

ನವದೆಹಲಿ: ಡೇರಾ ಸಚಾ ಸೌದ ಸಂಸ್ಥೆಯ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಸಿಂಗ್ ಅವರು ಅತ್ಯಾಚಾರ ಪ್ರಕರಣದಲ್ಲಿ ದೋಷಿ ಎಂದು ಪಂಚಕುಲಾದ ಸಿಬಿಐ ನ್ಯಾಯಾಲಯ ತೀರ್ಪು ನೀಡಿದ ಬೆನ್ನಲ್ಲೇ ಹರ್ಯಾಣ ಮತ್ತು ಪಂಜಾಬ್ ನಲ್ಲಿ ಭುಗಿಲೆದ್ದಿರುವ ಹಿಂಸಾಚಾರ ರಾಷ್ಟ್ರರಾಜಧಾನಿ ದೆಹಲಿ ಹಾಗೂ ಉತ್ತರ ಪ್ರದೇಶಕ್ಕೂ ವ್ಯಾಪಿಸಿದೆ.
ದೆಹಲಿಯ ಆನಂದ್ ವಿಹಾರ್ ರೈಲು ನಿಲ್ದಾಣದ ಮೇಲೆ ದಾಳಿ ಮಾಡಿರುವ ಉದ್ರಿಕ್ತರು, ಅಲ್ಲಿದ್ದ ರೇವಾ ಎಕ್ಸ್ ಪ್ರೆಸ್ ರೈಲಿನ ಮೇಲೆ ದಾಳಿ ಮಾಡಿದ್ದಾರೆ. ಈ ವೇಳೆ ರೈಲಿನ ಎರಡು ಬೋಗಿಗಳಿಗೆ ಉದ್ರಿಕ್ತರು ಬೆಂಕಿ ಹಚ್ಚಿದ್ದಾರೆ. ಅದೃಷ್ಟವಶಾತ್ ದಾಳಿ ವೇಳೆ ರೈಲಿನಲ್ಲಿ ಯಾವುದೇ ಪ್ರಯಾಣಿಕರು ಇರಲಿಲ್ಲ ಎಂದು ತಿಳಿದುಬಂದಿದೆ. ಬೆಂಕಿಯ ಕೆನ್ನಾಲಿಗೆಗೆ ಎರಡೂ ಬೋಗಿಗಳು ಸಂಪೂರ್ಣ ಸುಟ್ಟು ಕರಕಲಾಗಿದೆ. ಅಂತೆಯೇ ದೆಹಲಿಯ ಮಂಡೋಲಿ ಮೇಲ್ಸೇತುವೆ ಮೇಲೆ ಚಲಿಸುತ್ತಿದ್ದ ಸರ್ಕಾರಿ ಬಸ್ ಮೇಲೂ ಉದ್ರಿಕ್ತರು ದಾಳಿ ಮಾಡಿದ್ದು, ಬಸ್ ಗೆ ಬೆಂಕಿ ಹಚ್ಚಿದ್ದಾರೆ. ಇದಲ್ಲದೆ ದೆಹಲಿ ಬಾಬು ಜಗಜೀವನ್ ಮೆಮೋರಿಯಲ್ ಆಸ್ಪತ್ರೆಯ ಬಸ್ ಮೇಲೂ ಬೆಂಕಿಯಿಂದ ದಾಳಿ ಮಾಡಲಾಗಿದೆ.
ಇದೇ ವೇಳೆ ಉತ್ತರ ಪ್ರದೇಶದಲ್ಲೂ ಹಿಂಸಾಚಾರ ವ್ಯಾಪಿಸಿದ್ದು, ಉತ್ತರ ಪ್ರದೇಶದ ಲೋನಿ ಪ್ರದೇಶದಲ್ಲಿದ್ದ 2 ಬಸ್ ಗಳಿಗೆ ಬೆಂಕಿ ಹಚ್ಚಲಾಗಿದೆ. ಇಬ್ಬರು ಉದ್ರಿಕ್ತ ಪ್ರತಿಭಟನಾಕಾರರು, ಬಲವಂತವಾಗಿ ಬಸ್ ನಿಲ್ಲಿಸಿ ಪ್ರಯಾಣಿಕರನ್ನು ಕೆಳಗಿಳಿಸಿ ಬಸ್ ಗೆ ಬೆಂಕಿ ಹಚ್ಚಿದ್ದಾರೆ ಎಂದು ತಿಳಿದುಬಂದಿದೆ.