

ಚಂಡೀಘಡ: ಗುರ್ಮೀತ್ ರಾಮ್ ರಹೀಮ್ ಸಿಂಗ್ ಅವರು ಅತ್ಯಾಚಾರ ಪ್ರಕರಣದಲ್ಲಿ ದೋಷಿ ಎಂದು ತೀರ್ಪು ಹೊರ ಬಿದ್ದ ಬಳಿಕ ನಾಲ್ಕು ರಾಜ್ಯಗಳಲ್ಲಿ ವ್ಯಾಪಕ ಹಿಂಸಾಚಾರ ಭುಗಿಲೆದ್ದಿದ್ದು, ಪ್ರಕರಣ ಸಂಬಂಧ ಹರ್ಯಾಣ ಹೈಕೋರ್ಟ್ ಡೇರಾ ಸಚ್ಚಾ ಸೌಧ ಆಸ್ಚಿ ಮುಟ್ಟುಗೋಲು ಹಾಕಿಕೊಳ್ಳುವಂತೆ ಖಡಕ್ ಸೂಚನೆ ನೀಡಿದೆ.
ಆಶ್ರಮದಲ್ಲೇ ಮಹಿಳಾ ಅನುಯಾಯಿಗಳ ಮೇಲೆ ಅತ್ಯಾಚಾರ ಮಾಡಿದ ಆರೋಪ ಸಾಬೀತಾದ ಬೆನ್ನಲ್ಲೇ ಹರ್ಯಾಣ, ಪಂಜಾಬ್, ದೆಹಲಿ, ಹಾಗೂ ಉತ್ತರ ಪ್ರದೇಶದಲ್ಲಿ ವ್ಯಾಪಕ ಹಿಂಸಾಚಾರ ಭುಗಿಲೆದ್ದಿದ್ದು, ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಹರ್ಯಾಣ ಹೈಕೋರ್ಟ್ ಹಿಂಸಾಚಾರದಿಂದ ಯಾವುದೇ ರೀತಿಯ ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಹಾನಿಯಾಗಿದ್ದರೆ ಅದನ್ನು ಡೇರಾ ಸಚ್ಚಾ ಸೌಧ ಸಂಸ್ಥೆಯಿಂದಲೇ ಮರಳಿ ಪಡೆಯಿರಿ. ಇದಕ್ಕಾಗಿ ಡೇರಾ ಸಚ್ಚಾ ಸೌಧದ ಸಂಪೂರ್ಣ ಆಸ್ತಿ-ಪಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡು ನಷ್ಟ ತುಂಬಿಸಿಕೊಳ್ಳುವಂತೆ ಸೂಚನೆ ನೀಡಿದೆ.
ಹರ್ಯಾಣ ಸರ್ಕಾರಕ್ಕೆ ಈ ಬಗ್ಗೆ ಹರ್ಯಾಣ ಹೈಕೋರ್ಟ್ ಸೂಚನೆ ನೀಡಿದ್ದು, ಬಾಬಾ ರಾಮ್ ರಹೀಮ್ ರ ಅನುಯಾಯಿಗಳಿಂದಾದ ನಷ್ಟಕ್ಕೆ ಅವರ ಸಂಸ್ಥೆಯಿಂದಲೇ ಪರಿಹಾರ ಪಡೆಯುವಂತೆ ಸೂಚನೆ ನೀಡಿದೆ.
ಹೈಕೋರ್ಟ್ ಸೂಚನೆ ಬೆನ್ನಲ್ಲೇ ಎಚ್ಚೆತ್ತ ಡೇರಾ ಸಚ್ಚಾ ಸೌಧ!
ಅತ್ತ ಹರ್ಯಾಣ ಹೈಕೋರ್ಟ್ ಸಂಸ್ಛೆಯ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವಂತೆ ಸೂಚನೆ ನೀಡಿದ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿರುವ ಡೇರಾ ಸಚ್ಚಾ ಸೌಧ ಸಂಸ್ಥೆ, ಹಿಂಸಾಚಾರಕ್ಕೂ ತಮಗೂ ಯಾವುದೇ ರೀತಿಯ ಸಂಬಂಧವಿಲ್ಲ ಎಂದು ಹೇಳಿದೆ. ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಸಂಸ್ಥೆ ಬಾಬಾ ಅವರ ಅನುಯಾಯಿಗಳು ಶಾಂತಿ ಪ್ರಿಯರಾಗಿದ್ದಾರೆ. ಹೀಗಾಗಿ ಶಾಂತಿ ಕಾಪಾಡುವಂತೆ ಮನವಿ ಮಾಡುತ್ತಿದ್ದೇವೆ. ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಹಾನಿ ಮಾಡದಂತೆ ಸಂಸ್ಥೆ ಮನವಿ ಮಾಡಿಕೊಂಡಿದೆ.
ಇದೇ ವೇಳೆ ಹರ್ಯಾಣ ಹೈಕೋರ್ಟ್ ಆದೇಶಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಸಂಸ್ಥೆ, ತೀರ್ಪಿನಿಂದ ಸಂಸ್ಥೆಗೆ ಅನ್ಯಾಯವಾಗಿದೆ. ಆಶ್ರಮ ಎಂದಿಗೂ ಯಾರನ್ನೂ ಹಿಂಸಾಚಾರ ನಡೆಸುವಂತೆ ಹೇಳಿಲ್ಲ. ಹಿಂಸಾಚಾರಕ್ಕೂ ತಮಗೂ ಸಂಬಂಧವಿಲ್ಲ. ಹಿಂಸಾಚಾರದಲ್ಲಿ ವಿನಾಕಾರಣ ತಮ್ಮನ್ನು ಸಿಲುಕಿಸಲಾಗುತ್ತಿದೆ ಎಂದು ಹೇಳಿದೆ.