

ಜಮ್ಶೆಡ್ಪುರ: ಅನಾರೋಗ್ಯಕ್ಕೀಡಾಗಿ ಆಸ್ಪತ್ರೆಗೆ ದಾಖಲಾಗಿದ್ದ ಅತ್ಯಾಚಾರ ಸಂತ್ರಸ್ತೆಯೊಬ್ಬಳ ಮೇಲೆ ಆಸ್ಪತ್ರೆಯ ಭದ್ರತಾ ಸಿಬ್ಬಂದಿಗಳು ಮತ್ತೆ ಅತ್ಯಾಚಾರ ಮಾಡಿರುವ ಅಮಾನವೀಯ ಘಟನೆಯೊಂದು ಜಮ್ಶೆಡ್ಪುರದ ಎಂಜಿಎಂ ಆಸ್ಪತ್ರೆಯಲ್ಲಿ ಸೋಮವಾರ ನಡೆದಿದೆ.
ಅತ್ಯಾಚಾರಕ್ಕೊಳಗಾದವಳು (15) ಅಪ್ರಾಪ್ತ ಬಾಲಕಿಯಾಗಿದ್ದು, ಈಕೆಯ ಮೇಲೆ ಈ ಹಿಂದೆ ಅತ್ಯಾಚಾರವಾಗಿದೆ. ಅನಾರೋಗ್ಯಕ್ಕೀಡಾದ ಕಾರಣ ಈಕೆಯನ್ನು ಕೆಲವು ದಿನಗಳ ಹಿಂದಷ್ಟೇ ಎಂಜಿಎಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ಬಾಲಕಿಯನ್ನು ಕರೆದೊಯ್ದಿರುವ ಸಿಬ್ಬಂದಿಗಳು ಆಕೆಯನ್ನು ನಿರ್ಜನ ಪ್ರದೇಶಕ್ಕೆ ಹೊತ್ತೊಯ್ದು ಅತ್ಯಾಚಾರ ಮಾಡಿದ್ದಾರೆಂದು ಪೊಲೀಸ ಬಳಿ ಬಾಲಕಿ ಹೇಳಿಕೊಂಡಿದ್ದಾಳೆ.
ಬಾಲಕಿಯ ಹೇಳಿಕೆ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಅತ್ಯಾಚಾರ ಮಾಡಿರುವವರು ಖಾಸಗಿ ಭದ್ರತಾ ಸಿಬ್ಬಂದಿಗಳಾಗಿದ್ದಾರೆಂದು ಹೇಳಿದ್ದಾರೆ.
ಘಟನೆ ಕುರಿತಂತೆ ಮಾಹಿತಿ ನೀಡಿರುವ ಹಿರಿಯ ಅಧಿಕಾರಿ ಅನೂಪ್ ಅವರು, ಪ್ರಕರಣ ಸಂಬಂಧ ಬಾಲಕಿ ನೀಡಿರುವ ಮಾಹಿತಿ ಆಧಾರದ ಮೇಲೆ ಈಗಾಗಲೇ ಎಫ್ಐಆರ್ ದಾಖಲಿಸಿಕೊಳ್ಳಲಾಗಿದ್ದು ಇಬ್ಬರು ವ್ಯಕ್ತಿಗಳನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ಪ್ರಮುಖ ಆರೋಪಿಗಳು ತಲೆಮರೆಸಿಕೊಂಡಿದ್ದು, ಹುಡುಕಾಟ ಆರಂಭಿಸಲಾಗಿದೆ ಎಂದು ಹೇಳಿದ್ದಾರೆ.
ಘಟನೆ ನಡೆಯುವದಕ್ಕೂ ಕೆಲವು ಗಂಟೆಗಳ ಹಿಂದಷ್ಟೇ ಅಲ್ಲಿನ ಮುಖ್ಯಮಂತ್ರಿ ರಘುಬಾರ್ ದಾಸ್ ಅವರು ಆಸ್ಪತ್ರೆಯ ಕಾರ್ಯನಿರ್ವಹಣೆ ಕುರಿತಂತೆ ಮಾಹಿತಿ ತಿಳಿಯಲು ಆಸ್ಪತ್ರೆಗೆ ಆಗಮಿಸಿದ್ದರು. ಅಲ್ಲದೆ, ಅಧಿಕಾರಿಗಳೊಂದಿಗೆ ಸಭೆ ನಡೆಸಿ ಆಸ್ಪತ್ರೆಯ ಪರಿಸ್ಥಿತಿಯನ್ನು ಸುಧಾರಿಸಲು ಕ್ರಮ ಕೈಗೊಳ್ಳುವುದಾಗಿ ಹೇಳಿದ್ದರು.