ಚೆನ್ನೈ: ಕೆಎಸ್ಆರ್'ಟಿಸಿ ಐರಾವತ ಬಸ್ಸಿಗೆ ಬೆಂಕಿ, ಕೂದಲೆಳೆ ಅಂತರದಲ್ಲಿ ಪ್ರಯಾಣಿಕರು ಪಾರು
ಕರ್ನಾಟಕ ರಾಜ್ಯ ರಸ್ತೆ ಸಾರಿಕೆ ಸಂಸ್ಥೆಗೆ ಸೇರಿದ ಐರಾವತ ಬಸ್ಸೊಂದು ಬೆಂಕಿಗಾಹುತಿಯಾಗಿದ್ದು, ಕೂದಲೆಳೆ ಅಂತಹದಲ್ಲಿ ಪ್ರಯಾಣಿಕರು ಅನಾಹುತದಿಂದ ಪಾರಾಗಿರುವ ಘಟನೆ ತಮಿಳುನಾಡಿನ ಚೆನ್ನೈನಲ್ಲಿ ಶನಿವಾರ ನಡೆದಿದೆ...
ಚೆನ್ನೈ: ಕೆಎಸ್ಆರ್'ಟಿಸಿ ಐರಾವತ ಬಸ್ಸಿಗೆ ಬೆಂಕಿ, ಕೂದಲೆಳೆ ಅಂತರದಲ್ಲಿ ಪ್ರಯಾಣಿಕರು ಪಾರು
ಚೆನ್ನೈ: ಕರ್ನಾಟಕ ರಾಜ್ಯ ರಸ್ತೆ ಸಾರಿಕೆ ಸಂಸ್ಥೆಗೆ ಸೇರಿದ ಐರಾವತ ಬಸ್ಸೊಂದು ಬೆಂಕಿಗಾಹುತಿಯಾಗಿದ್ದು, ಕೂದಲೆಳೆ ಅಂತಹದಲ್ಲಿ ಪ್ರಯಾಣಿಕರು ಅನಾಹುತದಿಂದ ಪಾರಾಗಿರುವ ಘಟನೆ ತಮಿಳುನಾಡಿನ ಚೆನ್ನೈನಲ್ಲಿ ಶನಿವಾರ ನಡೆದಿದೆ.
ಕಳೆದ ರಾತ್ರಿ 10 ಗಂಟೆ ಸುಮಾರಿಗೆ ಬೆಂಗಳೂರಿನಿಂದ ಚೆನ್ನೈಗೆ ಕೆಎಸ್ಆರ್'ಟಿಸಿ ಐರಾವತ ಬಸ್ ತೆರಳಿತ್ತು. ಬಸ್ಸಿನಲ್ಲಿ ಒಟ್ಟು 40 ಮಂದಿ ಪ್ರಯಾಣಿಕರಿದ್ದರು. ಚೆನ್ನೈನ ಕೋಯಂಬೀಡು ಬಸ್ ನಿಲ್ದಾಣದಿಂದ ಸುಮಾರು 14 ಕಿ.ಮೀ ದೂರದಲ್ಲಿ ಬಸ್ ಚಲಿಸುತ್ತಿದ್ದ ವೇಳೆ ಬೆಳಿಗ್ಗೆ 8.20 ಸುಮಾರಿಗೆ ಅವಘಡ ಸಂಭವಿಸಿದೆ.
ಬಸ್ ಹಿಂಭಾಗದಲ್ಲಿ ದ್ವಿಚಕ್ರ ವಾಹನದಲ್ಲಿ ಚಲಿಸುತ್ತಿದ್ದ ವ್ಯಕ್ತಿಯೊಬ್ಬ ಬಸ್ಸಿನ ಹಿಂಭಾಗದಲ್ಲಿ ಹೊಗೆ ಬರುತ್ತಿದೆ ಎಂದು ಚಾಲಕನಿಗೆ ಮಾಹಿತಿ ನೀಡಿದ್ದಾನೆ. ಕೂಡಲೇ ಎಚ್ಚೆತ್ತುಕೊಂಡ ಚಾಲಕ ಬಸ್ಸನ್ನು ನಿಲ್ಲಿಸಿ ಪ್ರಯಾಣಿಕರನ್ನು ಕೆಳಗಿಳಿಸಿದ್ದಾರೆ.
