

ಕೋಲ್ಕತಾ: ತಮಿಳುನಾಡಿಗೆ ನೀರನ್ನು ಹರಿಸುವಂತೆ ಸುಪ್ರೀಂಕೋರ್ಟ್ ನೀಡಿದ್ದ ತೀರ್ಪಿನ ವಿರುದ್ಧ ಕರ್ನಾಟಕ ನಡೆಯುತ್ತಿದ್ದು, ಕಾವೇರಿ ಕಲಾಪದಿಂದ ಕೆಟ್ಟ ನಿರ್ಣಯವೊಂದನ್ನು ತೆಗೆದುಕೊಳ್ಳಲಾಗಿದೆ ಎಂದು ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಾಧೀಶ ಎ.ಕೆ. ಗಂಗೂಲಿ ಅವರು ಹೇಳಿದ್ದಾರೆ.
ನಿನ್ನೆಯಷ್ಟೇ ವಿಶೇಷ ಅಧಿವೇಶನ ನಡೆಸಿದ್ದ ರಾಜ್ಯ ಸರ್ಕಾರ, ರಾಜ್ಯದಲ್ಲಿ ಕುಡಿಯುವ ನೀರಿನ ಅಗತ್ಯವಿದ್ದು, ಈ ಹಿನ್ನೆಲೆಯಲ್ಲಿ ತಮಿಳುನಾಡಿಗೆ ನೀರು ಬಿಡುಗಡೆ ಮಾಡುವುದನ್ನು ಮುಂದೂಡಲಾಗಿದೆ ಎಂದು ಹೇಳಿತ್ತು. ಸುಪ್ರೀಂಕೋರ್ಟ್ ಆದೇಶದ ಅನುಸಾರ ತಮಿಳುನಾಡಿಗೆ ನೀರು ಹರಿಸಲು ಸಾಧ್ಯವಿಲ್ಲ ಎಂದು ಸೂಚ್ಯವಾಗಿ ಹೇಳುವ ನಿರ್ಣಯವನ್ನು ವಿಧಾನಮಂಡಲದ ಉಭಯ ಸದನಗಳಲ್ಲಿ ಅಂಗೀಕರಿಸಲಾಗಿತ್ತು. ಇದರಂತೆ ತಮಿಳುನಾಡಿಗೆ ನೀರು ಹರಿಸುವ ಸುಪ್ರೀಂ ಕಟ್ಟಾಜ್ಞೆಯನ್ನು ನಯವಾಗಿ ನಿರಾಕರಿಸಿ ಐತಿಹಾಸಿಕ ನಿರ್ಣಯವನ್ನು ಪಕ್ಷಭೇದ ಮರೆತು ವಿಧಾನಮಂಡಲದಲ್ಲಿ ಕೈಗೊಳ್ಳುವ ಗಟ್ಟಿತನವನ್ನು ಜನನಾಯಕರು ಪ್ರದರ್ಶಿಸಿದ್ದರು.
ರಾಜ್ಯ ಸರ್ಕಾರ ಈ ನಡೆಗೆ ಪ್ರತಿಕ್ರಿಯೆ ನೀಡಿರುವ ಎ.ಕೆ. ಗಂಗೂಲಿ ಅವರು, ಸುಪ್ರೀಂ ತೀರ್ಪಿನಲ್ಲಿ ಕರ್ನಾಟಕ ರಾಜ್ಯ ಭಾಗಿಯಾಗಿದೆ. ಸುಪ್ರೀಂ ಆದೇಶವನ್ನು ಪಾಲಿಸುವುದು ಭಾರತದಲ್ಲಿರುವ ಎಲ್ಲಾ ಅಧಿಕಾರಿಗಳ, ನಾಗರಿಕರ ಕರ್ತವ್ಯವಾಗಿದೆ. ಹೀಗಾಗಿ ಕರ್ನಾಟಕ ಸರ್ಕಾರ ಕೂತು ತಾವೇ ಸುಪ್ರೀಂ ಆದೇಶವನ್ನು ಮರುಪರಿಶೀಲನೆ ಮಾಡಿ ಆದೇಶವನ್ನು ಪಾಲನೆ ಮಾಡದೆ ಇರುವುದು ಸರಿಯಲ್ಲ. ಒಂದು ವೇಳೆ ಈ ರೀತಿಯಾಗಿ ಮಾಡಿದ್ದೇ ಆದರೆ, ಕರ್ನಾಟಕ ರಾಜ್ಯ ಭಾರತ ಸಂವಿಧಾನದ ಮೂಲತತ್ತ್ವವನ್ನು ಉಲ್ಲಂಘಿಸುತ್ತಿರುವಂತಾಗುತ್ತದೆ. ಮುಖ್ಯವಾಗಿರುವ ಅಧಿಕಾರಿಗಳು ಹಾಗೂ ಸರ್ಕಾರಗಳೇ ಸುಪ್ರೀಂ ಆದೇಶವನ್ನು ಪಾಲನೆ ಮಾಡದಿದ್ದರೆ, ಈ ರೀತಿಯ ನಿರ್ಧಾರಗಳು ಅತ್ಯಂತ ಕೆಟ್ಟ ಪೂರ್ವನಿದರ್ಶನಗಳನ್ನು ರಚನೆ ಮಾಡಲಿದೆ ಎಂದು ಹೇಳಿದ್ದಾರೆ.