

ಬಬುವಾ/ಪಟನಾ/ನವಾಡಾ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಪ್ರಚಾರ ನಡೆಸುತ್ತಿದ್ದ ವೇಳೆ ಚಪ್ಪಲಿ ತೋರಿಸಲಾಗಿದೆ. ಜತೆಗೆ ನರೇಂದ್ರ ಮೋದಿಗೆ ಜೈ ಎಂಬ ಘೋಷಣೆ ಹಾಕಲಾಗಿದೆ. ಜೆಡಿಯು ಅಭ್ಯರ್ಥಿ ಪರ ನವಾಡಾ ಜಿಲ್ಲೆಯ ವರ್ಸಾಲಿಗಂಜ್ ಎಂಬಲ್ಲಿ ಪ್ರಚಾರ ಭಾಷಣ ಮಾಡುತ್ತಿದ್ದ ವೇಳೆ ಈ ಘಟನೆ ನಡೆದಿದೆ.
ಗುಂಪೊಂದು ``ಮೋದಿ ಮೋದಿ'' ಎಂದು ಘೋಷಣೆ ಹಾಕಿತು. ಜತೆಗೆ ನಿತೀಶ್ ವಿರುದ್ಧ ಘೋಷಣೆ ಕೂಗಿತು. ಇದರಿಂದ ಜೆಡಿಯು ನಾಯಕ ಮುಜುಗರಕ್ಕೆ ಒಳಗಾದರೂ ಭಾಷಣ ಮುಂದುವರಿಸಿದರು. ತಮ್ಮ ನೇತೃತ್ವದ ಸರ್ಕಾರದ ಸಾಧನೆ ವಿವರಿಸಿದರು. ಇದಕ್ಕೂ ಮುನ್ನ ಬಾರ್ಬಿಘಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಪ್ರಸ್ತಾಪಿಸಿದ್ದ ``ಬಿಹಾರ ಡಿಎನ್‍ಎ''ವಿಚಾರವನ್ನು ಉಲ್ಲೇಖಿಸಿದ್ದರು.
ಇಬ್ಬರ ವಿರುದ್ಧ ಕೇಸು: ಇದೇ ವೇಳೆ ಇಬ್ಬರು ನಾಯಕರ ಮೇಲೆ ಕೇಸು ದಾಖಲಾಗಿದೆ. ಕೈಮುರ್ ಜಿಲ್ಲೆಯಲ್ಲಿ ಮಾಜಿ ಡಿಸಿಎಂ ಸುಶೀಲ್‍ಕುಮಾರ್ ಮೋದಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಮಾಡುವ ವೇಳೆ ಲ್ಯಾಪ್‍ಟಾಪ್, ಟಿವಿ, ಧೋತಿ, ಸೀರೆ ನೀಡುವ ಭರವಸೆ ನೀಡಿದ್ದರು ಎಂದು ಆರೋಪಿಸಲಾಗಿದೆ. ಮಾದರಿ ನೀತಿ ಸಂಹಿತೆ ಉಲ್ಲಂಘನೆ ಆರೋಪದ ಹಿನ್ನೆಲೆಯಲ್ಲಿ ಕೇಸು ದಾಖಲಿಸಲಾಗಿದೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ಮೋದಿ ಎಲ್ಲ ಪಕ್ಷಗಳು ಇದೇ ರೀತಿಯ ಭರವಸೆ ನೀಡುತ್ತವೆ. ಅದರಲ್ಲಿ ತಪ್ಪೇನಿಲ್ಲ ಎಂದಿದ್ದಾರೆ.
ರಾಘವಪುರ ಕ್ಷೇತ್ರದಿಂದ ಕಣಕ್ಕೆ ಇಳಿದಿರುವ ಪುತ್ರ ತೇಜಸ್ವಿ ಯಾದವ್ ಪರ ಪ್ರಚಾರ ಮಾಡುವ ವೇಳೆ ಲಾಲು ಯಾದವ್ ``ಬಿಹಾರ ಚುನಾವಣೆ ಹಿಂದುಳಿದ ವರ್ಗ ಮೇಲ್ವರ್ಗದ ನಡುವಿನ ಹೋರಾಟ'' ಎಂದು ಬಣ್ಣಿಸಿದ್ದರು. ಅವರ ಈ ಹೇಳಿಕೆ ಜಾತಿವಾದಕ್ಕೆ ಪ್ರಚೋದನೆ ನೀಡುತ್ತದೆ ಎಂದು ಚುನಾವಣಾ ಆಯೋಗ ಕಂಡುಕೊಂಡಿದ್ದು, ಕೇಸು ದಾಖಲಿಸಿದೆ.
ಮತ್ತೊಂದೆಡೆ ಪ್ರಧಾನಿ ಮೋದಿ ಹಾಗೂ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ವಿರುದ್ಧ ಆರ್ ಜೆಡಿ ಮುಖ್ಯಸ್ಥ ಲಾಲು ಮತ್ತೊಮ್ಮೆ ಕಿಡಿಕಾರಿದ್ದಾರೆ. ಮೀಸಲಾತಿಗೆ ಅಂತ್ಯಹಾಡುವುದಕ್ಕಾಗಿ ಮೋದಿ ಅವರು ಭಾಗವತ್‍ರಿಗೆ ಭಾರತ ರತ್ನ ನೀಡಲಿ. ಹಿಂದುಳಿದವರು, ದಲಿತರು ಮತ್ತು ಬಡವರ ವಿರುದ್ಧ ಹೋರಾಟ ನಡೆಸುತ್ತಿರುವುದಕ್ಕಾಗಿ ನನ್ನನ್ನು ಗಲ್ಲಿಗೇರಿಸಲಿ. ಆದರೆ ನಾನು ಮಾತ್ರ ಸುಮ್ಮನೆ ಕೂರುವುದಿಲ್ಲ ಎಂದು ಲಾಲು ಟ್ವೀಟ್ ಮಾಡಿದ್ದಾರೆ.