

ನವದೆಹಲಿ: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರ ಟ್ವಿಟರ್ ಖಾತೆ ಹ್ಯಾಕ್ ಹಾಗಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಗುರುವಾರ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದೆ.
ಈ ಕುರಿತಂತೆ ಮಾತನಾಡಿರುವ ಕಾಂಗ್ರೆಸ್ ಮುಖ್ಯ ವಕ್ತಾರ ರಂದೀಪ್ ಸಿಂಗ್ ಸುರ್ಜೇವಾಲಾ ಅವರು, ಟ್ವಿಟರ್ ಖಾತೆಯೊಂದು ಸಾಮಾನ್ಯ ವೇದಿಕೆಯಾಗಿದ್ದು, ಕೋಟ್ಯಾಂತರ ಜನರು ಈ ಸಾಮಾಜಿಕ ಜಾಲತಾಣವನ್ನು ಬಳಕೆ ಮಾಡುತ್ತಿದ್ದಾರೆ. ಸಾಮಾನ್ಯ ವೇದಿಕೆಯಾಗಿರುವ ಟ್ವಿಟರ್ ಖಾತೆಗೇ ಕೇಂದ್ರ ಸರ್ಕಾರ ಸೂಕ್ತ ಭದ್ರತೆ ನೀಡಲು ಸಾಧ್ಯವಾಗಲಿಲ್ಲ. ಇನ್ನು ಭಾರತವನ್ನು ಡಿಜಿಟಲೀಕರಣ ಮಾಡಲು ಹೊರಟಿರುವ ಕೇಂದ್ರ ಸಾಮಾನ್ಯ ಜನರ ಹಣಕ್ಕೆ ಹೇಗೆ ಭದ್ರತೆಯನ್ನು ನೀಡುತ್ತದೆ ಎಂಬುದನ್ನು ಜನರು ಚಿಂತಿಸಬೇಕಿದೆ ಎಂದು ಹೇಳಿದ್ದಾರೆ.
ಟ್ವಿಟರ್ ಖಾತೆ ಹ್ಯಾಕ್ ಪ್ರಕರಣವನ್ನು ಕಾಂಗ್ರೆಸ್ ಗಂಭೀರವಾಗಿ ಪರಗಣಿಸಿದ್ದು, ಸೈಬರ್ ಕ್ರೈಂ ಪೊಲೀಸರ ಬಳಿ ದೂರು ದಾಖಲಿಸಲಿದೆ. ಪ್ರಕರಣದಲ್ಲಿ ಸರ್ಕಾರ ಪ್ರಾಮಾಣಿಕವಾಗಿ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸುವುದೆಂದು ಆಶಿಸುತ್ತೇವೆಂದು ತಿಳಿಸಿದ್ದಾರೆ.