

ನವದೆಹಲಿ: ಧೋನಿ ಅವರ ವಿಷ್ಣು ಅವತಾರದ ಜಾಹಿರಾತಿನ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣವನ್ನು ಸುಪ್ರೀಂ ಕೋರ್ಟ್ ಸೋಮವಾರ ವಜಾಗೊಳಿಸಿದೆ.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ರಂಜನ್ ಗಗೋಯ್ ಅವರ ನೇತೃತ್ವದ ನ್ಯಾಯಪೀಠ, ಧೋನಿ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣವನ್ನು ವಜಾಗೊಳಿಸಿದೆ. ಅಂತೆಯೇ ಧೋನಿ ವಿರುದ್ಧ ಸಮನ್ಸ್ ನೀಡಿಕೆಯಲ್ಲಿ ಕಾನೂನು ಪರಿಪಾಲಿಸಿಲಾಗಿಲ್ಲ ಎಂದು ಹೇಳಿರುವ ನ್ಯಾಯಪೀಠ ಈ ಹಿಂದೆ ಕರ್ನಾಟಕ ನ್ಯಾಯಾಲಯ ನೀಡಿದ್ದ ಸಮನ್ಸ್ ಅನ್ನು ರದ್ದುಗೊಳಿಸಿದೆ.
ಟೀಂ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿಯ ಜಾಹೀರಾತು ಗಳಿಕೆಗೆ ಸಂಬಂಧಿಸಿದಂತೆ ಆಂಗ್ಲ ವಾಣಿಜ್ಯ ನಿಯತಕಾಲಿಕೆಯೊಂದು ಧೋನಿಯನ್ನು ವಿಷ್ಣು ಅವತಾರದಲ್ಲಿ ಚಿತ್ರಿಸಿತ್ತು. ಚಿತ್ರದಲ್ಲಿ ಧೋನಿ ಪ್ರಚಾರ ರಾಯಭಾರಿಯಾಗಿರುವ ಎಲ್ಲ ಕ್ರೀಡಾ ಪರಿಕರಗಳನ್ನು ಧೋನಿ ಕೈಗೆ ನೀಡಲಾಗಿತ್ತು. ಚಿತ್ರದಲ್ಲಿ ಧೋನಿ ಸ್ಪೋರ್ಟ್ಸ್ ಸಂಸ್ಥೆಯ ಶೂ ಕೂಡ ಹಿಡಿದಿದ್ದರು. 2013ರಲ್ಲಿ ಪ್ರಕಟವಾಗಿದ್ದ ಈ ಚಿತ್ರ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಆರೋಪಿಸಿ ಸಾಮಾಜಿಕ ಕಾರ್ಯಕರ್ತ ಜಯಕುಮಾರ್ ಹಿರೇಮಠ ಎಂಬುವವರು ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು.
ಪ್ರಕರಣ ಸಂಬಂಧ ನ್ಯಾಯಾಲಯಕ್ಕೆ ಹೇಳಿಕೆ ನೀಡಿದ್ದ ಧೋನಿ, ಜಾಹೀರಾತಿಗೂ ನನಗೂ ಸಂಬಂಧವಿಲ್ಲ. ವಿನಾಕಾರಣ ತಮ್ಮನ್ನು ಪ್ರಕರಣದಲ್ಲಿ ಸಿಲುಕಿಸಲಾಗಿದೆ ಎಂದು ಹೇಳಿಕೆ ನೀಡಿದ್ದರು. ಅದರೆ, ಧೋನಿ ವಿರುದ್ಧ ಪ್ರಕರಣ ರದ್ದುಪಡಿಸಲು ಕರ್ನಾಟಕ ಹೈಕೋರ್ಟ್ ನಿರಾಕರಿಸಿತ್ತು. ಸಾಮಾಜಿಕ ಕಾರ್ಯಕರ್ತ ಜಯಕುಮಾರ್ ಅವರು ಸಲ್ಲಿಸಿದ್ದ ಅರ್ಜಿಯನ್ನು ಎತ್ತಿ ಹಿಡಿದಿದ್ದ ಹೈಕೋರ್ಟ್, ಸೆಲೆಬ್ರಿಟಿ ಕ್ರಿಕೆಟರ್ ಆದ ನಿಮಗೆ ಈ ಚಿತ್ರದಿಂದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗಲಿದೆ ಎಂಬ ಅರಿವಿರಬೇಕು ಎಂದು ನ್ಯಾಯಾಲಯ ಪ್ರಶ್ನಿಸಿತ್ತು. ಅಲ್ಲದೆ ಬೆಂಗಳೂರಿನ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ (ಎಸಿಎಂಎಂ) ನ್ಯಾಯಲಯಕ್ಕೆ ಹಾಜರಾಗುವಂತೆ ಧೋನಿಗೆ ಸಮನ್ಸ್ ನೀಡಲಾಗಿತ್ತು. ಅದರೆ, ಧೋನಿ ವಿಚಾರಣೆಗೆ ಬಂದಿರಲಿಲ್ಲ. ನಂತರ ಪ್ರಕರಣ ಹೈಕೋರ್ಟ್ ಹಾಗೂ ಸುಪ್ರೀಂಕೋರ್ಟ್ ತಲುಪಿ ಈಗ ಧೋನಿಗೆ ರಿಲೀಫ್ ಸಿಕ್ಕಿದೆ.