

ಚೆನ್ನೈ: ಜಲ್ಲಿಕಟ್ಟು ವಿವಾದ ತಾರಕಕ್ಕೇರಿದ್ದು, ಪ್ರತಿಭಟನಾ ನಿರತರ ಮೇಲಿನ ಲಾಠಿ ಚಾರ್ಜ್ ಗೆ ಡಿಎಂಕೆ ಪಕ್ಷ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ವಿದ್ಯಾರ್ಥಿಗಳ ಮೇಲಿನ ಹಲ್ಲೆ ಅಕ್ಷಮ್ಯ ಎಂದು ಅಭಿಪ್ರಾಯ ಪಟ್ಟಿದೆ.
ನಿನ್ನೆ ಸುಗ್ರೀವಾಜ್ಞೆ ತರುವ ಮೂಲಕ ತಮಿಳುನಾಡು ಸರ್ಕಾರ ಜಲ್ಲಿಕಟ್ಟು ಆಚರಣೆಗೆ ಅನುವು ಮಾಡಿಕೊಟ್ಟಿತ್ತು. ಹೀಗಾಗಿ ಇಂದು ಚೆನ್ನೈನ ಮರೀನಾ ಬೀಚ್ ನಲ್ಲಿ ಪ್ರತಿಭಟನೆಯಲ್ಲಿ ತೊಡಗಿದ್ದ ಪ್ರತಿಭಟನಾಕಾರರನ್ನು ಪೊಲೀಸರು ತೆರವುಗೊಳಿಸಲು ಮುಂದಾದರು. ಆದರೆ ಪೊಲೀಸರ ವಿರುದ್ಧ ಪ್ರತಿಭಟನಾಕಾರರು ವಾಗ್ವಾದ ನಡೆಸಿದ ಪರಿಣಾಮ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದು, ಈ ವೇಳೆ ಸಾಕಷ್ಟು ಪ್ರತಿಭಟನಾಕಾರರಿಗೆ ಗಾಯಗಳಾಗಿವೆ.
ಇನ್ನು ಪ್ರತಿಭಟನಾಕಾರರ ಮೇಲಿನ ಲಾಠಿಚಾರ್ಜ್ ಪ್ರಕರಣ ಇದೀಗ ರಾಜಕೀಯ ಮೇಲಾಟಕ್ಕೆ ಕಾರಣವಾಗಿದ್ದು, ವಿದ್ಯಾರ್ಥಿಗಳ ಮೇಲಿನ ಹಲ್ಲೆಯನ್ನು ಡಿಎಂಕೆ ಖಂಡಿಸಿದೆ. ಈ ಬಗ್ಗೆ ಮಾತನಾಡಿರುವ ಡಿಎಂಕೆ ಪಕ್ಷದ ಮುಖಂಡ ಎಂಕೆ ಸ್ಟಾಲಿನ್ ಅವರು, ಪ್ರತಿಭಟನೆಯನ್ನು ನಿಯಂತ್ರಿಸುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದ್ದು, ವಿದ್ಯಾರ್ಥಿಗಳನ್ನು ನಿಯಂತ್ರಿಸಲು ಅವರ ಮೇಲೆ ಮಾಡಿರುವ ಹಲ್ಲೆ ಖಂಡನೀಯ ಮತ್ತು ಅಕ್ಷಮ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ.
ಮಾನವ ಸರಪಳಿ ನಿರ್ಮಿಸಿ ಲಾಠಿಚಾರ್ಜ್ ಥಂಡಿಸಿದ ವಿದ್ಯಾರ್ಥಿಗಳು
ಜಲ್ಲಿಕಟ್ಟು ಆಚರಣೆಗಾಗಿ ಶಾಶ್ವತ ಕ್ರಮಕ್ಕೆ ಆಗ್ರಹಿಸಿ ಚೆನ್ನೈನ ಮರೀನಾ ಬೀಚ್ ನಲ್ಲಿ ನಡೆಯುತ್ತಿರುವ ಪ್ರತಿಭಟನೆ ತಾರಕಕ್ಕೇರಿದ್ದು, ಸೋಮವಾರ ಪೊಲೀಸರು ಪ್ರತಿಭಟನಾಕಾರರನ್ನು ಚದುರಿಸುವ ಪ್ರಯತ್ನ ಮಾಡುತ್ತಿದ್ದಂತೆಯೇ ಹಿಂಸಾರೂಪಕ್ಕೆ ತಿರುಗಿದೆ. ಪರಿಣಾಮ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ವಾಗ್ವಾದ ಸಂಭವಿಸಿ ಲಾಠಿಚಾರ್ಜ್ ಕೂಡ ನಡೆದಿದೆ. ಪೊಲೀಸರ ಕ್ರಮವನ್ನು ವಿರೋಧಿಸಿ ಇದೀಗ ಮರೀನಾ ಬೀಚ್ ನಲ್ಲಿ ವಿದ್ಯಾರ್ಥಿಗಳು ಮಾನವ ಸರಪಳಿ ನಿರ್ಮಿಸಿ ತಮ್ಮ ಪ್ರತಿಭಟನೆಯನ್ನು ಮುಂದುವರೆಸಿದ್ದಾರೆ. ಚೆನ್ನೈನಲ್ಲಿ ಮಾತ್ರವಲ್ಲದೇ ಮಧುರೈನ ಅಲಂಗನೂರ್ ನಲ್ಲಿಯೂ ಪ್ರತಿಭಟನಾಕಾರರ ಮೇಲೆ ಲಾಠಿ ಚಾರ್ಜ್ ನಡೆದಿದ್ದು, ಪೊಲೀಸರ ಕ್ರಮವನ್ನು ಪ್ರತಿಭಟನಾಕಾರರು ಖಂಡಿಸಿದ್ದು, ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸುತ್ತಿದ್ದಾರೆ.