ಮ ಆಸ್ತಿಯಲ್ಲಿ ಪಾಲು ನೀಡಲು ಸಲಿಂಗ ಕಾಮಿ ಪುತ್ರನಿಗೆ ಮಹಿಳೆಯೊಬ್ಬಳನ್ನು ವಿವಾಹವಾಗುವಂತೆ ತಮ್ಮ ತಂದೆ ಹಾಗೂ ಬಿಸಿಸಿಐ ಮಾಜಿ ಅಧ್ಯಕ್ಷ ಎನ್ ಶ್ರೀನಿವಾಸನ್ ಒತ್ತಾಯ ಮಾಡುತ್ತಿದ್ದರು ಎಂದು ಶ್ರೀನಿವಾಸನ್ ಪುತ್ರ ಅಶ್ವಿನ್ ಆರೋಪಿಸಿದ್ದಾರೆ.
ಆಂಗ್ಲ ಪತ್ರಿಕೆಗೆ ನೀಡಿದ ಸಂದರ್ಶನವೊಂದರಲ್ಲಿ ತಮ್ಮ ತಂದೆಯ ವಿರುದ್ಧ ಆರೋಪ ಮಾಡಿರುವ ಅಶ್ವಿನ್ ಶ್ರೀನಿವಾಸನ್, ತನ್ನ ಸಲಿಂಗ ಪ್ರೇಮಿ ಸ್ನೇಹಿತನ ಜೊತೆ ಜೀವನ ಮಾಡಲು ಆಸ್ತಿಯಲ್ಲಿ ತನ್ನ ಪಾಲಿನ ಭಾಗವನ್ನು ಕೇಳಿದೆ. ಆದರೆ ತಮ್ಮ ತಂದೆ ಆಸ್ತಿಯಲ್ಲಿ ಭಾಗ ನೀಡಲು ಮಹಿಳೆಯನ್ನು ವಿವಾಹವಾಗುವಂತೆ ತನ್ನ ಮೇಲೆ ಒತ್ತಡ ಹಾಕುತ್ತಿದ್ದಾರೆ ಎಂದು ದೂರಿದ್ದಾರೆ.
ತನ್ನ ಸಲಿಂಗಿ ಸ್ನೇಹಿತ ಅವಿ ಜೊತೆಗಿನ ಸಂಬಂಧವನ್ನು ಮುರಿದುಕೊಳ್ಳುವಂತೆ ತನಗೆ ಮಾನಸಿಕವಾಗಿ ಒತ್ತಡ ಹೇರುತ್ತಿದ್ದಾರೆ ಎಂದು ಆಪಾದಿಸಿದ್ದಾರೆ.
ಅಶ್ವಿನ್ ಈಗಾಗಲೇ ಸ್ನೇಹಿತ ಅವಿ ಮುಖರ್ಜಿ ಜೊತೆ ಚೆನ್ನೈನಲ್ಲಿರುವ ತನ್ನ ತಂದೆ ಮನೆ ಪಕ್ಕದಲ್ಲಿಯೇ ವಾಸಿಸುತ್ತಿದ್ದು, ಅವಿ ಜೊತೆಗಿನ ಸಂಬಂಧ ಕಡಿದುಕೊಳ್ಳುವಂತೆ ತನ್ನ ತಂದೆ ಬರೆದ ಪತ್ರವನ್ನು ಅಶ್ವಿನ್ ಬಹಿರಂಗ ಪಡಿಸಿದ್ದಾರೆ.
ನೀನು ನನಗೆ ಇರುವ ಒಬ್ಬನೆ ಮಗ. ನೀನು ಸಮಾಜದ ಮುಖ್ಯವಾಹಿನಿಯಿಂದ ದೂರ ಸರಿದು ಹಲವು ವರ್ಷಗಳೇ ಕಳೆದಿವೆ. ನನ್ನ ವಂಶದ ಸಂತನಾಭಿವೃದ್ಧಿಗಾಗಿ ನೀನು ಹುಡುಗಿಯೊಬ್ಬಳನ್ನು ಮದುವೆಯಾಗಿ ತಮ್ಮ ವಂಶವನ್ನು ಮುಂದುವರಿಸಲೇಬೇಕೆಂದು ಶ್ರೀನಿವಾಸನ್ ತಮ್ಮ ಮಗನಿಗೆ ಪತ್ರ ಬರೆದಿದ್ದಾರೆಂದು ಪತ್ರಿಕೆ ವರದಿ ಮಾಡಿದೆ.
ಇದು ಅಪ್ಪ ಮಗನಿಗೆ ಸಂಬಂಧಿಸಿದ ವಯಕ್ತಿಕ ವಿಚಾರ. ಈ ಬಗ್ಗೆ ಮಾಧ್ಯಮಗಳಿಗೆ ಉತ್ತರ ನೀಡುವುದು ಅನಗತ್ಯ ಎಂದು ಬಿಸಿಸಿಐ ಮಾಜಿ ಅಧ್ಯಕ್ಷ ಎನ್ ಶ್ರೀನಿವಾಸನ್ ಆಂಗ್ಲ ಪತ್ರಿಕೆಗೆ ಪ್ರತಿಕ್ರಿಯಿಸಿದ್ದಾರೆ.