ಆದರೆ, ಸಮಯಕ್ಕೆ ಸರಿಯಾಗಿ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿಗಳು ಬಾರದ ಕಾರಣ, ಬೆಂಕಿ ಬಸ್ಸಿನ ಸುತ್ತಲೂ ಆವರಿಸಿಕೊಂಡಿದೆ. ಪರಿಣಾಮ ಸ್ಥಳದಲ್ಲಿ ಸಂಚಾರ ದಟ್ಟಣೆ ಕೂಡ ಎದುರಾಗಿದೆ.
ಬಸ್ಸಿನ ಹಿಂಭಾಗದಲ್ಲಿ ಹೊಗೆ ಕಾಣಿಸಿಕೊಳ್ಳುತ್ತಿದ್ದಂತೆಯೇ ಬೆಂಕಿ ಕೆನ್ನಾಲಿಗೆ ಬಸ್ಸಿನ ಸುತ್ತಲೂ ಆವರಿಸಿಕೊಳ್ಳುತ್ತದೆ ಎಂದು ತಿಳಿಯಿತು. ಕೂಡಲೇ ನಿರ್ವಾಹಕನಿಗೆ ಮಾಹಿತಿ ತಿಳಿಸಿ ಪ್ರಯಾಣಿಕರನ್ನು ಕೆಳಗಿಳಿಸಲಾಯಿತು ಎಂದು ಚಾಲಕ ಎಸ್. ಶ್ರೀಧರ್ ಅವರು ಹೇಳಿದ್ದಾರೆ.
ಬಸ್ಸಿನಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಸ್ಥಳದಲ್ಲಿ ಭಾರೀ ಸಂಚಾರ ದಟ್ಟಣೆ ಎದುರಾಗಿತ್ತು. ಸ್ಥಳಕ್ಕೆ ಧಾವಿಸುವಷ್ಟರಲ್ಲಿ ಬಸ್ಸಿನ ಸುತ್ತಲೂ ಬೆಂಕಿ ಆವರಿಸಿಕೊಂಡಿತ್ತು ಎಂದು ಹೇಳಿ ಅಂಬತ್ತೂರು ಅಗ್ನಿಶಾಮಕ ದಳದ ಅಧಿಕಾರಿ ಮುತ್ತುಕೃಷ್ಣನ್ ಅವರು ಹೇಳಿದ್ದಾರೆ.
ಅದೃಷ್ಟವಶಾತ್ ಘಟನೆಯಲ್ಲಿ ಯಾರೊಬ್ಬರಿಗೂ ಗಾಯಗಳಾಗಿಲ್ಲ. ಈಗಾಗಲೇ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿ ಜಯಚಂದ್ರನ್ ತಿಳಿಸಿದ್ದಾರೆ.
ಬಸ್ಸಿನಲ್ಲಿ ಬೆಂಕಿ ಕಾಣಿಸಿಕೊಂಡ ಹಿನ್ನಲೆಯಲ್ಲಿ ಕೆಎಸ್ಆರ್'ಟಿಸಿ ಸಾರ್ವಜನಿಕ ಸಂಪರ್ಕ ಅಧಿಕಾರಿ ಲತಾ.ಟಿ.ಎಸ್ ನೇತೃತ್ವದಲ್ಲಿ ತಂಡವೊಂದು ಇಂದು ಚೆನ್ನೈಗೆ ಭೇಟಿ ನೀಡುತ್ತಿದ್ದು, ಬೆಂಕಿ ಅವಘಡ ಕುರಿತಂತೆ ಪರಿಶೀಲನೆ ನಡೆಸಲಿದ್ದಾರೆಂದು ತಿಳಿದುಬಂದಿದೆ.
ಘಟನೆಯಲ್ಲಿ ಯಾವೊಬ್ಬ ಪ್ರಯಾಣಿಕನಿಗೂ ಗಾಯಗಳಾಗಿಲ್ಲ. ಚಾಲಕ ಹಾಗೂ ನಿರ್ವಾಹಕರ ಸಮಯ ಪ್ರಜ್ಞೆಯಿಂದ ಪ್ರಯಾಣಿಕರೆಲ್ಲರನ್ನೂ ಕೆಳಗಿಳಿಸಿದ್ದಾರೆ, ಪ್ರಯಾಣಿಕರ ಲಗೇಜ್ ಗಳನ್ನು ಸೂಕ್ತ ಸಮಯದಲ್ಲಿ ತೆಗೆದುಕೊಂಡಿದ್ದಾರೆಂದು ತಿಳಿಸಿದ್ದಾರೆ.