

ನವದೆಹಲಿ: ತೆರಿಗೆ ಪಾವತಿಗೆ ಆಧಾರ್ ಕಾರ್ಡ್ ಕಡ್ಡಾಯಗೊಳಿಸಿದ ಕೇಂದ್ರ ಸರ್ಕಾರ ಇದರ ಬೆನ್ನಲ್ಲೇ ದೇಶದೊಳಗಿನ ವಿಮಾನ ಪ್ರಯಾಣಕ್ಕೂ ಅಧಾರ್ ಕಾರ್ಡ್ ಕಡ್ಡಾಯ ಮಾಡುವ ಕುರಿತು ಗಂಭೀರ ಚಿಂತನೆಯಲ್ಲಿ ತೊಡಗಿದೆ ಎಂದು ಹೇಳಲಾಗುತ್ತಿದೆ.
ರಾಷ್ಟ್ರೀಯ ಆಂಗ್ರ ಪತ್ರಿಕೆಯೊಂದು ವರದಿ ಮಾಡಿರುವಂತೆ ಕೇಂದ್ರ ಸರ್ಕಾರವು ದೇಶದೊಳಗೆ ವಿಮಾನದಲ್ಲಿ ಪ್ರಯಾಣಿಸಲು ಶೀಘ್ರವೇ ಆಧಾರ್ ಅಥವಾ ಪಾಸ್ ಪೋರ್ಟ್ ಕಡ್ಡಾಯಗೊಳಿಸುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ಉದ್ದೇಶಿತ ಪ್ರಯಾಣ ನಿಷೇಧ ಪಟ್ಟಿಗೆ ಅನುಗುಣವಾಗಿ ಪ್ರಯಾಣಿಕರನ್ನು ಗುರುತಿಸಲು ದೋಷರಹಿತ ಪದ್ಧತಿಯನ್ನು ಜಾರಿಗೊಳಿಸಲು ಕೇಂದ್ರ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ ಎಂದು ಕೇಂದ್ರ ವಿಮಾನಯಾನ ಸಚಿವಾಲಯದ ಮೂಲಗಳು ತಿಳಿಸಿವೆ. ಟಿಕೆಟ್ ಬುಕ್ ಮಾಡುವಾಗ ಗುರುತು ಮಾಹಿತಿಗಳನ್ನು ಸಂಗ್ರಹಿಸುವ ವ್ಯವಸ್ಥೆಯನ್ನು ಮುಂದಿನ ಮೂರು ತಿಂಗಳೊಳಗೆ ಜಾರಿಗೆ ತರುವ ಸಾಧ್ಯತೆಯೂ ಇದೆ ಎಂದು ಹೇಳಲಾಗುತ್ತಿದೆ.
ಅಪರಾಧಗಳ ತೀವ್ರತೆಗೆ ಅನುಗುಣವಾಗಿ ನಿಷೇಧ ಪಟ್ಟಿಯಲ್ಲಿ ಪ್ರಯಾಣಿಕರನ್ನು ನಾಲ್ಕು ವಿಭಾಗದಲ್ಲಿ ವಿಂಗಡಿಸಲಾಗುವುದು. ನಿಷೇಧ ಪಟ್ಟಿ ಜಾರಿಗೆ ತರಲು ಎಲ್ಲ ಪ್ರಯಾಣಿಕರ ವಿವರಗಳು ಲಭ್ಯವಾಗುವುದು ಮುಖ್ಯವಾಗಿದೆ. ವಿಮಾನ ಟಿಕೆಟ್ ಬುಕ್ ಮಾಡುವ ವೇಳೆ ಆಧಾರ್ ಅಥವಾ ಪಾಸ್ ಪೋರ್ಟ್ ನಂಬರ್ ಸೇರಿಸುವುದು ಅಗತ್ಯವಾಗಬಹುದು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ನಾಗರಿಕ ವಿಮಾನಯಾನ (ಸಿಎಆರ್) ಅಗತ್ಯಗಳ ಕರಡು ಪ್ರತಿಯನ್ನು ಮುಂದಿನ ವಾರ ಪ್ರಕಟಿಸುವ ಸಾಧ್ಯತೆಯಿದ್ದು, ಸಾರ್ವಜನಿಕರು 30 ದಿನಗಳಲ್ಲಿ ತಮ್ಮ ಸಲಹೆಗಳನ್ನು ತಿಳಿಸಬಹುದಾಗಿದೆ. ಜುಲೈಯಿಂದ ನೂತನ ವ್ಯವಸ್ಥೆ ಜಾರಿಗೆ ಬರುವ ಸಾಧ್ಯತೆ ಇದೆ ಎಂದೂ ಹೇಳಲಾಗುತ್ತಿದೆ.
ಇತ್ತೀಚೆಗಷ್ಟೇ ಏರ್ ಇಂಡಿಯಾ ಸಿಬ್ಬಂದಿಯನ್ನು ಥಳಿಸಿ ವಿಮಾನ ಪ್ರಯಾಣಿಕರ ಕಪ್ಪುಪಟ್ಟಿಗೆ ಸೇರಿದ್ದ ಶಿವಸೇನೆ ಸಂಸದ ರವೀಂದ್ರ ಗಾಯಕ್ವಾಡ್ ಅವರ ಹೆಸರಲ್ಲಿ ಏರ್ ಇಂಡಿಯಾ ಸಂಸ್ಥೆಯಲ್ಲಿ 10 ಬಾರಿ ಟಿಕೆಟ್ ಬುಕ್ ಆಗಿತ್ತು. ಈ ವಿವಾದ ಮುಕ್ತಾಯದ ಬಳಿಕ ಮಾತನಾಡಿದ್ದ ಸಂಸದ ಗಾಯಕ್ವಾಡ್ ತಾವು ಈ ಟಿಕೆಟ್ ಗಳನ್ನು ಬುಕ್ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ಗರು. ಇಂತಹ ಘಟನೆಗಳನ್ನು ಗಂಭೀರವಾಗಿ ಪರಿಗಣಿಸಿರುವ ಅಕ್ರಮ ಟಿಕೆಟ್ ಬುಕಿಂಗ್ ಹಾಗೂ ಅಕ್ರಮ ಪ್ರಯಾಣಿಕರನ್ನು ಗುರುತಿಸುವ ಸಲುವಾಗಿ ಕೇಂದ್ರ ಸರ್ಕಾರ ಇಂತಹುದೊಂದು ಕ್ರಮಕ್ಕೆ ಮುಂದಾಗಿದೆ ಎಂದು ಹೇಳಲಾಗುತ್ತಿದೆ.