

ಪಾಟ್ನ: ಬಿಹಾರದಲ್ಲಿ ಹೆಚ್ಚುತ್ತಿರುವ ಅಪರಾಧ ಪ್ರಕರಣಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಸಿಎಂ ನಿತೀಶ್ ಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ್ದ ಆರ್ ಜೆಡಿ ಸಂಸದ ಮೊಹಮ್ಮದ್ ತಸ್ಲಿಮುದ್ದೀನ್ ಗೆ ಪಕ್ಷ ಶೋಕಾಸ್ ನೊಟೀಸ್ ಜಾರಿ ಮಾಡಿದೆ.
ನಿತೀಶ್ ಕುಮಾರ್ ಅವರ ವಿರುದ್ಧ ವಾಗ್ದಾಳಿ ನಡೆಸುವುದು ಅಲ್ಲದೇ ಸಂಸದ ತಸ್ಲಿಮುದ್ದೀನ್, ಆರ್ ಜೆಡಿ ಪಕ್ಷ ಜೆಡಿಯು ನೇತೃತ್ವದ ಮಹಾ ಮೈತ್ರಿಕೂಟದಿಂದ ಹೊರಬರಬೇಕು ಎಂದು ಅಭಿಪ್ರಾಯಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ತಸ್ಲಿಮುದ್ದೀನ್ ಗೆ ನೋಟಿಸ್ ಜಾರಿ ಮಾಡಿರುವ ಆರ್ ಜೆಡಿ, 10 ದಿನಗಳ ಒಳಗೆ ತಮ್ಮ ಹೇಳಿಕೆ ಬಗ್ಗೆ ಸ್ಪಷ್ಟನೆ ನೀಡಬೇಕು ಇಲ್ಲದೇ ಇದ್ದರೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದೆ.
ತಸ್ಲಿಮುದ್ದೀನ್ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಹಾರ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್, ತಸ್ಲಿಮುದ್ದೀನ್ ಪಕ್ಷದ ಹಿರಿಯ ನಾಯಕರಾಗಿದ್ದಾರೆ ಹೇಳಿಕೆ ನೀದುವುದಕ್ಕೂ ಮುನ್ನ ಅವರು ಯೋಚನೆ ಮಾಡಬೇಕಿತ್ತು, ಅವರ ವಿರುದ್ಧ ಕ್ರಮ ಕೈಗೊಳ್ಳುವುದರ ಬಗ್ಗೆ ಪಕ್ಷದ ಹೈಕಮಾಂಡ್ ನಿರ್ಧಾರ ಕೈಗೊಳ್ಳಲಿದೆ ಎಂದು ಹೇಳಿದ್ದಾರೆ.