"ನಾನು ಕೃಷ್ಣ, ನನ್ನ ತಮ್ಮ ಅರ್ಜುನ; ಇಲ್ಲಿಂದಲೇ ಬಿಜೆಪಿ ನಾಶ ಆರಂಭ"!

ಮಹಾಮೈತ್ರಿಕೂಟ ತ್ಯಜಿಸಿ ಬಿಜೆಪಿ ತೆಕ್ಕೆಗೆ ಜಾರಿದ ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರುದ್ಧ ಆರ್‌ಜೆಡಿ ಮುಖಂಡ ತೇಜ್ ಪ್ರತಾಪ್ ಯಾದವ್ ಅವರು ರಣ ಕಹಳ ಮೊಳಗಿಸಿದ್ದು, ನಾನು ಕೃಷ್ಣ, ನನ್ನ ತಮ್ಮ ತೇಜಸ್ವಿ ಯಾದವ್ ಅರ್ಜುನ; ಇಲ್ಲಿಂದಲೇ ಬಿಜೆಪಿ ನಾಶ ಆರಂಭವಾಗಲಿದೆ ಎಂದು ಹೇಳಿದ್ದಾರೆ.
ಬಿಜೆಪಿ ತೊಲಗಿಸಿ ರ್ಯಾಲಿಯಲ್ಲಿ ತೇಜ್ ಪ್ರತಾಪ್ ಯಾದವ್
ಬಿಜೆಪಿ ತೊಲಗಿಸಿ ರ್ಯಾಲಿಯಲ್ಲಿ ತೇಜ್ ಪ್ರತಾಪ್ ಯಾದವ್
Updated on: 

ಪಾಟ್ನಾ: ಮಹಾಮೈತ್ರಿಕೂಟ ತ್ಯಜಿಸಿ ಬಿಜೆಪಿ ತೆಕ್ಕೆಗೆ ಜಾರಿದ ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರುದ್ಧ ಆರ್‌ಜೆಡಿ ಮುಖಂಡ ತೇಜ್ ಪ್ರತಾಪ್ ಯಾದವ್ ಅವರು ರಣ ಕಹಳ ಮೊಳಗಿಸಿದ್ದು, ನಾನು ಕೃಷ್ಣ, ನನ್ನ ತಮ್ಮ ತೇಜಸ್ವಿ  ಯಾದವ್ ಅರ್ಜುನ; ಇಲ್ಲಿಂದಲೇ ಬಿಜೆಪಿ ನಾಶ ಆರಂಭವಾಗಲಿದೆ ಎಂದು ಹೇಳಿದ್ದಾರೆ.

ಆರ್ ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರು ಏರ್ಪಡಿಸಿದ್ದ ಬೃಹತ್ ರ್ಯಾಲಿಯಲ್ಲಿ ಪಾಲ್ಗೊಂಡು ಮಾತನಾಡಿದ ತೇಜ್ ಪ್ರತಾಪ್ ಯಾದವ್ ಅವರು, ಸಿಎಂ ನಿತೀಶ್ ಕುಮಾರ್, ಬಿಜೆಪಿ ಹಾಗೂ ಆರ್ ಎಸ್ ಎಸ್ ವಿರುದ್ಧ  ತೀವ್ರ ವಾಗ್ದಾಳಿ ನಡೆಸಿದರು. ಮಹಾಘಟಬಂಧನ ಸಂಖ್ಯ ತೊರೆದು ಬಿಜೆಪಿ ಜೊತೆ ಕೈ ಜೋಡಿಸಿರುವ ಸಿಎಂ ನಿತೀಶ್ ಕುಮಾರ್ ವಿರುದ್ಧ ಕಿಡಿಕಾರಿದ ತೇಜ್ ಪ್ರತಾಪ್, ನಿತೀಶ್ ಕುಮಾರ್ ಅವರು ಅರ್ಥ ಪ್ಯಾಂಟ್ ತೊಟ್ಟು ಬಿಜೆಪಿ  ನಾಯಕ ತೊಡೆ ಮೇಲೆ ಕುಳಿತಿದ್ದಾರೆ ಎಂದು ವ್ಯಂಗ್ಯವಾಡಿದರು. ನಿತೀಶ್ ಕುಮಾರ್ ಅವರಿಗೆ ಅರ್ಧ ತಲೆ ಇರುವುದರಿಂದಲೇ ಅವರು ಅರ್ಧ ಪ್ಯಾಂಟ್ ತೊಟ್ಟಿದ್ದು, ನಿತೀಶ್ ಮಾಡಿದ ಮೋಸಕ್ಕೆ ಬಿಹಾರದ ಜನತೆ ಶೀಘ್ರದಲ್ಲೇ ಬುದ್ಧಿ  ಕಲಿಸಲಿದ್ದಾರೆ ಎಂದು ಹೇಳಿದರು.

