ತಲಸರಿ: 30 ವರ್ಷದ ಬಿಜೆಪಿ ಕಾರ್ಯಕರ್ತರೊಬ್ಬರನ್ನು ಗುರುವಾರ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಕೇರಳದ ಕಣ್ಣೂರ್ ಜಿಲ್ಲೆಯಲ್ಲಿ ನಡೆದಿದ್ದು, ಸಿಪಿಐ(ಎಂ) ಕಾರ್ಯಕರ್ತರು ಈ ಕೃತ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.
ಮತ್ತೊಂದು ಘಟನೆಯಲ್ಲಿ ತಲಿಪರಂಬಾದಲ್ಲಿರುವ ಆರ್ಎಸ್ಎಸ್ ಕಚೇರಿ ಮೇಲೆ ದೇಶಿ ನಿರ್ಮಿತ ಕಚ್ಚಾ ಬಾಂಬ್ ಎಸೆಯಲಾಗಿದ್ದು, ಘಟನೆಯಲ್ಲಿ ಯಾರೊಬ್ಬರು ಗಾಯಗೊಂಡಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಬಿಜೆಪಿ ಕಾರ್ಯಕರ್ತ ಸಂತೋಷ್ ಎಂಬುವವರು ಅಂದಲೂರ್ ನ ತಮ್ಮ ನಿವಾಸದಲ್ಲಿ ಒಬ್ಬಂಟಿಯಾಗಿದ್ದ ವೇಳೆ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಸಂತೋಷ್ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯದಲ್ಲಿಯೇ ಸಾವನ್ನಪಿದ್ದಾರೆ ಎಂದು ಕಣ್ಣೂರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪಿ.ಫಿಲಪ್ ಅವರು ಸುದ್ದಿ ಸಂಸ್ಥೆಗೆ ತಿಳಿಸದ್ದಾರೆ.
ಆ ಪ್ರದೇಶದಲ್ಲಿ ಸದ್ಯ ಉದ್ವಿಗ್ನ ಪರಿಸ್ಥಿತಿ ಇದೆ ಎಂದು ಫಿಲಿಪ್ ತಿಳಿಸಿದ್ದಾರೆ.
ಸಂತೋಷ್ ಅಂದಲೂರ್ ಬಿಜೆಪಿ ಬೂತ್ ಅಧ್ಯಕ್ಷರಾಗಿದ್ದು, ಕಳೆದ ಬಾರಿ ಸ್ಥಳೀಯ ಸಂಸ್ಥೆ ಚುನಾವಣೆಗೆ ಸ್ಪರ್ಧಿಸಿದ್ದರು.