

ಹೈದರಾಬಾದ್: ತೆಲಂಗಾಣ ರಾಜ್ಯ ನಿರ್ಮಾಣವಾಗಿ ಎರಡು ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಹೈದರಾಬಾದ್ ನಲ್ಲಿ ದೇಶದ ಅತೀ ಎತ್ತರದ ತ್ರಿವರ್ಣ ಧ್ವಜ ಹಾರಿಸಲು ನಿರ್ಧರಿಸಿದ್ದಾರೆ.
ಭಾರತದ ವಿಮಾನ ನಿಲ್ದಾಣ ಪ್ರಾಧಿಕಾರದಿಂದ ಸರ್ಕಾರಕ್ಕೆ ಅನುಮತಿ ಸಿಕ್ಕರೇ ಹೈದರಾಬಾದ್ ನ ಹುಸೇನ್ ಸಾಗರ್ ನದಿ ಬಳಿ, 1.8 ಕೋಟಿ ರು. ವೆಚ್ಚದಲ್ಲಿ ನಿರ್ಮಾಣವಾಗಿರುವ 303 ಅಡಿ ಅಂದರೇ 92.35 ಮೀಟರ್ ಎತ್ತರದ ರಾಷ್ಟ್ರಧ್ವಜವನ್ನು ಹಾರಿಸಲಾಗುತ್ತದೆ.
ಛತ್ತೀಸ್ ಗಡದ ರಾಯಪುರದಲ್ಲಿ ಕಳೆದ ತಿಂಗಳು 82 ಮೀಟರ್ ರಾಷ್ಟ್ರಧ್ವಜ ಹಾರಿಸಲಾಗಿತ್ತು. ಇದೀಗ ತೆಲಂಗಾಣದಲ್ಲಿ 92 ಮಾಟರ್ ಉದ್ದದ ರಾಷ್ಟ್ರ ಧ್ವಜ ಹಾರಿಸಲಾಗುತ್ತದೆ.
ಒಂದು ವೇಳೆ ಅನುಮತಿ ಸಿಗಲಿಲ್ಲ ಎಂದರೇ ಧ್ವಜಸ್ಥಂಭದ ಎತ್ತರವನ್ನು 275 ಅಡಿಗೆ ಇಳಿಸಲು ನಿರ್ಧರಿಸಲಾಗಿದೆ. ಈ ಬಾವುಟ ಸುಮಾರು 92 ಕೆಜಿ ತೂಕವಿದ್ದು, ಮುಂಬಯಿಯಲ್ಲಿ ತಯಾರಿಸಲಾಗಿದೆ.
ಇನ್ನು 100 ಕೋಟಿ ರು. ಖರ್ಚು ಮಾಡಿ 2 ನೇ ವರ್ಷಾಚರಣೆ ಮಾಡುತ್ತಿರುವದಕ್ಕೆ ಹಲವು ರಾಜಕೀಯ ನಾಯಕರು ಚಂದ್ರಶೇಖರ್ ರಾವ್ ಅವರನ್ನು ಟೀಕಿಸಿದ್ದಾರೆ.
ರಾಜ್ಯದಲ್ಲಿ ಬರಗಾಲದಿಂದಾಗಿ ಜನತೆ ತತ್ತರಿಸಿದ್ದರೂ ತೆಲಂಗಾಣ ರಾಜ್ಯ ರಚನೆಯಾದ ಎರಡನೇ ವಾರ್ಷಿಕೋತ್ಸವದ ಅಂಗವಾಗಿ ನೂರಾರು ಕೋಟಿ ರೂಪಾಯಿಗಳನ್ನು ವೆಚ್ಚ ಮಾಡುತ್ತಿರುವುದಕ್ಕೆ ನಾಚಿಕೆಯಾಗಬೇಕು ಎಂದು ತೆಲಂಗಾಣ ಸಿಎಂ ಕೆ.ಚಂದ್ರಶೇಖರ್ ರಾವ್ ವಿರುದ್ಧ ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ವಾಗ್ದಾಳಿ ನಡೆಸಿದ್ದಾರೆ.