

ಚಂಡೀಘಡ: ಅನುಯಾಯಿಗಳ ಮೇಲೆ ಅತ್ಯಾಚಾರ ಮಾಡಿದ ಪ್ರಕರಣ ಸಂಬಂಧ ದೋಷಿಯಾಗಿರುವ ಡೇರಾ ಸಚ್ಚಾ ಸೌಧದ ಮುಖ್ಯಸ್ಥ ರಾಮ್ ರಹೀಮ್ ಗುರ್ಮಿತ್ ಸಿಂಗ್ ಅವರನ್ನು ಬಿಗಿ ಭದ್ರತೆಯಲ್ಲಿ ರೋಹ್ಟಕ್ ನ ಸುನಾರಿಯಾ ಜೈಲಿಗೆ ಕರೆತರಲಾಗಿದೆ.
ಪಂಚಕುಲಾ ಸಿಬಿಐ ವಿಶೇಷ ನ್ಯಾಯಾಲಯದಿಂದ ನೇರವಾಗಿ ರೋಹ್ಟಕ್ ಗೆ ಬಾಬಾ ರಾಮ್ ರಹೀಮ್ ರನ್ನು ಹೆಲಿಕಾಪ್ಟರ್ ಮೂಲಕ ಕರೆತರಲಾಗಿದ್ದು, ಇದೀಗ ಸುನಾರಿಯಾ ಜೈಲಿಗೆ ಕಳುಹಿಸಲಾಗಿದೆ. ಬಾಬಾ ರಾಮ್ ರಹೀಮ್ ಜೈಲು ಸೇರುತ್ತಿದ್ದಂತೆಯೇ ಜೈಲಿನ ಸುಮಾರು 5 ಕಿ.ಮೀ ವ್ಯಾಪ್ತಿಯಲ್ಲಿ ವ್ಯಾಪಕ ಭದ್ರತೆ ಒದಗಿಸಲಾಗಿದೆ. ಕೇಂದ್ರೀಯ ಮೀಸಲು ಪಡೆ, ಸಿಐಎಸ್ ಎಫ್ ಹಾಗೂ ಬಿಎಸ್ ಎಫ್ ಯೋಧರನ್ನು ರೋಹ್ಟಕ್ ನಲ್ಲಿ ಭದ್ರತೆಗೆ ನಿಯೋಜಿಸಲಾಗಿದ್ದು, ಇಡೀ ಜೈಲಿಗೆ ಸೇನಾಪಡೆಗಳ ಭದ್ರಕೋಟೆಯನ್ನು ನಿರ್ಮಿಸಲಾಗಿದೆ.
ಇನ್ನು ಪಂಚಕುಲದಲ್ಲಿ ನಡೆದ ಹಿಂಸಾಚಾರಗಲ್ಲಿ ಈ ವರೆಗೂ 13 ಮಂದಿ ಸಾವಿಗೀಡಾಗಿದ್ದು, 70 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಭದ್ರತಾ ಮಾಹಿತಿ ಪಡೆದ ರಾಜ್ ನಾಥ್ ಸಿಂಗ್
ಏತನ್ಮಧ್ಯೆ ಹರ್ಯಾಣ ಸಿಎಂ ಮನೋಹರ್ ಲಾಲ್ ಖಟ್ಟರ್ ಹಾಗೂ ಪಂಜಾಬ್ ಸಿಎಂ ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರಿಗೆ ಕರೆ ಮಾಡಿದ್ದ ಕೇಂದ್ರ ಸಚಿವ ರಾಜನಾಥ್ ಸಿಂಗ್ ಅವರು ಭದ್ರತೆ ಮೇಲ್ವಿಚಾರಣೆ ನಡೆಸಿದರು. ಈ ವೇಳೆ ಉಭಯ ರಾಜ್ಯಗಳಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಸಂಪೂರ್ಣ ಬೆಂಬಲ ನೀಡಲಿದೆ. ಅಂತೆಯೇ ಹೆಚ್ಚುವರಿ ಪಡೆಗಳನ್ನು ರವಾನಿಸುವ ಕುರಿತು ಭರವಸೆ ನೀಡಿದರು. ಉಭಯ ರಾಜ್ಯಗಳ ಮುಖ್ಯಮಂತ್ರಿಗಳು ಕೇಂದ್ರ ಸಚಿವರಿಗೆ ತಾವು ಕೈಗೊಂಡ ಭದ್ರತ ಕ್ರಮಗಳ ಕುರಿತು ಮಾಹಿತಿ ನೀಡಿದ್ದಾರೆ ಎಂದು ತಿಳಿದುಬಂದಿದೆ.