

ಪಾಟ್ನಾ: ``ದಾರಿ ತಪ್ಪಿಸುವ ಎಲ್ಲ ಪ್ರಚಾರಗಳ ಹೊರತಾಗಿಯೂ, 25 ವರ್ಷಗಳ ಜಾತಿ ರಾಜಕಾರಣದ ಬಳಿಕ ಬಿಹಾರದ ಜನತೆ ಅಭಿವೃದ್ಧಿಗೆ ಮತ ಚಲಾಯಿಸಲಿದ್ದಾರೆ.'' ಸೋನಿಯಾ, ಲಾಲು ಪ್ರಸಾದ್, ನಿತೀಶ್ ಯಾದವ್ ಅವರ ಜಂಟಿ ವಾಗ್ದಾಳಿಯ ಬಳಿಕ ಬಿಹಾರದಲ್ಲಿ 4ನೇ ರ್ಯಾಲಿ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಅವರ ಮಾತಿದು.
ಮಂಗಳವಾರ ಭಾಗಲ್ಪುರದಲ್ಲಿ ಬೃಹತ್ ಚುನಾವಣಾ ಪ್ರಚಾರ ರ್ಯಾಲಿ ನಡೆಸಿದ ಪ್ರಧಾನಿ ಮೋದಿ, ಮಹಾಮೈತ್ರಿಯ ಪಾಲುದಾರರನ್ನು ತರಾಟೆಗೆ ತೆಗೆದು ಕೊಂಡರು. ರಾಜ್ಯದ ಹಿಂದುಳಿಯುವಿಕೆ ಮತ್ತು ಅಭಿವೃದ್ಧಿಯ ಕೊರತೆಗೆ ಕಾಂಗ್ರೆಸ್ ಜೆಡಿಯುಆರ್‍ಜೆಡಿಯೇ ಕಾರಣ. ನನ್ನಲ್ಲಿ ಉತ್ತರ ಕೇಳುವ ಬದಲು ಸಿಎಂ ನಿತೀಶ್ ಅವರೇ ತಮ್ಮ ಸರ್ಕಾರದ ಸಾಧನೆಯ ವಿವರ ನೀಡಲಿ. ನನ್ನ ಅಕೌಂಟ್ ಅನ್ನು ಅವಧಿ ಪೂರ್ಣವಾದಾಗ ಅಂದರೆ 2019ರಲ್ಲಿ ನೀಡುತ್ತೇನೆ ಎನ್ನುವ ಮೂಲಕ ನಿತೀಶ್‍ಗೆ ಟಾಂಗ್ ನೀಡಿದರು. ಇದೇ ವೇಳೆ, `ಬಿಹಾರದ ಡಿಎನ್‍ಎ' ತಿರುಗುಬಾಣವಾಗುತ್ತಿರುವುದನ್ನು ಅರಿತ ಮೋದಿ ಮಂಗಳವಾರ ತಮ್ಮ ಹೇಳಿಕೆ ಬದಲಿಸಿದ್ದು, ``ಬಿಹಾರದವರು ಅತಿ ಬುದ್ಧಿವಂತರು. ಅವರ ಡಿಎನ್‍ಎ ಶ್ರೇಷ್ಠವಾದದ್ದು'' ಎಂದರು.
ತಮ್ಮನ್ನು ತಾವು ಸಾಮಾಜಿಕ ನಾಯಕರೆಂದು ಕರೆದುಕೊಳ್ಳುತ್ತಿರುವ ಲಾಲು ಮತ್ತು ನಿತೀಶ್ ಅವರು ರಾಮ್ ಮನೋಹರ್ ಲೋಹಿಯಾ, ಜಯಪ್ರಕಾಶ್ ನಾರಾಯಣ್‍ರನ್ನು ಮರೆತು ಕಾಂಗ್ರೆಸ್ ಜತೆ ಕೈಜೋಡಿಸಿದ್ದಾರೆ ಎಂದು ಮೋದಿ ಹೇಳಿದರು.
ಮೋದಿಯವರೇ, ಬಿಹಾರಕ್ಕೆ ಹೊಸ ಆಶ್ವಾಸನೆ ಕೊಡಬೇಡಿ ಪ್ಲೀಸ್. ನೈತಿಕ ಧೈರ್ಯ ತೋರಿಸಿ ನೀವು ಈವರೆಗೆ ಕೊಟ್ಟಿರುವ ಆಶ್ವಾಸನೆಗಳನ್ನು ಈಡೇರಿಸಲು ಪ್ರಯತ್ನಿಸಿ. ಡಿಎನ್‍ಎ ಬಗ್ಗೆ ನೀಡಿದ ಹೇಳಿಕೆಯನ್ನು ವಾಪಸ್ ಪಡೆಯಿರಿ.
-ನಿತೀಶ್ ಕುಮಾರ್, ಬಿಹಾರ ಸಿಎಂ