ನವದೆಹಲಿ: ಚುನಾವಣೆ ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕಾಗಿ ಬಿಜೆಪಿ ಅಧ್ಯಕ್ಷ ಅಮಿತ್ ಶಾ, ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಮತ್ತು ರಾಷ್ಟ್ರೀಯ ಜನತಾ ದಳದ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರಿಗೆ ಚುನಾವಣಾ ಆಯೋಗ ನೋಟೀಸ್ ಜಾರಿ ಮಾಡಿದೆ.
ಬಿಹಾರ ವಿಧಾನಸಭಾ ಚುನಾವಣೆ ಪ್ರಚಾರದ ವೇಳೆ ಈ ಮೂವರು ಮುಖಂಡರು ಚುನಾವಣೆ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂದು ಚುನಾವಣಾ ಆಯೋಗ ಹೇಳಿದೆ.
ನಿತೀಶ್ ಮತ್ತು ಲಾಲು ಯಾದವ್ ಚುನಾವಣೆಯಲ್ಲಿ ಗೆಲುವು ಕಂಡರೆ, ಅದರ ಸಂಭ್ರಮಾಚಾರಣೆ ಪಾಕಿಸ್ತಾನದಲ್ಲಿ ನಡೆಯುತ್ತದೆ ಎಂದು ಅಮಿತ್ ಶಾ ಹೇಳಿದ್ದರು. ಅವರ ಈ ಹೇಳಿಕೆ ಗಲಭೆಗೆ ಕಾರಣವಾಗುತ್ತಿತ್ತು. ಈ ಹಿನ್ನಲೆಯಲ್ಲಿ ಅವರಿಗೆ ನೋಟೀಸ್ ನೀಡಲಾಗಿದೆ.
ಹಿಂದೂ ಮತ್ತು ಮುಸ್ಲಿಮರು ಪರಸ್ಪರ ಬಡಿದಾಡಿಕೊಳ್ಳುವಂತೆ ಭಾರತೀಯ ಜನತಾ ಪಕ್ಷ(ಬಿಜೆಪಿ) ಮಾಡುತ್ತದೆ ಎಂದು ರಾಹುಲ್ ಗಾಂಧಿ ಹೇಳಿಕೆ ನೀಡಿದ್ದರು. ಇದು ಕೋಮು ಗಲಭೆ ಸೃಷ್ಟಿ ಮಾಡುವ ಹೇಳಿಕೆಯಾಗಿತ್ತು. ಈ ಹಿನ್ನಲೆಯಲ್ಲಿ ರಾಹುಲ್ ಗೆ ನೋಟೀಸ್ ನೀಡಲಾಗಿದೆ.
ಇನ್ನು ಲಾಲು ಪ್ರಸಾದ್ ಯಾದವ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ರಕ್ತ ಪಿಶಾಚಿ ಹಾಗೂ ಅಮಿತ್ ಶಾ ನರ ಭಕ್ಷಕ ಎಂದಿದ್ದರು.
ಈ ಮೂವರು ಮುಖಂಡರು ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದು, ಚುನಾವಣೆ ನೀತಿ ಸಂಹಿತೆ ಉಲ್ಲಂಘನೆಯಾಗಿದೆ. ಈ ಹಿನ್ನಲೆಯಲ್ಲಿ ನೋಟೀಸ್ ಜಾರಿ ಮಾಡಲಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.