ಬಿಹಾರ; ಪ್ರವಾಹ ಪೀಡಿತ ಬಿಹಾರ ರಾಜ್ಯದಲ್ಲಿ ವೈಮಾನಿಕ ಸಮೀಕ್ಷೆ ನಡೆಸಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರು, ರೂ.500 ಕೋಟಿ ಪರಿಹಾರ ಘೋಷಣೆ ಮಾಡಿದ್ದಾರೆಂದು ಶನಿವಾರ ತಿಳಿದುಬಂದಿದೆ.
ಭೀಕರ ಪ್ರವಾಹಕ್ಕೆ ತುತ್ತಾಗಿ ಆಪಾರ ಪ್ರಮಾಣದ ಆಸ್ತಿಪಾಸ್ತಿಗಳಿಗೆ ನಷ್ಟ ಎದುರಾಗಿರುವ ಹಿನ್ನಲೆಯಲ್ಲಿ ಸಂತ್ರಸ್ತರ ನೆರವಿಗೆ ಧಾವಿಸಿರುವ ಪ್ರಧಾನಿ ಮೋದಿಯವರು, ರೂ.500 ಕೋಟಿ ಪರಿಹಾರ ಘೋಷಣೆ ಮಾಡಿದ್ದಾರೆ. ಪ್ರವಾಹದಿಂದ ಎದುರಾದ ದುರಂತಗಳಿಂದ ಸಾವನ್ನಪ್ಪಿದ ಜನರ ಕುಟುಂಬಸ್ಥರಿಗೆ ರೂ.2 ಲಕ್ಷ ಹಾಗೂ ಗಾಯಾಳುಗಳಿಗೆ ರೂ.50 ಸಾವಿರ ಪರಿಹಾರ ನೀಡುವುದಾಗಿ ಮೋದಿಯವರು ಘೋಷಣೆ ಮಾಡಿದ್ದಾರೆ.
ಇಂದು ಬೆಳಿಗ್ಗೆ ಬಿಹಾರ ಪುರ್ಣಿಯಾಗೆ ಆಗಮಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಬಿಹಾರ ರಾಜ್ಯ ಮುಖ್ಯಮಂತ್ರಿ ನಿತೀಶ್ ಕುಮಾರ್ ಹಾಗೂ ಉಪ ಮುಖ್ಯಮಂತ್ರಿ ಸುಶೀಲ್ ಮೋದಿಯವರು ಹಾಗೂ ಸಚಿವರು ಆತ್ಮೀಯವಾಗಿ ಬಹಮಾಡಿಕೊಂಡರು. ಬಳಿಕ ಪ್ರಧಾನಿ ಮೋದಿಯವರು ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರೊಂದಿಗೆ ಜಂಟಿಯಾಗಿ ವೈಮಾನಿಕ ಸಮೀಕ್ಷೆಯನ್ನು ನಡೆಸಿದರು.
ವೈಮಾನಿಕ ಸಮೀಕ್ಷೆ ನಡೆಸಿದ ಬಳಿಕ ಅಧಿಕಾರಿಗಳೊಂದಿಗೆ ಮೋದಿಯವರು ಸಭೆ ನಡೆಸಿ ಮಾತುಕತೆ ನಡೆಸಿದರು. ಸಭೆಯಲ್ಲಿ ಪ್ರವಾಹ ಕುರಿತು ಸಂಪೂರ್ಣ ಮಾಹಿತಿಯನ್ನು ಒಳಗೊಂಡ ವರದಿಯನ್ನು ಬಿಹಾರ ಸರ್ಕಾರ ಪ್ರಧಾನ ಮೋದಿಯವರಿಗೆ ಸಲ್ಲಿಸಿತು.
ಬಳಿಕ ಮಾತನಾಡಿರುವ ಅವರು, ಬಿಹಾರ ರಾಜ್ಯಕ್ಕೆ ಬೇಕಾಗಿರುವ ಅಗತ್ಯ ನೆರವನ್ನು ಕೇಂದ್ರ ಸರ್ಕಾರ ಒದಗಿಸಿ ಕೊಡಲಿದೆ. ಅಲ್ಲದೆ, ರಾಜ್ಯದಲ್ಲಿ ಹಾನಿಯಾಗಿರುವ ಕುರುತು ಅಧ್ಯಯನ ಮಾಡುವುದಕ್ಕಾಗಿ ಕೇಂದ್ರದ ತಂಡವೊಂದನ್ನು ಕಳುಹಿಸಿಕೊಡುವುದಾಗಿ ಭರವಸೆ ನೀಡಿದ್ದಾರೆ.