

ರಾಯ್ಪುರ: ನಿಮಗೆ ನಂಬಲಸಾಧ್ಯವಾಗಬಹುದು! ಆದರೂ ಇದು ನಿಜ. ಅತಿಕ್ರಮ ಪ್ರವೇಶ ದೂರಿನ ವಿಚಾರಣೆಗೆ ಸಂಬಂಧಿಸಿ ಛತ್ತೀಸ್ ಗಢದಲ್ಲಿ ಮೇಕೆಯೊಂದನ್ನು ಪೊಲೀಸರು ವಿಚಾರಣೆಗೆ ಕರೆಸಿದ್ದ ಘಟನೆ ನಡೆದಿದೆ. ಇಲ್ಲಿ ಮೇಕೆ ಮತ್ತೆ ಮತ್ತೆ ತಪ್ಪು ಮಾಡಿದ ಆರೋಪಿಯಾಗಿದ್ದು, ವಿಚಾರಣೆ ನಂತರ ಜಾಮೀನು ಮೇಲೆ ಅದನ್ನು ಬಿಡುಗಡೆ ಮಾಡಲಾಯಿತು. ಆದರೆ ಅದರ ಮಾಲಿಕನಿಗೆ ಮಾತ್ರ ಜಾಮೀನಿನ ಅದೃಷ್ಟ ಸಿಗಲಿಲ್ಲ.
ಆಗಿದ್ದೇನು?: ಛತ್ತೀಸ್ ಗಢದ ರಾಯ್ಪುರ ಜಿಲ್ಲೆಯ ಅಬ್ದುಲ್ ಹಾಸನ್ ಎಂಬ ವ್ಯಕ್ತಿಯ ಮೇಕೆ ಅಲ್ಲಿನ ನ್ಯಾಯಾಧೀಶರ ಮನೆಯ ಹೂದೋಟಕ್ಕೆ ನುಗ್ಗಿತ್ತು. ಇದಕ್ಕಾಗಿ ಮೇಕೆಯ ಮಾಲಿಕ ಅಬ್ದುಲ್ ನನ್ನು ಬಂಧಿಸಲಾಗಿತ್ತು. ಘಟನೆಗೆ ರಾಜ್ಯ ಪೊಲೀಸರ ಭದ್ರತಾ ವೈಫಲ್ಯವೇ ಕಾರಣ ಎಂದು ಪ್ರತಿಪಕ್ಷ ಕಾಂಗ್ರೆಸ್ ಆರೋಪಿಸಿತ್ತು.
ಮ್ಯಾಜಿಸ್ಟ್ರೇಟ್ ಹೆಚ್. ರಾತ್ರೆ ಅವರು ನೀಡಿದ ದೂರಿನ ಮೇರೆಗೆ ಹಾಸನ್ ಅವರ ವಿರುದ್ಧ ಐಪಿಸಿ ಸೆಕ್ಷನ್ 447 ಮತ್ತು 427 ಅಡಿಯಲ್ಲಿ ನಿನ್ನೆ ದೂರು ದಾಖಲಿಸಲಾಗಿತ್ತು ಎಂದು ಜಾನಕ್ ಪುರ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿ ಆರ್ ಎಸ್. ಪೈಕ್ರಾ ತಿಳಿಸಿದ್ದಾರೆ.
ನ್ಯಾಯಾಧೀಶ ರಾತ್ರೆ ಅವರ ಬಂಗಲೆಯ ಒಳಗಿರುವ ಉದ್ಯಾನವನಕ್ಕೆ ಮೇಕೆ ಹಲವು ಬಾರಿ ಲಗ್ಗೆಯಿಟ್ಟು ಗಿಡ-ಹೂವುಗಳನ್ನು ಹಾನಿ ಮಾಡಿತ್ತು. ''ನನ್ನ ಮೇಕೆ ಬಂಗಲೆಯ ಕಂಪೌಂಡ್ ಹಾರಿ ಹೂದೋಟಕ್ಕೆ ಹೋಗಿ ಹಣ್ಣು ಮತ್ತು ತರಕಾರಿಗಳನ್ನು ತಿನ್ನುತ್ತಿತ್ತು. ಅದನ್ನು ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು, ಬಳಿಕ ನನ್ನನ್ನು ಕೂಡ ಪೊಲೀಸರು ಬರಲು ಹೇಳಿದರು'' ಎನ್ನುತ್ತಾರೆ ಅಬ್ದುಲ್ ಹಾಸನ್.
