

ನವದೆಹಲಿ: ಭಾರತ ಎನ್ಎಸ್ಜಿ ಸದಸ್ಯತ್ವ ಪಡೆಯಲು ಚೀನಾ ವಿರೋಧ ವ್ಯಕ್ತ ಪಡಿಸಿದ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಅಮೆರಿಕಾ ಕೇವಲ ಒಂದು ರಾಷ್ಟ್ರ ಭಾರತ ಎನ್ ಎಸ್ ಜಿ ಸದಸ್ಯತ್ವ ಪಡೆದುಕೊಳ್ಳುವುದನ್ನು ತಡೆ ಹಿಯಿಲು ಸಾಧ್ಯವಿಲ್ಲ ಎಂದು ಹೇಳಿದೆ.
ಭಾರತವನ್ನು 48 ನೇ ಎನ್ ಎಸ್ ಜಿ ಸದಸ್ಯ ರಾಷ್ಟ್ರವನ್ನಾಗಿ ಮಾಡಲು ವಾಷಿಂಗ್ಟನ್ ಬದ್ಧವಾಗಿದೆ ಎಂದು ಅಮೆರಿಕಾದ ಹಿರಿಯ ಅಧಿಕಾರಿ ತಿಳಿಸಿದ್ದಾರೆ.
ನ್ಯೂಕ್ಲಿಯರ್ ಸಪ್ಲೈಯರ್ಸ್ ಗ್ರೂಪ್ ( ಎನ್ ಎಸ್ ಜಿ) ಗೆ ಭಾರತವನ್ನು ಸೇರ್ಪಡಿಸುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಅಮೆರಿಕಾದ ರಾಜಕೀಯ ವ್ಯವಹಾರಗಳ ರಾಜ್ಯ ಕಾರ್ಯದರ್ಶಿ ಥಾಮಸ್ ಶಾನೊನ್ ಹೇಳಿದ್ದಾರೆ.
ಭಾರತ ಇತ್ತೀಚೆಗೆ ಕ್ಷಿಪಣಿ ತಂತ್ರಜ್ಞಾನ ನಿಯಂತ್ರಣ ಒಕ್ಕೂಟಕ್ಕೆ ಸೇರಿದ್ದು, (MTCR) ಪ್ರಸರಣ ನಿಯಂತ್ರಣದಲ್ಲಿ ಪ್ರಮುಖ ಜವಾಬ್ದಾರಿ ಹೊಂದಿದೆ. ಹೀಗಾಗಿ ಭಾರತಕ್ಕೆ ಎನ್ ಎಸ್ ಜಿ ಸದಸ್ಯತ್ವ ನೀಡಲಾಗುವುದು ಎಂದು ಹೇಳಿದ್ದಾರೆ.
1975ರಲ್ಲಿ ಎನ್ಎಸ್ಜಿ ಸ್ಥಾಪನೆಯಾದ ನಂತರ ಪರಮಾಣು ಪ್ರಸರಣ ತಡೆ ಒಡಂಬಡಿಕೆಗೆ (ಎನ್ಪಿಟಿ) ಸಹಿ ಹಾಕಿದವರನ್ನು ಮಾತ್ರ ಸಂಘಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗಿದೆ. ಇದು ಸಂಘದ ಪ್ರಾಥಮಿಕ ನಿಯಮಗಳಲ್ಲಿ ಒಂದು.
ಆದರೆ ಭಾರತ ಎನ್ಪಿಟಿಗೆ ಸಹಿ ಹಾಕದೆ ಎನ್ಎಸ್ಜಿಗೆ ಸದಸ್ಯತ್ವ ಪಡೆಯಲು ಬಯಸುತ್ತಿದೆ. ಭಾರತಕ್ಕೆ ಎನ್ ಎಸ್ ಜಿ ಸದಸ್ಯತ್ವ ನೀಡಲು ಸಾಧ್ಯವಿಲ್ಲ ಎಂದು ಚೀನಾ ಸಿಯೋಲ್ ನಲ್ಲಿ ಕಳೆದ ವಾರ ನಡೆದ ಎನ್ ಎಸ್ ಜಿ ಸಭೆಯಲ್ಲಿ ಹೇಳಿತ್ತು.
ಭಾರತ ಎನ್ ಎಸ್ ಜಿ ಸದಸ್ಯತ್ವಕ್ಕಾಗಿ ಮೇ 12ರಂದು ಅರ್ಜಿ ಸಲ್ಲಿಸಿತ್ತು. ಸಿಯೋಲ್ ನಲ್ಲಿ ನಡೆದ ಪ್ರಮಾದಕ್ಕೆ ನಾವು ವಿಷಾಧಿಸುತ್ತೇವೆ ಎಂದು ಹೇಳಿರುವ ಥಾಮಸ್ ಶಾನ್ನೋನ್ ಎನ್ ಎಸ್ ಜಿ ಗೆ ಸೇರಲು ಭಾರತಕ್ಕೆ ಎಲ್ಲಾ ಅವಕಾಶಗಳಿವೆ ಎಂದು ಹೇಳಿದ್ದಾರೆ.