ಇದೇ ವೇಳೆ ಬಿಜೆಪಿ ಹಾಗೂ ಕಾಂಗ್ರೆಸ್ ವಿರುದ್ಧ ಹರಿಹಾಯ್ದ ತೇಜ್ ಪ್ರತಾಪ್ ಆರ್ ಎಸ್ ಎಸ್ ಮುಖಂಡ ಮೋಹನ್ ಭಾಗ್ವತ್ ಅವರನ್ನು ಲೇವಡಿ ಮಾಡಿದರು. ಇಷ್ಟು ಹಿರಿಯರಾಗಿದ್ದೀರಿ...ಈ ವಯಸ್ಸಿನಲ್ಲೂ ಅರ್ಧ ಪ್ಯಾಂಟ್  ತೊಡುತ್ತೀರಿ ನಿಮಗೆ ನಾಚಿಕೆಯಾಗುವುದಿಲ್ಲವೇ ಎಂದು ತೇಜ್ ಪ್ರತಾಪ್ ಹೇಳಿದರು. ಅಲ್ಲದೆ ತಮ್ಮ ಭಾಷಣದ ನಡುವೆಯೇ ತೇಜ್ ಪ್ರತಾಪ್ ಶಂಖಾನಾದ ಮೊಳಗಿಸುವ ಮೂಲಕ ಸಭಿಕರ ಕೇಂದ್ರ ಬಿಂದುವಾದರು.

ನಿತೀಶ್ ವಿರುದ್ಧ ಲಾಲು ಕಿಡಿ

ಇದೇ ವೇಳೆ ಮಹಾಮೈತ್ರಿಕೂಟ ತ್ಯಜಿಸಿ ಬಿಜೆಪಿ ತೆಕ್ಕೆಗೆ ಜಾರಿದ ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರುದ್ಧ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ವಾಗ್ದಾಳಿ ನಡೆಸಿದ್ದಾರೆ. ಸಿಎಂ ನಿತೀಶ್ ಕುಮಾರ್ ರಾಜ್ಯದ ಜನತೆಗೆ ಮೋಸ ಮಾಡಿದ್ದು, ಮುಂಬರುವ ಚುನಾವಣೆಯಲ್ಲಿ ಜನತೆ ತಕ್ಕ ಪಾಠ ಕಲಿಸಲಿದ್ದಾರೆ. ಕೇಂದ್ರದಲ್ಲಿ ಅಧಿಕಾರದಲ್ಲಿರುವ ಮೋದಿ ಸರಕಾರ ಇಲ್ಲಿನ ಸರ್ಕಾರಗಳನ್ನು ಅಸ್ಥಿರಗೊಳಿಸುತ್ತಿದೆ ಎಂದು ಆರೋಪಿಸಿದ್ದಾರೆ.

ಬಿಜೆಪಿಯನ್ನು ದೇಶದಿಂದ ಓಡಿಸಬೇಕು ಎಂದರೆ ಮಾತ್ರ ದೇಶ ಉಳಿಯುತ್ತದೆ. ವಿಪಕ್ಷಗಳು ಒಗ್ಗಟ್ಟಿನಿಂದ ಹೋರಾಟ ನಡೆಸುವ ಪರಿಸ್ಥಿತಿ ಎದುರಾಗಿದೆ. 2019ರ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರದಿಂದ ಕಿತ್ತೆಸೆಯುವುದೇ  ನಮ್ಮ ಪರಮ ಗುರಿ ಎಂದು ಲಾಲು ಗುಡುಗಿದ್ದಾರೆ.

ಭಾನುವಾರ ಪಾಟ್ನಾದಲ್ಲಿ ಆಯೋಜಿಸಲಾದ ಬಿಜೆಪಿ ತೊಲಗಿಸಿ ಬೃಹತ್ ರ್ಯಾಲಿಯಲ್ಲಿ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, ಕಾಂಗ್ರೆಸ್ ನಾಯಕ ಗುಲಾಮ್ ನಬೀ ಆಜಾದ್, ಪ.ಬಂಗಾಳ ಸಿಎಂ ಮಮತಾ  ಬ್ಯಾನರ್ಜಿ ಹಾಗೂ ಜೆಡಿಯುನ ಬಂಡಾಯ ನಾಯಕ ಶರದ್ ಯಾದವ್ ಮತ್ತು ಮತ್ತೋರ್ವ ನಾಯಕ ಅಲಿ ಅನ್ವರ್ ಭಾಗವಹಿಸಿದ್ದರು. ಆರ್‌ಜೆಡಿಯೊಂದಿಗೆ ಮೈತ್ರಿ ಮುರಿದ ನಂತರ ಶರದ್ ತಮ್ಮದೇ ಹಾದಿ ಕಂಡುಕೊಂಡಿದ್ದು, ಲಾಲೂ  ರ್ಯಾಲಿಯಲ್ಲಿ ಭಾಗವಹಿಸಿದರೆ ಜೆಡಿಯು ಪಕ್ಷದ ನಿಯಮಗಳನ್ನು ಉಲ್ಲಂಘಿಸಿದಂತೆ ಎಂದು ನಿತೀಶ್ ಮುನ್ನೆಚ್ಚರಿಕೆ ನೀಡಿದ್ದರು. ಈ ಎಚ್ಚರಿಕೆಯ ಹೊರತಾಗಿಯೂ ಶರದ್ ಯಾದವ್ ರ್ಯಾಲಿ ಪಾಲ್ಗೊಂಡು ಅಚ್ಚರಿ ಮೂಡಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com