ಬಿಹಾರ 'ವಿಶ್ವಾಸ' ಗೆದ್ದ ಜೆಡಿಯು-ಬಿಜೆಪಿ ಸರ್ಕಾರ: ಸಿಎಂ ನಿತೀಶ್ ಕುಮಾರ್ ಬಹುಮತ ಸಾಬೀತು

ನಿರೀಕ್ಷೆಯಂತೆಯೇ ಬಿಹಾರ ವಿಧಾನಸಭೆಯಲ್ಲಿ ಸಿಎಂ ನಿತೀಶ್ ಕುಮಾರ್ ಅವರು ಶುಕ್ರವಾರ ವಿಶ್ವಾಸ ಮತ ಗೆದ್ದಿದ್ದಾರೆ.
ನಿತೀಶ್ ಕುಮಾರ್, ಸುಶೀಲ್ ಕುಮಾರ್ ಮೋದಿ (ಸಂಗ್ರಹ ಚಿತ್ರ)
ನಿತೀಶ್ ಕುಮಾರ್, ಸುಶೀಲ್ ಕುಮಾರ್ ಮೋದಿ (ಸಂಗ್ರಹ ಚಿತ್ರ)
Updated on: 

ಪಾಟ್ನಾ: ನಿರೀಕ್ಷೆಯಂತೆಯೇ ಬಿಹಾರ ವಿಧಾನಸಭೆಯಲ್ಲಿ ಸಿಎಂ ನಿತೀಶ್ ಕುಮಾರ್  ಅವರು ಶುಕ್ರವಾರ ವಿಶ್ವಾಸ ಮತ ಗೆದ್ದಿದ್ದಾರೆ.

ಜೆಡಿಯು-ಬಿಜೆಪಿ ಮೈತ್ರಿ ಸರ್ಕಾರದ ಪರ ಒಟ್ಟು 131 ಶಾಸಕರು ಮತ ಚಲಾಯಿಸಿದ್ದು, ಸರ್ಕಾರದ ವಿರುದ್ಧ 108 ಶಾಸಕರು ಮತ ಚಲಾಯಿಸಿದ್ದಾರೆ ಎಂದು ತಿಳಿದುಬಂದಿದೆ. ಸರ್ಕಾರದ ಉಳಿವಿಗಾಗಿ 122 ಶಾಸಕರ ಬೆಂಬಲದ ಅಗತ್ಯವಿದ್ದು, ನಿತೀಶ್ ಕುಮಾರ್ ಸರ್ಕಾರಕ್ಕೆ 131 ಶಾಸಕರು ಬೆಂಬಲ ನೀಡಿರುವುದರಿಂದ ಸಿಎಂ ಆಗಿ ನಿತೀಶ್ ಕುಮಾರ್ ಮುಂದುವರೆಯಲಿದ್ದಾರೆ.

ಹೀಗಾಗಿ ಈ ಹಿಂದೆ ಉಪ ಮುಖ್ಯಮಂತ್ರಿಯಾಗಿದ್ದ ಆರ್ ಜೆಡಿ ಪಕ್ಷದ ತೇಜಸ್ವಿ ಯಾದವ್ ವಿಪಕ್ಷ ನಾಯಕರಾಗಿ ಮುಂದುವರೆಯಲಿದ್ದು, ವಿಪಕ್ಷ ನಾಯಕರಾಗಿದ್ದ ಸುಶೀಲ್ ಕುಮಾರ್ ಮೋದಿ ಉಪ ಮುಖ್ಯಮಂತ್ರಿಯಾಗಿ ಮುಂದುವರೆಯಲಿದ್ದಾರೆ. ಆರ್ ಜೆಡಿ, ಕಾಂಗ್ರೆಸ್ ಪಕ್ಷಗಳನ್ನೊಳಗೊಂಡ ಮಹಾಘಟ್ ಬಂಧನ್ ಮೈತ್ರಿಕೂಟದಿಂದ ಹೊರ ಬಂದಿದ್ದ ನಿತೀಶ್ ಕುಮಾರ್ ಅವರು ತಮ್ಮ ಸಿಎಂ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು. ಬಳಿಕ ಬಿಜೆಪಿ ಜೊತೆಗೂಡಿ ಸರ್ಕಾರ ರಚನೆ ಮಾಡಿದ್ದಾರೆ.

ಇತ್ತ ನಿತೀಶ್ ಕುಮಾರ್ ಬಹುಮತ ಸಾಬೀತು ಪಡೆಸುತ್ತಿದ್ದಂತೆಯೇ ಅತ್ತ ವಿಧಾನಸಭೆ ಹೊರಗಿದ್ದ ಜೆಡಿಯು ಮತ್ತು ಬಿಜೆಪಿ ಕಾರ್ಯಕರ್ತರು ಪರಸ್ಪರ ಸಿಹಿ ಹಂಚಿ ಮತ್ತು ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ.

