

ನವದೆಹಲಿ: 2014 ರಲ್ಲಿ ಡ್ಯಾನಿಶ್ ಮಹಿಳೆಯೋಬ್ಬರನ್ನು ಅಪಹರಿಸಿ ಅತ್ಯಾಚಾರವೆಸಗಿ ದರೋಡೆ ಮಾಡಿದ ಪ್ರಕರಣದಲ್ಲಿ ಆರೋಪಿಗಳಾಗಿದ್ದ ಐವರು ವ್ಯಕ್ತಿಗಳನ್ನು ದೆಹಲಿ ನ್ಯಾಯಾಲಯ ಜೂ.6 ರಂದು ಅಪರಾಧಿಗಳೆಂದು ತೀರ್ಪು ನೀಡಿದೆ. ದೆಹಲಿ ನ್ಯಾಯಾಲಯದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರಾದ ರಮೇಶ್ ಕುಮಾರ್ ಜೂ.9 ಕ್ಕೆ ಅಪರಾಧಿಗಳಿಗೆ ಶಿಕ್ಷೆ ಪ್ರಮಾಣವನ್ನು ಘೋಷಿಸಲಿದ್ದಾರೆ.
ಮಹೇಂದ್ರ ಅಲಿಯಾಸ್ ಗಂಜಾ (27) ಮೊಹಮ್ಮದ್ ರಾಜಾ(23 ) ರಾಜು (24 ) ಅರ್ಜುನ್ (22 ) ರಾಜು ಚಕ್ಕಾ(23 ) ಪ್ರಕರಣದ ಅಪರಾಧಿಗಳಾಗಿದ್ದು, ಸೆಕ್ಷನ್ 376 (ಡಿ) (ಗ್ಯಾಂಗ್ ರೇಪ್) 395 (ಡಕಾಯಿತಿ) 366 ( ಅಪಹರಣ) 342 (ಅಕ್ರಮ ಬಂಧನ) 506 (ಬೆದರಿಕೆ) ಅಡಿಯಲ್ಲಿ ಐವರೂ ಅಪರಾಧಿಗಳೆಂದು ಸಾಬೀತಾಗಿದ್ದಾರೆ.
ಜನವರಿ 14 ,2014 ರಲ್ಲಿ ಈ ಐವರೂ ಡ್ಯಾನಿಶ್ ಮಹಿಳೆಯೊಬ್ಬರಿಗೆ ಚಾಕು ತೋರಿಸಿ ದರೋಡೆ ಮಾಡಿದ್ದೂ ಅಲ್ಲದೇ ಮಹಿಳೆ ಮೇಲೆ ಅತ್ಯಾಚಾರವೆಸಗಿದ್ದರು. ಪ್ರಕರಣದ 6 ನೇ ಆರೋಪಿ ಶ್ಯಾಮ್ ಲಾಲ್ ನ ಪುರುಷತ್ವಕ್ಕೆ ಸಂಬಂಧಿಸಿದಂತೆ ವೈದ್ಯರನ್ನು ಸಾಕ್ಷಿಯನ್ನಾಗಿ ಪರಿಗಣಿಸಬೇಕೆಂಬ ಆರೋಪಿಗಳ ಪರ ವಕೀಲರ ಮೇಲ್ಮನವಿಯನ್ನು ಸಹ ಕೋರ್ಟ್ ತಿರಸ್ಕರಿಸಿದೆ. ಇನ್ನು ಪ್ರಕರಣದಲ್ಲಿ ಭಾಗಿಯಾಗಿದ್ದ ಮೂವರು ಘಟನೆ ನಡೆದಾಗ ಅಪ್ರಾಪ್ತರಾಗಿದ್ದ ಕಾರಣ ಬಾಲಾಪರಾಧಿ ನ್ಯಾಯಮಂಡಳಿಯಲ್ಲಿ ಅವರ ವಿರುದ್ಧ ವಿಚಾರಣೆ ನಡೆಯುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ 27 ಸಾಕ್ಷ್ಯಗಳನ್ನು ವಿಚಾರಣೆ ನಡೆಸಲಾಗಿದೆ.
ತಮ್ಮ ವಿರುದ್ಧದ ಆರೋಪಗಳನ್ನು ನಿರಾಕರಿಸಿರುವ ಅಪರಾಧಿಗಳು ಡ್ಯಾನಿಶ್ ಮಹಿಳೆಯ ಮೇಲೆ ಅತ್ಯಾಚಾರ ನಡೆದ ಘಟನೆಗೂ ಒಂದು ದಿನ ಮುನ್ನ ವೇಷ್ಯೆಯೊಂದಿಗೆ ದೈಹಿಕ ಸಂಪರ್ಕ ಹೊಂದಿದ್ದಾಗಿ ತಿಳಿಸಿದ್ದಾರೆ.