

ಪಾಟ್ನಾ: ಗುರುವಾರ 6ನೇ ಬಾರಿಗೆ ಬಿಹಾರ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ನಿತೀಶ್ ಕುಮಾರ್ ಅವರು ಶುಕ್ರವಾರ ಬಿಹಾರ ವಿಧಾನಸಭೆಯಲ್ಲಿ ಬಹುಮತ ಸಾಬೀತು ಪಡಿಸಬೇಕಿದೆ.
ಈಗಾಗಲೇ ವಿಶ್ವಾಸ ಮತ ಯಾಚನೆಗೆ ಬಿಹಾರ ವಿಧಾನಸಭೆಯಲ್ಲಿ ಸಕಲ ಸಿದ್ಧತೆ ಪೂರ್ಣಗೊಂಡಿದ್ದು, ರಾಜಕೀಯ ಪಕ್ಷಗಳು ಅಂತಿಮ ಕ್ಷಣದ ಕಸರತ್ತಿನಲ್ಲಿ ತೊಡಗಿವೆ. ಇನ್ನು ತನ್ನ ಸಖ್ಯ ತೊರೆದಿರುವ ಜೆಡಿಯುಗೆ ಯಾವುದೇ ಕಾರಣಕ್ಕೂ ಬೆಂಬಲ ನೀಡದಿರವು ಲಾಲು ಪ್ರಸಾದ್ ಯಾದವ್ ನೇತೃತ್ವದ ಆರ್ ಜೆಡಿ ಪಕ್ಷ ನಿರ್ಧರಿಸಿದ್ದು, ನಿನ್ನೆ ಸಂಜೆ ನಡೆದ ಮ್ಯಾರಥಾನ್ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದೆ. ಅಂತೆಯೇ ಕಾಂಗ್ರೆಸ್ ಮಿತ್ರ ಪಕ್ಷಗಳೂ ಕೂಡ ನಿತೀಶ್ ಕುಮಾರ್ ಬಿಜೆಪಿ ಮೈತ್ರಿ ಸರ್ಕಾರದ ವಿರುದ್ಧ ಮತ ಹಾಕಲು ನಿರ್ಧರಿಸಿವೆ.
ಇನ್ನು 243 ಸದಸ್ಯ ಬಲದ ಬಿಹಾರ ವಿಧಾನಸಭೆಯಲ್ಲಿ ಜೆಡಿಯು ಮತ್ತು ಬಿಜೆಪಿ ಮೈತ್ರಿ ಕೂಟದ ಸರ್ಕಾರಕ್ಕೆ ಬಹುಮತ ಸಾಬೀತು ಪಡಿಸಲು 122 ಸದಸ್ಯರ ಬೆಂಬಬಲವಿದ್ದರೆ ಸಾಕು. ಆದರೆ ಬಿಜೆಪಿ-ಜೆಡಿಯು ಮೈತ್ರಿಕೂಟಕ್ಕೆ 132 ಸದಸ್ಯರ ಬೆಂಬಲವಿದೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ತೀರಾ ಸಲೀಸಾಗಿ ಬಹುಮತ ಸಾಬೀತು ಪಡಿಸಿ ಸರ್ಕಾರ ಉಳಿಸಿಕೊಳ್ಳಲಿದ್ದಾರೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಇನ್ನು ಪಕ್ಷಗಳ ಬಲಾಬಲದ ವಿಚಾರಕ್ಕೆ ಬರುವುದಾದರೆ ಬಿಹಾರದಲ್ಲಿ ಆರ್ ಜೆಡಿ ಪಕ್ಷ ಅತೀ ಹೆಚ್ಚು ಸದಸ್ಯ ಬಲವನ್ನು ಹೊಂದಿದೆ. ಆರ್ ಜೆಡಿ ಬಳಿ ಒಟ್ಟು 80 ಶಾಸಕರಿದ್ದು, ನಿತೀಶ್ ಕುಮಾರ್ ನೇತೃತ್ವದ ಜೆಡಿಯು 71 ಶಾಸಕರನ್ನು ಹೊಂದಿದೆ. ಇನ್ನು ಬಿಜೆಪಿ ಮೈತ್ರಿಕೂಟದ ಬಳಿ 58 ಶಾಸಕರ ಬಲವಿದ್ದು, ಕಾಂಗ್ರೆಸ್ ಬಳಿ 27 ಶಾಸಕರಿದ್ದಾರೆ. ಅಂತೆಯೇ 7 ಮಂದಿ ಪಕ್ಷೇತರ ಶಾಸಕರು ಕೂಡ ಇದ್ದಾರೆ ಎಂದು ತಿಳಿದುಬಂದಿದೆ. ಜೆಡಿಯು ಪಕ್ಷದ 71 ಮತ್ತು ಬಿಜೆಪಿ ಮಿತ್ರಕೂಟದ 58 ಮಂದಿ ಶಾಸಕರನ್ನು ಸೇರಿಸಿದರೆ 129 ಆಗಲಿದ್ದು, ನಿತೀಶ್ ಕುಮಾರ್ ಗೆ ಅಗತ್ಯವಿರುವ ಮ್ಯಾಜಿಕ್ ಸಂಖ್ಯೆಗಿಂತಲೂ 7 ಮಂದಿ ಶಾಸಕರ ಬೆಂಬಲ ಅಧಿಕವಿದೆ.
ಹೀಗಾಗಿ ಸಿಎಂ ನಿತೀಶ್ ಕುಮಾರ್ ಅವರು ನಿರಾಯಾಸವಾಗಿ ಬಹುಮತ ಸಾಬೀತು ಪಡಿಸಲಿದ್ದಾರೆ ಎಂದು ತಿಳಿದುಬಂದಿದೆ.