ವಿಶ್ವಾಸ ಮತಕ್ಕೂ ಮುನ್ನ ಹೈಡ್ರಾಮಾ!
ಏತನ್ಮಧ್ಯೆ ನಿತೀಶ್ ಕುಮಾರ್ ಅವರು ವಿಶ್ವಾಸ ಮತ ಯಾಚನೆಗೂ ಮುನ್ನ ಬಿಹಾರ ವಿಧಾನಸಭೆಯಲ್ಲಿ ದೊಡ್ಡ ಡ್ರಾಮಾವೇ ನಡೆದಿದ್ದು, ಭಾರಿ ಕೋಲಾಹಲದ ನಡುವೆಯೇ ವಿಶ್ವಾಸ ಮತ ಯಾಚನೆಗೆ ನಿರ್ಣಯ ಮಂಡಿಸಲಾಯಿತು. ಇದಕ್ಕೂ ಮೊದಲು ಉಪ ಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ಅವರು ಸಭೆಯನ್ನು ಉದ್ದೇಶಿಸಿ ಮಾತನಾಡಲು ಮುಂದಾದಾಗ ಆರ್ ಜೆಡಿ ಸದಸ್ಯರು ಭಾರಿ ಕೋಲಾಹಲವೆಬ್ಬಿಸಿದರು. ಇದರ ನಡುವೆಯೂ ಮಾತನಾಡಿದ ಉಪ ಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ಅವರು, ಮೊದಲಿಗೆ ಆರ್ ಜೆಡಿ ಮತ್ತು ಕಾಂಗ್ರೆಸ್ ಪಕ್ಷಗಳಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಅವರ ಕಾರ್ಯಗಳಿಂದಾಗಿಯೇ ನಾನು ಇಂದು ಈ ಸ್ಥಾನದಲ್ಲಿ ನಿಂತಿದ್ದೇನೆ ಎಂದು ಹೇಳಿದರು.

ಇದೇ ವೇಳೆ ತೇಜಸ್ವಿಯಾದವ್ ವಿರುದ್ಧ ಕಿಡಿಕಾರಿದ ಸುಶೀಲ್ ಕುಮಾರ್ ಮೋದಿ ಅವರು, ಬಿಹಾರದ ಜನತೆ ತಮ್ಮ ಜನಾದೇಶ ನೀಡಿರುವುದು. ಉತ್ತಮ ಆಡಳಿತ ನೀಡಲಿ ಎಂದು. ಆದರೆ ಕೆಲವರು ಜನಾದೇಶವನ್ನು ತಪ್ಪು ತಪ್ಪಾಗಿ ಕಲ್ಪಿಸಿಕೊಂಡು ಜನಾದೇಶವನ್ನು ತಮ್ಮ ಬೇನಾಮಿ ಆಸ್ತಿ ರಕ್ಷಣೆಗೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಕಳೆದ 26 ವರ್ಷಗಳಲ್ಲಿ 26 ಬೇನಾಮಿ ಆಸ್ತಿಗಳಿಗೆ ಮಾಲೀಕರಾಗಿದ್ದಾರೆ. ಇದಕ್ಕಾಗಿ ಜನ ಬೆಂಬಲ ನೀಡಿರಲಿಲ್ಲ ಎಂದು ಅವರು ಕಿಡಿಕಾರಿದರು.

ವಿಶ್ವಾಸಮತ ಗೆದ್ದ ನಂತರ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಸುಶೀಲ್ ಕುಮಾರ್ ಮೋದಿ, ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಸರ್ಕಾರ ವಿಶ್ವಾಸ ಮತ ಗೆದ್ದಿರುವುದಕ್ಕೆ ಸಂತಸವಿದೆ. ಸಂಪುಟ ನಡೆಸುವ ಬಗ್ಗೆ ಸದ್ಯದಲ್ಲಿಯೇ ಚರ್ಚೆ ನಡೆಸಿ ನಿರ್ಧರಿಸುತ್ತೇವೆ ಎಂದು ಹೇಳಿದರು.

ಕಾಂಗ್ರೆಸ್ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿ ಅವರಲ್ಲಿ ಬಹುಮತವಿದ್ದಿದ್ದರೆ ಇಂದು ಸದನದಲ್ಲಿ ಸಾಬೀತುಪಡಿಸಬೇಕಾಗಿತ್ತು. ನೂತನ ಮೈತ್ರಿಗೆ ಸ್ಪಷ್ಟ ಇಂದು ಸ್ಪಷ್ಟ ಬಹುಮತ ಸಿಕ್ಕಿದ್ದು ಅಸಹದ ಮೈತ್ರಿ ಸ್ವಾಭಾವಿಕವಾಗಿ ಇಂದು ಸತ್ತು ಹೋಗಿದೆ ಎಂದರು. ಅಸಹಜ ಮೈತ್ರಿ ಹೆಚ್ಚು ಕಾಲ ನಡೆಯುವುದಿಲ್ಲ ಎಂದು ನಾವು ಹೇಳುತ್ತಿದ್ದೆವು ಎಂದರು.

ಆರ್ ಜೆಡಿ ವಿರುದ್ಧ ಇದೇ ಸಂದರ್ಭದಲ್ಲಿ ವಾಗ್ದಾಳಿ  ನಡೆಸಿದ ಅವರು, ತಮ್ಮ 28ನೇ ವಯಸ್ಸಿನಲ್ಲಿಯೇ ತೇಜಸ್ವಿ ಯಾದವ್ ಅಷ್ಟೊಂದು ಸಂಪತ್ತು ಹೇಗೆ ಮಾಡಿಕೊಂಡರು ಎಂದು ಅವರಿಂದ ಮತ್ತು ಲಾಲು ಪ್ರಸಾದ್ ಯಾದವ್ ರಿಂದ ತಿಳಿದುಕೊಳ್ಳಲು ಜನತೆ ನಿರೀಕ್ಷಿಸುತ್ತಿದ್ದಾರೆ.ನಿತೀಶ್ ಕುಮಾರ್ ಅವರು ಸರಿಯಾದ ಸಮಯದಲ್ಲಿ ಸರಿಯಾದ ನಿರ್ಧಾರ ತೆಗೆದುಕೊಳ್ಳುವ ಮೂಲಕ ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸಲು ನಿರ್ಧರಿಸಿದ್ದಾರೆ. ಲಾಲೂ ಪ್ರಸಾದ್ ಯಾದವ್ ಮುಂದೆ ತಲೆಬಾಗಲಿಲ್ಲ ಎಂದು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com