

ನವದೆಹಲಿ: ದೇಶಕ್ಕೆ ಹಾನಿಯುಂಟು ಮಾಡುವವರಿಗೆ ಪ್ರತ್ಯುತ್ತರ ನೀಡಲೇಬೇಕು ಎಂದು ರಕ್ಷಣಾ ಸಚಿವ ಪರಿಕ್ಕರ್ ಅವರು ಸೋಮವಾರ ಹೇಳಿದ್ದಾರೆ.
ರಾಜಧಾನಿ ದೆಹಲಿಯಲ್ಲಿ ನಡೆಯುತ್ತಿರುವ 66ನೇ ಯೋಧರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿರುವ ಅವರು, ಪಠಾಣ್ ಕೋಟ್ ದಾಳಿಯಲ್ಲಿ ಮಡಿದ ಯೋಧರನ್ನು ನೋಡಿ ಬಹಳ ನೋವಾಯಿತು. ತ್ಯಾಗ ಅಮರವಾದದ್ದು, ನಮಗೆ ನೋವುಂಟು ಮಾಡುವವರಿಗೆ ಆ ನೋವಿನ ಅರಿವಾಗುವಂತೆ ಮಾಡಬೇಕು ಎಂದು ಹೇಳಿದ್ದಾರೆ.
ದೇಶಕ್ಕೆ ಹಾನಿಯುಂಟು ಮಾಡುವ ವ್ಯಕ್ತಿಯಾಗಲೀ ಅಥವಾ ಸಂಘಟನೆಗಳಾಗಿ ಅವರಿಗೂ ಆ ನೋವಿನ ಅರಿವಾಗುವಂತೆ ಮಾಡಬೇಕು. ನೋವುಂಟು ಮಾಡುವ ದುಷ್ಟರು ಇತರರಿಗೂ ನೋವುಂಟು ಮಾಡುವುದಕ್ಕೂ ಮುನ್ನವೇ ನಾವು ಅವರಿಗೆ ಪಾಠ ಕಲಿಸಬೇಕು. ಈ ಹೇಳಿಕೆ ಕೇವಲ ನನ್ನ ಹೇಳಿಕೆಯೇ ವಿನಃ ದೇಶದ್ದಲ್ಲ. ನಮಗೆ ಯಾರೇ ನೋವು ಮಾಡಿದರೂ ಅವರಿಗೂ ಅದೇ ರೀತಿಯಾಗಿ ಪ್ರತ್ಯುತ್ತರ ನೀಡುವುದು ಪ್ರತಿಯೊಬ್ಬರಲ್ಲಿರುವ ಸಾಮಾನ್ಯ ಗುಣವಾಗಿರುತ್ತದೆ.
ದಾಳಿಯಲ್ಲಿ ಹುತಾತ್ಮರಾದ ಯೋಧರನ್ನು ಕಂಡು ಬಹಳ ನೋವಾಯಿತು. ನಮ್ಮ ಯೋಧರು ಮಡಿದರೆ ಸಾಕಷ್ಟು ನೋವಾಗುತ್ತದೆ. ಆದರೆ ಇದನ್ನು ನಾನು ಪ್ರಶಂಸಿಸುವುದಿಲ್ಲ. ನಿಮ್ಮ ಮೇಲೆ ಅಥವಾ ದೇಶದ ಮೇಲೆ ದಾಳಿ ಮಾಡುವ ಶತ್ರುಗಳಿಗೆ ಅದೇ ರೀತಿ ಪ್ರತ್ಯುತ್ತರ ನೀಡವಂತೆ ನಮ್ಮ ಯೋಧರಿಗೆ ನಾನು ಹೇಳುತ್ತಿರುತ್ತೇನೆ. ತ್ಯಾಗ ಎಂದಿಗೂ ಗೌರವಯುತವಾದದ್ದು, ಆದರೆ, ನೋವುಂಟು ಮಾಡುವ ಶತ್ರುಗಳಿಗೆ ಅದೇ ರೀತಿಯಾಗಿ ಪ್ರತ್ಯುತ್ತರ ನೀಡಬೇಕು ಎಂದು ಹೇಳಿದ್ದಾರೆ.
ಇದೇ ವೇಳೆ ಪಠಾಣ್ ಕೋಟ್ ದಾಳಿ ಕುರಿತಂತೆ ಪಾಕಿಸ್ತಾನ ಯಾವುದಾದರೂ ಕ್ರಮ ಕೈಗೊಳ್ಳುತ್ತಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿರುವ ಅವರು, ದಾಳಿ ಬಗ್ಗೆ ಪಾಕಿಸ್ತಾನ ಕ್ರಮ ಕೈಗೊಳ್ಳುತ್ತದೆಯೋ ಇಲ್ಲವೋ ಎಂಬುದರ ಬಗ್ಗೆ ನಾನು ಹೇಳಿಕೆ ನೀಡಲು ಸಾಧ್ಯವಿಲ್ಲ. ಆದರೆ, ದಾಳಿ ಹಿಂದೆ ಜೈಶ್-ಇ-ಮೊಹಮ್ಮದ್ ಉಗ್ರ ಸಂಘಟನೆಯ ಕೈವಾಡವಿರುವ ಕುರಿತಂತೆ ಈಗಾಗಲೇ ಭಾರತ ಸಾಕಷ್ಟು ಸಾಕ್ಷ್ಯಾಧಾರಗಳನ್ನು ಹುಡುಕಿದೆ. ಇದಲ್ಲದೇ, ಸಾವನ್ನಪ್ಪಿದ ಉಗ್ರರು ಅಶ್ಫಾಕ್ ಅಹ್ಮದ್, ಹಫೀಸ್ ಅಬ್ದುಲ್ ಶಕುರ್ ಮತ್ತು ಕಾಸಿಮ್ ಜಾನ್ ಎಂದು ಮೂಲಗಳಿಂದ ತಿಳಿದುಬಂದಿದೆ. ಈಗಾಗಲೇ ಭಾರತ ಸರ್ಕಾರ ಕೂಡ ಜೈಶ್-ಮೊಹಮ್ಮದ್ ಉಗ್ರ ಸಂಘಟನೆ ವಿರುದ್ಧ ಶೀಘ್ರದಲ್ಲೇ ಕ್ರಮ ಕೈಗೊಳ್ಳುವಂತೆ ಪಾಕಿಸ್ತಾನಕ್ಕೆ ಆಗ್ರಹಿಸಿದೆ ಎಂದು ಹೇಳಿದ್ದಾರೆ.