ನವದೆಹಲಿ: ವರದಕ್ಷಿಣೆ ಕಿರುಕುಳ ಸಂಬಂಧ ಕಾನೂನು ದುರುಪಯೋಗವಾಗುತ್ತಿರುವ ಹಿನ್ನೆಲೆಯಲ್ಲಿ ಅದನ್ನು ತಡೆಗಟ್ಟಲು ಮಹತ್ವದ ನಿರ್ದೇಶನಗಳನ್ನು ಸುಪ್ರೀಂ ಕೋರ್ಟ್ ನೀಡಿದೆ.
ವರದಕ್ಷಿಣೆ ಕಿರುಕುಳ ಆರೋಪದ ಪ್ರಕರಣಗಳಲ್ಲಿ ದೌರ್ಜನ್ಯಕ್ಕೆ ಒಳಗಾಗುವ
ಮಹಿಳೆಯರು ನೀಡಿದ ದೂರನ್ನು ನಾಗರಿಕ ಸಮಾಜದ ಸದಸ್ಯರು ಇರುವ ಸಮಿತಿ ಪರಿಶೀಲಿಸದೆ ಯಾರನ್ನೂ ಬಂಧಿಸಬಾರದು ಎಂದು ಕೋರ್ಟ್ ಹೇಳಿದೆ.
ದೂರುಗಳ ಪರಿಶೀಲನೆಗಾಗಿ ಪ್ರತಿ ಜಿಲ್ಲೆಯಲ್ಲಿಯೂ ಸಮಿತಿಯನ್ನು ರಚಿಸುವಂತೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ. ಈ ಸಮಿತಿಯಲ್ಲಿ ನಾಗರಿಕ ಸಮಾಜದ ಸದಸ್ಯರು, ಅಧಿಕಾರಿಗಳ ಪತ್ನಿಯರು, ನಿವೃತ್ತ ಅಧಿಕಾರಿಗಳು ಮತ್ತು ಕಾನೂನು ಸ್ವಯಂ ಸೇವಕರು ಇರಬೇಕು ಎಂದು ತಿಳಿಸಿದೆ.
ದಂಪತಿ ಮತ್ತು ಅವರ ಕುಟುಂಬದ ಸದಸ್ಯರನ್ನು ಕರೆಸಿ ವಿಷಯದ ಸಂಬಂಧ ಸಮಿತಿ ಚರ್ಚಿಸಬೇಕು. ನಂತರ ಸಮಿತಿ ವರದಿಯನ್ನು ಸ್ಥಳೀಯ ಮ್ಯಾಜಿಸ್ಟ್ರೇಟ್ ಗೆ ಸಲ್ಲಿಸುವಂತೆ ಸೂಚಿಸಿದೆ. ಒಂದು ವೇಳೆ ಗಂಡನ ತಪ್ಪು ಇರುವುದು ಕಂಡು ಬಂದರೇ ಬಂಧಿಸಲು ಸಮಿತಿ ಸೂಚಿಸಿದ ನಂತರವಷ್ಟೇ ಬಂಧಿಸಬೇಕು ಎಂದು ಕೋರ್ಟ್ ತಿಳಿಸಿದೆ.
ನಂತರ ಸಮಿತಿಯಿಂದ ಪಡೆದ ವರದಿಯನ್ನು ತನಿಖಾಧಿಕಾರಿ ಪರಿಶೀಲಿಸಿದ ನಂತರ ಅಥವಾ ನ್ಯಾಯಾಧೀಶರು ಸ್ವಂತ ಅರ್ಹತೆಯ ಮೇಲೆ ಶಿಕ್ಷೆ ನೀಡಬಹುದು.
ಪತಿ ವಿರುದ್ಧ ಪ್ರಾಥಮಿಕ ತನಿಖೆ ನಡೆಸಿ, ಆತನ ಮೇಲಿನ ಆರೋಪ ಸಾಬೀತು ಮಾಡುವ ಸಾಕ್ಷ್ಯ ದೊರೆತ ಅನಂತರವಷ್ಟೇ ಬಂಧಿಸಬೇಕು,' ಎಂದಿದೆ. ಅನಗತ್ಯ ಬಂಧನ ಅಥವಾ ಒರಟು ವಿಚಾರಣೆಯಿಂದ ರಕ್ಷಣೆ ಒದಗಿಸಲು ನ್ಯಾಯಾಲಯವು ಈ ಕ್ರಮ ಕೈಗೊಂಡಿದೆ’ ಎಂದು ಪೀಠ ಹೇಳಿದೆ.