ಅಬ್ದುಲ್ ಹಾಸನ್ ಅವರಿಗೆ ಮೇಕೆ ಬಗ್ಗೆ ಹಲವು ಬಾರಿ ಎಚ್ಚರಿಕೆ ಕೊಟ್ಟರೂ, ಪೊಲೀಸರಿಗೆ ದೂರು ನೀಡಿದರೂ ಏನೂ ಪ್ರಯೋಜನವಾಗಲಿಲ್ಲ. ಕೊನೆಗೆ ನ್ಯಾಯಾಧೀಶರು ಹಿರಿಯ ಪೊಲೀಸರ ಬಳಿ ತಮ್ಮ ದೂರನ್ನು ನೀಡಿದಾಗ ಅವರು ಮೇಕೆ ಮತ್ತು ಅದರ ಮಾಲಿಕನನ್ನು ಕರೆದು ವಿಚಾರಣೆ ನಡೆಸಿದರು.ನಂತರ ಮೇಕೆಯನ್ನು ಬಿಡುಗಡೆ ಮಾಡಲಾಯಿತು.
ಹಸನ್ ನನ್ನು ಕೋರ್ಟ್ ನಲ್ಲಿ ತಹಸೀಲ್ದಾರ್ ಮುಂದೆ ಹಾಜರುಪಡಿಸಿದ್ದು ಅವರು ಎರಡು ದಿನಗಳ ಕಾಲ ಬಂಧನಕ್ಕೊಳಪಡಿಸಿದ್ದಾರೆ. ಜಾಮೀನು ನಿರಾಕರಿಸಲಾಗಿದೆ. ''ಮೇಕೆಯ ಬಂಧನ ಹಾಸ್ಯಾಸ್ಪದವಾಗಿದೆ. ಛತ್ತೀಸ್ ಗಢ ಪೊಲೀಸರು ಮೇಕೆಯನ್ನು ಬಂಧಿಸಿ ತಮಾಷೆ ನೋಡಿದರು ಎಂದು ಆಪಾದಿಸುತ್ತಾರೆ ಕಾಂಗ್ರೆಸ್ ನಾಯಕ ಶೈಲೇಶ್ ನಿತಿನ್ ತ್ರಿವೇದಿ. ಇದೇ ರೀತಿ ಅತ್ಯಾಚಾರ ಆರೋಪಿಗಳು ಕೂಡ ಸ್ವತಂತ್ರವಾಗಿ ತಿರುಗುತ್ತಾರೆ ಎಂದು ಅವರು ಆಪಾದಿಸಿದರು.
ಪ್ರಾಣಿ ಪಕ್ಷಿಗಳ ಮೇಲೆ ಆರೋಪ ಹೊರಿಸುವುದು, ವಿಚಾರಣೆಗೆ ಕರೆಯುವುದು ಇದೇನು ಹೊಸದಲ್ಲ.ಮಹಾರಾಷ್ಟ್ರದ ಚಂದ್ರಾಪುರ್ ನಲ್ಲಿ ಕಳೆದ ವರ್ಷ ಗಿಳಿಯೊಂದು ತನ್ನನ್ನು ಅಶ್ಲೀಲವಾಗಿ ಬೈಯುತ್ತಿದ್ದ ಎಂದು ವೃದ್ಧೆಯೊಬ್ಬರು ಪೊಲೀಸರಿಗೆ ದೂರು ನೀಡಿದ್ದರು.
ಸುರೇಶ್ ಸರ್ಕಾರ್ ಎಂಬುವವರು ಸುಮಾರು ಎರಡು ವರ್ಷಗಳವರೆಗೆ ತನ್ನ ಮಲತಾಯಿಗೆ ಬೈಯುವಂತೆ ತರಬೇತಿ ನೀಡಿದ್ದರು. ಇನ್ನು ಪಂಜಾಬ್ ನ ಮನವಾಲ್ ಎಂಬ ಗ್ರಾಮದಲ್ಲಿ ಪಾರಿವಾಳವೊಂದು ಪಾಕಿಸ್ತಾನ ಗೂಢಚಾರಿಯಾಗಿದೆ ಎಂದು ಶಂಕಿಸಿ ಅದನ್ನು ಪೊಲೀಸರು ಹಿಡಿದು ಕಟ್ಟಿಹಾಕಿದ್ದರು. ಅದರ ಕಾಲಿನಲ್ಲಿ ಉರ್ದು ಭಾಷೆಯಲ್ಲಿ ಬರೆದ ಲಿಪಿಯೊಂದಿತ್ತು.